ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಮುತಾಲಿಕ್ ಮುಖಕ್ಕೆ ಮಸಿ

ಬೆಂಗಳೂರು:ಮುತಾಲಿಕ್ ಮುಖಕ್ಕೆ ಮಸಿ

Fri, 12 Feb 2010 07:37:00  Office Staff   S.O. News Service
ಬೆಂಗಳೂರು, ಫೆ.11: ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ‘ಪ್ರೇಮ ಯುದ್ಧ’ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ದುಷ್ಕರ್ಮಿಗಳು ಮುಖಕ್ಕೆ ಮಸಿ ಬಳಿದ ಘಟನೆ ಜರುಗಿದೆ. ಉದ್ವಿಗ್ನ ಪರಿಸ್ಥಿತಿ  ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
12-bng6.jpg 
12-bng2.jpg

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿನ ಸಂಸ ಬಯಲು ರಂಗ ಮಂದಿರದಲ್ಲಿ ಖಾಸಗಿ ಸುದ್ದಿವಾಹಿನಿಯೊಂದು ಪತ್ರಕರ್ತ ಅಗ್ನಿ ಶ್ರೀಧರ್, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಗಿರಿಧರ್‌ರೊಂದಿಗೆ ಹಮ್ಮಿಕೊಂಡಿದ್ದ ‘ಪ್ರೇಮ ಯುದ್ದ’ ಸಂವಾದ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿತು.

12-bng3.jpg
12-bng4.jpg 
ಸುಮಾರು ಒಂದು ಗಂಟೆ ಕಾಲ ನಡೆದ ಸಂವಾದದಲ್ಲಿ ಅತಿಥಿಗಳು ತಮ್ಮ ಅನಿಸಿಕೆಗಳನ್ನು ಹಂಚುಕೊಂಡ ನಂತರ, ಪ್ರೇಕ್ಷಕರಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರೇಮಿಗಳ ದಿನಾಚರಣೆಯ ಪರ-ವಿರೋಧ ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಯಿತು.

ಕಾರ್ಯಕ್ರಮವು ಹಾದಿ ತಪ್ಪುತ್ತಿದ್ದನ್ನು ಗಮನಿಸಿದ ನಿರೂಪಕ ಶ್ರೀಧರ್‌ನ್ನು ಪರಿಸ್ಥಿತಿಯನ್ನು ಹತೋಟಿಗೆ ತರುವಂತೆ ಮನವಿ ಮಾಡಿದರು. ಯುವಕರನ್ನು ಸಮಾಧಾನಿಸಲು ಶ್ರೀಧರ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ದುಷ್ಕರ್ಮಿಗಳು ಏಕಾ‌ಏಕಿ ನುಗ್ಗಿ ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ ಬಳಿದು, ಸ್ಥಳದಿಂದ ಪರಾರಿಯಾದರು.

ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಸ್ಥಳದಲ್ಲಿ ಗೊಂದಲ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲ ಅವರ ಮೇಲೂ ಹಲ್ಲೆ ನಡೆಸಲು ಮುಂದಾದರು.

12-bng7.jpg

ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಮತ್ತೊಂದು ಗುಂಪಿನ ಯುವಕರು ಕೈ-ಕೈ ಮಿಲಾಯಿಸಿದ ಘಟನೆಯು ಜರುಗಿತು. ಪೊಲೀಸರ ಮಧ್ಯೆ ಪ್ರವೇಶದ ನಂತರವು ವಾತಾವರಣ ಪ್ರಕ್ಷುಬ್ಧವಾಗಿತ್ತು. 

ಅಗ್ನಿ ಶ್ರೀಧರ್ ಖಂಡನೆ

ಸಂವಾದ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ಅಗ್ನಿ ಶ್ರೀಧರ್ ತೀವ್ರವಾಗಿ ಖಂಡಿಸಿದ್ದಾರೆ. ಕ್ಷಣಾರ್ಧದಲ್ಲಿ ಉಂಟಾದ ಘಟನೆಯಿಂದ ಏನು ನಡೆಯುತ್ತಿದೆ ಎಂಬುದೆ ತಿಳಿಯದಾಗಿತ್ತು. ಈ ಕೃತ್ಯವು ಪೂರ್ವ ನಿಯೋಜಿತವಾಗಿರಬಹುದು ಅವರ ಶಂಕಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಸೇರಿದಂತೆ ಪ್ರತಿಯೊಬ್ಬ ಅತಿಥಿಯು ಸಂವಾದಲ್ಲಿ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಈ ಸಂದರ್ಭದಲ್ಲಿ ಉಂಟಾದ ಘಟನೆಯು ಅನಾಗರಿಕವಾದದ್ದು ಎಂದು ತಿಳಿಸಿದ್ದಾರೆ. 

ಪ್ರಮೋದ್ ಮುತಾಲಿಕ್ ಮೇಲಿನ ಹಲ್ಲೆಯನ್ನು ಜನವಾದಿ ಸಂಘಟನೆಯೂ ಸೇರಿದಂತೆ ವಿವಿಧ ಮುಖಂಡರು ಖಂಡಿಸಿದ್ದಾರೆ.

ಸುಮ್ಮನೆ ಬಿಡಲಾರೆ: ಪ್ರಮೋದ್ ಮುತಾಲಿಕ್
ಕೃತ್ಯವು ಪೂರ್ವ ನಿಯೋಜಿತವಾದದ್ದು, ಕೆಲವು ಗೂಂಡಾಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅವರು ಯಾರು ಎಂದು ತಮಗೆ ತಿಳಿದಿದ್ದು, ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.



ಶ್ರೀರಾಮಸೇನೆ ಪ್ರಬಲ ಸಂಘಟನೆಯಾಗಿದ್ದು, ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇಬ್ಬರು ಆರೋಪಿಗಳ ಬಂಧನ: ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ರಾಜಾಜಿನಗರ ಹಾಗೂ ಸರ್ಜಾಪುರ ನಿವಾಸಿಗಳಾದ ಮಂಜುನಾಥ ಹಾಗೂ ಚೇತನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಲಯ  ಡಿಸಿಪಿ ಜಿ.ರಮೇಶ್ ತಿಳಿಸಿದ್ದಾರೆ. 

ಜನವಾದಿ ನಾಯಕಿಯ ಮೇಲೆ ಶ್ರೀರಾಮಸೇನೆ ಹಲ್ಲೆ
ಗದ್ದಲ, ಗೊಂದಲದ ಸಂದರ್ಭದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಪರಿಸ್ಥಿತಿಯ ಲಾಭ ಪಡೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲಾ ಆರೋಪಿಸಿದ್ದಾರೆ.

ಮಹಿಳೆಯರ ಸಂರಕ್ಷಣೆ ಕುರಿತು ಮಾತನಾಡುವ ಶ್ರೀರಾಮಸೇನೆಯವರು ತನ್ನ ಮೇಲೆ ನಡೆಸಿದ ಹಲ್ಲೆ ಎಷ್ಟು ಸರಿ ಎಂದು  ವಿಮಲಾ ಪ್ರಶ್ನಿಸಿದ್ದಾರೆ.


ಶ್ರೀರಾಮ ಸೇನೆ ಮುಖಂಡ ಭವಾನಿ ತನ್ನ ಮೇಲೆ ಹಲ್ಲೆ ನಡೆಸಿದ್ದು, ಮುತಾಲಿಕ್ ನನ್ನೊಂದಿಗೆ ಬಂದು ಪೊಲೀಸರಿಗೆ ದೂರು ನೀಡಿ ಭವಾನಿಯನ್ನು ಬಂಧಿಸಲಿ ಎಂದು ಅವರು ಆಗ್ರಹಿಸಿದರು.

ಮುತಾಲಿಕ್ ಮೇಲೆ ನಡೆದ ಹಲ್ಲೆಯೂ ಅನಾಗರಿಕವಾದದ್ದು, ಇದನ್ನು ಪ್ರತಿಯೊಬ್ಬರೂ ಖಂಡಿಸಲೆ ಬೇಕು. ಆದರೆ, ಪರಿಸ್ಥಿತಿಯನ್ನು ದುರ್ಬಳಕೆ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸುವುದು ಯಾವ ನ್ಯಾಯ ಎಂದು ಅವರು ಕಿಡಿಕಾರಿದರು. 


ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರವಿದೆ. ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಮುಕ್ತರಾಗಿದ್ದಾರೆ. ಆದರೆ, ಶ್ರೀರಾಮಸೇನೆ ಮುಖಂಡ ಭವಾನಿ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ವಿಮಲ ಆರೋಪಿಸಿದರು

Share: