ಬೆಂಗಳೂರು,ಫೆಬ್ರವರಿ 17:ಅತ್ಯಾಧುನಿಕ ವೈಜ್ಞಾನಿಕ ಕ್ರಮಗಳ ಮೂಲಕ ದೇಶದಲ್ಲಿ ಕ್ಷೀರ ಕ್ರಾಂತಿಯಾಗಬೇಕೆಂದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಡಾ: ಅಮೃತಾ ಪಟೇಲ್ ಕರೆ ನೀಡಿದ್ದಾರೆ.
ನಗರದಲ್ಲಿಂದು ಆರಂಭವಾದ ೩೮ ನೇ ರಾಷ್ಟ್ರೀಯ ಡೈರಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪಶುಸಂಗೋಪನಾ ಇಲಾಖೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಹೊಸ ಹೊಸ ತಳಿಯ ಅಭಿವೃದ್ಧಿ, ಜಾನುವಾರುಗಳ ಆರೋಗ್ಯ ರಕ್ಷಣೆಯಂತಹ ಕ್ರಮಗಳ ಮೂಲಕ ಕ್ಷೀರ ಕ್ರಾಂತಿಯಾಗಬೇಕೆಂದು ಹೇಳಿದರು.
ಹೈನೋದ್ಯಮದಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಸರ್ಕಾರಗಳು ಹಾಲು ಉತ್ಪಾದನೆಗೆ ಹಣಕಾಸಿನ ನೆರವು ನೀಡಿದರಷ್ಟೇ ಸಾಲದು. ಹಣ ಸದ್ಬಳಕೆಯಾಗಿದೆಯೋ ಇಲ್ಲವೋ ಎಂಬುದನ್ನೂ ನೋಡಬೇಕು. ಪ್ರಸ್ತುತ ದೇಶದಲ್ಲಿ ಹಾಲಿನ ಕೊರತೆಯಿಲ್ಲ. ನಿರ್ಲಕ್ಷ್ಯ ವಹಿಸಿದರೆ ಹಾಲಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ.ಎಂ.ಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ೫.೫ ಲಕ್ಷ ಕೆ.ಜಿ ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ೨.೪ ಲಕ್ಷ ಕೆ.ಜಿ. ಹಾಲು ಉತ್ಪಾದನೆಯಾಗುತ್ತಿದೆ ಎಂದು ನುಡಿದರು.
ಹಾಲು ಉತ್ಪಾದನೆ ಹೆಚ್ಚಳಕ್ಕೆ ಹೊಸ ಹೊಸ ಜಾನುವಾರುಗಳ ತಳಿಗಳನ್ನು ಸೃಷ್ಟಿಸುವ ಅಗತ್ಯವಿದೆ. ಕೆ.ಎಂ.ಎಫ್ ಹೈನೋದ್ಯಮವನ್ನು ನಂಬಿರುವವರಿಗೆ ಉದ್ಯೋಗ, ಆದಾಯ ತಂದು ಕೊಡಲು ಶ್ರಮಿಸುತ್ತಿದೆ. ಮುಂಬರುವ ದಿನಗಳಲ್ಲೂ ಮತ್ತಷ್ಟು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.