ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಜನಗಣತಿ 2010 ಏಪ್ರಿಲ್ 15 ರಿಂದ ರಾಜ್ಯದಲ್ಲಿ ಪ್ರಕ್ರಿಯೆ ಆರಂಭ

ಬೆಂಗಳೂರು: ಜನಗಣತಿ 2010 ಏಪ್ರಿಲ್ 15 ರಿಂದ ರಾಜ್ಯದಲ್ಲಿ ಪ್ರಕ್ರಿಯೆ ಆರಂಭ

Tue, 13 Apr 2010 17:48:00  Office Staff   S.O. News Service

ಬೆಂಗಳೂರು, ಏಪ್ರಿಲ್ ೧೩ (ಕರ್ನಾಟಕ ವಾರ್ತೆ): ’ಭಾರತದ ಜನಗಣತಿ ೨೦೧೧’ ರ ಪ್ರಕ್ರಿಯೆಯು ರಾಜ್ಯದಲ್ಲಿ ಏಪ್ರಿಲ್ ೧೫ ರಿಂದ ಆರಂಭಗೊಳ್ಳಲಿದೆ. ಎರಡು ಹಂತಗಳಲ್ಲಿ ನಡೆಯಲಿರುವ ಜನಗಣತಿ ಪ್ರಕ್ರಿಯೆಯ ಮೊದಲ ಭಾಗವು ಏಪ್ರಿಲ್ ೧೫ ರಿಂದ ಜೂನ್ ೨೦೧೦ ರ ವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ಮನೆ ಮನೆಗೆ ಹೋಗಿ ಮನೆಗಳ ಪಟ್ಟಿ ಮಾಡುವ ಮತ್ತು ಮನೆಗಣತಿ ನಡೆಯಲಿದೆ. ಈ ಅವಧಿಯಲ್ಲಿ ಕುಟುಂಬಗಳು ಹೊಂದಿರುವ ವಿವಿಧ ಸೌಲಭ್ಯಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು (ಮನೆ ನಿರ್ಮಾಣದಲ್ಲಿ ಬಳಸಿರುವ ಸಾಮಗ್ರಿಗಳು ಮುಂತಾದ ವಿವರ) ಭವಿಷ್ಯದಲ್ಲಿ ಮನೆಗಳ ಅಗತ್ಯ ಕುರಿತ ಮಾಹಿತಿ, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್‌ಗೆ ಮಾಹಿತಿ ಸಂಗ್ರಹಿಸಲಾಗುವುದೆಂದು ರಾಷ್ಟ್ರೀಯ ಜನಗಣತಿಯ ಕರ್ನಾಟಕ ನಿರ್ದೇಶಕ ಶ್ರೀ ಅನಿಲ್‌ಕುಮಾರ್ ಇವರು ರಾಜ್ಯ ಜನಗಣತಿ ನೋಡೆಲ್ ಅಧಿಕಾರಿ ಹಾಗೂ ಕಂದಾಯ ಇಲಾಖಾ ಕಾರ್ಯದರ್ಶಿ ಶ್ರೀ ಕೆ.ಎಸ್. ಪ್ರಭಾಕರ್ ಅವರೊಡನೆ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮವನ್ನು ಏಪ್ರಿಲ್ ೧೫ ರಂದು ಬೆಳಿಗ್ಗೆ ೮-೦೦ ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಆ ನಂತರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾದಲ್ಲಿ ಬೆಳಿಗ್ಗೆ ೮-೩೦ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

 

 

 

ಅರ್ಜಿ ನಮೂನೆಯಲ್ಲಿ ೩೫ ಪ್ರಶ್ನಾವಳಿಗಳಿದ್ದು ಸುಮಾರು ೧೫ ವಿಷಯಗಳ ಬಗ್ಗೆ ಮನೆ ಮನೆಯಿಂದ ಮಾಹಿತಿ ಸಂಗ್ರಹ ಮಾಡಲಾಗುವುದು. ಈ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಎಲ್ಲೂ ಬಹಿರಂಗ ಪಡಿಸುವುದಿಲ್ಲವೆಂದು ಹಾಗಾಗಿ ಸಾರ್ವಜನಿಕರು ಆತಂಕವಿಲ್ಲದೆ ಸಹಕರಿಸಲು ಅವರು ತಿಳಿಸಿದರು.

 

 

 

ಮನೆಗಣತಿಯನ್ನು ಒಟ್ಟು ೧,೧೨, ೬೪೯ ಬ್ಲಾಕ್‌ಗಳನ್ನು ಗುರುತಿಸಿದ್ದು, ೧,೦೩,೨೫೪ ಮಂದಿ ಗಣತಿದಾರರು ೧೭,೪೬೫ ಸೂಪರ್‌ವೈಸರ್‌ಗಳು ೧೯೭೨ ಮಾಸ್ಟರ್‌ಟ್ರೈನರ್‌ಗಳು ೮೦೧ ಚಾರ್ಜ್ ಅಧಿಕಾರಿಗಳು, ೩೮ ವಿಶೇಷ ಜಾರ್ಚ್ ಅಧಿಕಾರಿಗಳು ಇರುತ್ತಾರೆ. ೩೦ ಜಿಲ್ಲೆಗಳು, ೧೭೬ ತಾಲ್ಲೂಕು ೨೯,೩೪೦ ಗ್ರಾಮಗಳನ್ನು ಈ ಕಾರ್ಯಾಚರಣೆ ಒಳಗೊಂಡಿರುತ್ತದೆ. ಪ್ರಾಥಮಿಕ ಹಂತದಲ್ಲಿ ಮನೆಮನೆಗಳಿಂದ ಮಾಹಿತಿ ಸಂಗ್ರಹಣೆ ಮಾಡಿದನಂತರ ಅದನ್ನು ಬಳಸಿ ಎರಡನೇ ಹಂತದ ಜನಗಣತಿ ಕಾರ್ಯವನ್ನು ರಾಷ್ಟ್ರಾದ್ಯಂತ ೨೦೧೧ ಫೆಬ್ರವರಿ ೯ ರಿಂದ ೨೮ ನೇ ತಾರೀಖಿನ ಅವಧಿಯಲ್ಲಿ ನಡೆಸಲಾಗುತ್ತದೆ.

 

 

ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್.ಪಿ.ಆರ್.): ಭಾರತದ ಜನಗಣತಿ ೨೦೧೧ ಜೊತೆಯಲ್ಲಿ, ೨೦೦೩ರ ಪೌರತ್ವ ನಿಯಮಗಳಲ್ಲಿನ ಅವಕಾಶಗಳ ಅಡಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ್ನು ಸಿದ್ದಪಡಿಸಲು ಸರ್ಕಾರವು ನಿರ್ಧರಿಸಿದೆ. ಕಡಲ ತೀರದಲ್ಲಿ ಭದ್ರತೆಯನ್ನು ಹೆಚ್ಚಿಸುವ ದಿಸೆಯಲ್ಲಿ ೯ ಕಡಲ ತೀರದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎನ್.ಪಿ.ಆರ್. ಸಿದ್ದಪಡಿಸುವ ಕಾರ್ಯವನ್ನು ೨೦೦೯ ರಿಂದಲೇ ಆರಂಭಿಸಲಾಗಿದೆ. ಎನ್.ಪಿ.ಆರ್. ಅನ್ನು ಸಿದ್ದಪಡಿಸಲು ಅಗತ್ಯವಾದ ಮಾಹಿತಿಯ ಸಂಗ್ರಹಣೆಯನ್ನು ಏಪ್ರಿಲ್ ೧೫, ೨೦೧೦ ರಿಂದ ಜೂನ್ ೧, ೨೦೧೦ ರ ನಡುವಿನ ಅವಧಿಯಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಅನುಸೂಚಿಯ ಜೊತೆಯಲ್ಲಿ ಎನ್.ಪಿ.ಆರ್. ಅನುಸೂಚಿಯನ್ನು ಪ್ರಚುರ ಪಡಿಸುವ ಮೂಲಕ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

 

 

 

ಎರಡನೇ ಹಂತದ ಜನಗಣತಿ ಕಾರ್ಯವು ೨೦೧೧ ಫೆಬ್ರವರಿಯಿಂದ ಮಾರ್ಚ್ ವರೆಗೆ ನಡೆಯುತ್ತಿದ್ದು ಇದರಲ್ಲಿ ಭಾವಚಿತ್ರ, ಫಿಂಗರ್‌ಪ್ರಿಂಟ್ಸ್, ಕಣ್ಣಿನ ಐರಿಸ್ ವಿವರ ಸಂಗ್ರಹಿಸಲಾಗುತ್ತದೆ. ನಂತರ ವಿವರವನ್ನು ಯೂನಿಕ್ ಐ.ಡಿ.ಗೆ ಸಂಪರ್ಕಪಡಿಸಲಾಗುತ್ತದೆ ಎಂದು ತಿಳಿಸಿದರು. 

 


Share: