ಚಂಡಿಗಡ: ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ,ಕೃಷಿ ಸಾಲ ಮನ್ನಾ, ಕೃಷಿಕರು ಮತ್ತು ಕೃಷಿಕಾರ್ಮಿಕರಿಗೆ ಪಿಂಚಣಿ, ರೈತರ ವಿರುದ್ದದ ಪೊಲೀಸ್ ಪ್ರಕರಣಗಳ ಹಿಂದೆಗೆತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಿಲ್ಲಿಗೆ ಪಾದಯಾತ್ರೆಯನ್ನು ಕೈಗೊಂಡಿರುವ ರೈತರು ರವಿವಾರ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ಸಮೀಪಿಸುತ್ತಿದ್ದಂತೆ ಅವರನ್ನು ತಡೆದ ಹರ್ಯಾಣ ಪೊಲೀಸರು ಅವರ ಮೇಲೆ ಅಶ್ರುವಾಯು ಪ್ರಯೋಗಿಸಿದರು.
ಅಶ್ರುವಾಯು ಪ್ರಯೋಗದ ಬಳಿಕ ರೈತರು ಕೆಲವು ಮೀಟರ್‌ಗಳಷ್ಟು ಹಿಂದಕ್ಕೆ ಸರಿದಿದ್ದರು. ಅವರ ಪೈಕಿ ಕೆಲವರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರೆ ಕೆಲವರು ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿದ್ದರು. ಕೆಲವರು ಅಶ್ರುವಾಯು ಶೆಲ್ ಗಳನ್ನು ಒದ್ದೆ ಸೆಣಬಿನ ಚೀಲಗಳಿಂದ ಮುಚ್ಚುತ್ತಿದ್ದುದು ಕಂಡು ಬಂದಿತ್ತು.
101 ರೈತರ ಗುಂಪೊಂದು ಮಧ್ಯಾಹ್ನ ಶಂಭು ಗಡಿಯಲ್ಲಿನ ಪ್ರತಿಭಟನಾ ಸ್ಥಳದಿಂದ ದಿಲ್ಲಿಗೆ ತಮ್ಮ ಪಾದಯಾತ್ರೆಯ ತ್ರೆಯನ್ನು ಪುನರಾರಂಭಿಸಿದ್ದು, ಕೆಲವೇ ಮೀ.ಗಳಷ್ಟು ಮುಂದಕ್ಕೆ ಸಾಗಿದಾಗ ಅವರನ್ನು ತಡೆದ ಹರ್ಯಾಣ ಪೊಲೀಸರು ಪಾದಯಾತ್ರೆಗೆ ಅಗತ್ಯ ಅನುಮತಿ ಪತ್ರ ತೋರಿಸುವಂತೆ ಸೂಚಿಸಿದ್ದರು.
ಶುಕ್ರವಾರವೂ ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದಾಗ ರೈತರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದರು.
ರವಿವಾರ ಪ್ರತಿಭಟನಾ ಜಾಥಾಕ್ಕೆ ಮುನ್ನ ಸಿಂಘು ಗಡಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹರ್ಯಾಣ ಪೊಲೀಸರು ಅಂಬಾಲಾ ಜಿಲ್ಲೆಯ 11 ಗ್ರಾಮಗಳಲ್ಲಿ ನಿಷೇಧಾಜ್ಞೆಯನ್ನು ಹೇರಿದ್ದು, ಮೊಬೈಲ್ ಇಂಟರ್ನೆಟ್ ಮತ್ತು ಸಗಟು ಎಸ್‌ಎಂಎಸ್ ಸೇವೆಗಳನ್ನು ಅಮಾನತುಗೊಳಿಸಿದ್ದಾರೆ. ಈ ನಿರ್ಬಂಧಗಳು ಮುಂದಿನ ವಾರದವರೆಗೂ ಅಸ್ತಿತ್ವದಲ್ಲಿರಲಿವೆ.