ಮಂಗಳೂರು, ನ.೨: ಬೆಂಗಳೂರು-ಮಂಗಳೂರು ರೈಲನ್ನು ಕೇರಳದ ಕಣ್ಣೂರಿಗೆ ಸಂಚರಿಸುವ ಬಗ್ಗೆ ಶೀಘ್ರದಲ್ಲೇ ದಿನ ನಿಗದಿಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಇ. ಅಹ್ಮದ್ ಹೇಳಿದ್ದಾರೆ.
ಕಣ್ಣೂರು ವಿಧಾನ ಸಭಾ ಕ್ಷೇತ್ರಕ್ಕೆ ನ.೭ರಂದು ನಡೆಯುವ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಆಗಮಿಸಿದ್ದ ಕೇಂದ್ರ ಸಚಿವರು ಸೋಮವಾರ ಬೆಳಗ್ಗೆ ಮಂಗಳೂರು ರೈಲ್ವೆ ನಿಲ್ದಾಣದ ಅಧಿಕಾರಿಗಳ ಜತೆ ಕೆಲಕಾಲ ಚರ್ಚೆ ನಡೆಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಚಿವರು ‘ನಾನೀಗ ಯಾವುದೇ ಮಾತುಗಳನ್ನಾಡಿದರೆ ಅದು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾದೀತು ಎಂದರು.
‘ಮಂಗಳೂರು-ಬೆಂಗಳೂರು ರೈಲು ಕಣ್ಣೂರಿಗೆ ಯಾವಾಗ ಸಂಚರಿಸಲಿದೆ? ಎಂಬ ಪತ್ರಕರ್ತರ ಪಟ್ಟು ಬಿಡದ ಪ್ರಶ್ನೆಗೆ ‘ಶೀಘ್ರದಲ್ಲೇ ದಿನ ನಿಗದಿ ಮಾಡಲಾಗುವುದು ಎಂದು ಚುಟುಕಾಗಿ ಉತ್ತರಿಸಿದರು.
ಇದೇ ವೇಳೆ ಸಾರ್ವಜನಿಕರೊಬ್ಬರು ಮಂಗಳೂರು ರೈಲು ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‌ಗಳನ್ನು ಹೆಚ್ಚಿಸಬೇಕು ಮತ್ತು ರೈಲುಗಳಲ್ಲಿ ಆಸನಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಚಿವರಿಗೆ ಮನವಿ ಅರ್ಪಿಸಿದರು.