ಜಿನೇವ, ಡಿ.೧: ಸ್ವಿಝರ್ಲ್ಯಾಂಡ್ನಲ್ಲಿ ಮಿನಾರ ನಿರ್ಮಾಣವನ್ನು ನಿಷೇಧಿಸಿದ ಜನಾಂಗೀಯವಾದಿ ಕ್ರಮವು ವಿಶ್ವಾದ್ಯಂತ ತೀವ್ರ ಖಂಡನೆಗೊಳಗಾಗಿದೆ. ನೂರಾರು ಜಾತ್ಯತೀತ ನಾಯಕರು ಮತ್ತು ಚಿಂತಕರು ಸ್ವಿಝರ್ಲ್ಯಾಂಡ್ನ ರಾಜಕೀಯ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಈ ನಡುವೆ, ವ್ಯಾಟಿಕನ್ ಕೂಡ ಸ್ವಿಝರ್ಲ್ಯಾಂಡ್ನಲ್ಲಿ ಮಸೀದಿಗಳ ಮಿನಾರ ನಿಷೇಧದ ವಿರುದ್ಧ ಕ್ರಮಗೊಳ್ಳಲಾಗಿರುವ ಕ್ರಮವು ಧಾರ್ಮಿಕ ಸ್ವಾಂತ್ರ್ಯಕ್ಕೆ ನೀಡಿದ ಹೊಡೆತವಾಗಿದೆ ಎಂಬ ಸ್ವಿಸ್ ಬಿಷಪ್ ಒಬ್ಬರ ಅಭಿಪ್ರಾಯಕ್ಕೆ ಸಹಮತ ಸೂಚಿಸಿದೆ.
“ಸ್ವಿಸ್ ಬಿಷಪ್ರ ಅಭಿಮತಕ್ಕೆ ನಮ್ಮ ಪೂರ್ಣ ಸಹಮತವಿದೆ. ಮಿನಾರಗಳ ನಿರ್ಮಾಣದ ವಿರುದ್ಧ ಹೇರಲಾಗುತ್ತಿರುವ ನಿಷೇಧವನ್ನು ನಾವು ಬೆಂಬಲಿಸಲಾರೆವು" ಎಂದು ವ್ಯಾಟಿಕನ್ನ ಧರ್ಮಗುರುಗಳ ಮಂಡಳಿಯೊಂದರ ಮುಖ್ಯಸ್ಥ ಆಂಟೋ ನಿಯೊ ಮರಿಯಾ ಸ್ವೆಗ್ಲಿಯೊ ಹೇಳಿದ್ದಾರೆ. ಮಿನಾರ ನಿಷೇಧ ಮಸೂದೆ ಮತ್ತು ಆ ನಿಟ್ಟಿನಲ್ಲಿ ನಡೆದ ಜನಮತಗಣನೆಯು ಪ್ರಸಕ್ತ ಬಹುತೇಕ ಎಲ್ಲ ಐರೋಪ್ಯ ರಾಷ್ಟ್ರಗಳಲ್ಲಿ ಪ್ರಮುಖ ಚರ್ಚಾ ವಿಷಯವಾಗಿ ಪರಿಣಮಿಸಿದೆ. ಯುರೋಪ್ನಲ್ಲಿ ಹೆಚ್ಚುತ್ತಿರುವ ಇಸ್ಲಾಮಿ ಸಂಸ್ಕೃತಿಯ ಪ್ರಭಾವದ ಜೊತೆ ಹೇಗೆ ವ್ಯವಹರಿಸಬೇಕೆಂಬ ಬಗ್ಗೆಯೂ ಚರ್ಚೆಗಳು ನಡೆಯತೊಡಗಿವೆ.
“ಸ್ವಿಝರ್ಲ್ಯಾಂಡ್ನಲ್ಲಿ ಮಿನಾರಗಳ ವಿರುದ್ಧ ವ್ಯಕ್ತವಾಗಿರುವ ಜನಾಭಿಪ್ರಾಯವು ವಾಸ್ತವದಲ್ಲಿ ಮುಸ್ಲಿಮ್ ಸಮುದಾಯ, ಧರ್ಮ ಅಥವಾ ಸಂಸ್ಕೃತಿಯ ಬಗ್ಗೆ ತಿರಸ್ಕಾರವಾಗಿರದೆ, ಜನರ ಮನದಲ್ಲಿ ಮೂಡಿರುವ ಭಯದ ಅಭಿವ್ಯಕ್ತಿಯಾಗಿದೆ" ಎಂದು ಸ್ವಿಸ್ ನ್ಯಾಯ ಮಂತ್ರಿ ಎವೆಲಿನ್ ವಿಡ್ಮರ್ ಶ್ಲಂಫ್ ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಮ್ ವಿರೋಧಿ ಎಂದು ಗುರುತಿಸಲ್ಪಡುತ್ತಿದ್ದ ಫ್ರಾನ್ಸ್ನ ವಿದೇಶಾಂಗ ಸಚಿವ ಬೆರ್ನಾರ್ಡ್ ಕುಶ್ನರ್ ಕೂಡ ಸ್ವಿಝರ್ಲ್ಯಾಂಡ್ನ ಹೊಸ ಕಾನೂನನ್ನು
ಉಗ್ರವಾಗಿ ಖಂಡಿಸಿದ್ದಾರೆ.
ಉಗ್ರವಾಗಿ ಖಂಡಿಸಿದ್ದಾರೆ.
“ಈ ನಿರ್ಧಾರದಿಂದ ನನಗೆ ಆಘಾತ ವಾಗಿದೆ. ಇದು ಅಸಹಿಷ್ಣುತೆಯ ಅಭಿವ್ಯಕ್ತಿ ಯಾಗಿದೆ. ಸ್ವಿಝರ್ಲ್ಯಾಂಡ್ ಸರಕಾರವು ಈ ನಿರ್ಧಾರವನ್ನು ಬದಲಿಸಿಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಅವರು ಹೇಳಿದ್ದಾರೆ. ಇದೇ ಧಾಟಿಯಲ್ಲಿ ಮಾತನಾಡಿರುವ ಐರೋಪ್ಯ ಒಕ್ಕೂಟದ ಹಾಲಿ ಅಧ್ಯಕ್ಷ ರಾಷ್ಟ್ರವಾದ ಸ್ವೀಡನ್ನಿನ ವಿದೇಶಾಂಗ ಸಚಿವ ಕಾರ್ಲ್ ಬಿಲ್ಟ್, “ಇದು ಒಂದು ರೀತಿಯ ಪೂರ್ವಗ್ರಹ ಮತ್ತು ಭಯದ ಅಭಿವ್ಯಕ್ತಿ ಯಾಗಿದೆ" ಎಂದಿದ್ದಾರೆ.
“ಈ ಬೆಳೆವಣಿಗೆಯು ಪಾಶ್ಚಿಮಾತ್ಯ ಜನರಲ್ಲಿ ಹೆಚ್ಚುತ್ತಿರುವ ಇಸ್ಲಾಮೋ ಫೋಬಿಯಕ್ಕೆ ಸಾಕ್ಷಿಯಾಗಿದೆ" ಎಂದು ಪಾಕಿಸ್ತಾನದ ಪ್ರಮುಖ ಇಸ್ಲಾಮಿ ಸಂಘಟನೆ ಯೊಂದರ ಉಪಾಧ್ಯಕ್ಷ ಖುರ್ಶೀದ್ ಅಹ್ಮದ್
ಹೇಳಿದ್ದಾರೆ.
“ಸ್ವಿಝರ್ಲ್ಯಾಂಡ್ ವಿಶ್ವದ ಸಮಸ್ತ ಮುಸ್ಲಿಮರಿಗೆ ಅವಮಾನ ಮಾಡಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಕೊಡಲಿ ಏಟು ನೀಡಿದೆ" ಎಂದು ಈಜಿಪ್ಟ್ನ ಮುಫ್ತಿಯೊಬ್ಬರು ಹೇಳಿಕೆ ನೀಡಿದ್ದಾರೆ
ತುರ್ಕಿ, ಇರಾನ್, ಮಲೇಶ್ಯ, ಇಂಡೋನೇಶ್ಯಗಳಲ್ಲಿ ಕೂಡ ಮಿನಾರ ನಿಷೇಧ ಪ್ರಕರಣ ಖಂಡನೆಗೊಳಗಾಗಿದೆ.