ಬೆಂಗಳೂರು,ಮಾರ್ಚ್ 2;ಇಂದಿನಿಂದಲೇ ಬೆಂಗಳೂರು ನಗರಕ್ಕೆ ೨೩ ಗಂಟೆ, ಉಳಿದ ನಗರ ಪಟ್ಟಣಗಳಿಗೆ ೨೨ ಗಂಟೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಆರು ಗಂಟೆ ಕಾಲದ ತ್ರೀಫೇಸ್,ಆರು ಗಂಟೆ ಕಾಲದ ಸಿಂಗಲ್ ಫೇಸ್ ವಿದ್ಯುತ್ ಜತೆಗೆ ರಾತ್ರಿ ೭ ರಿಂದ ೧೧ ಗಂಟೆಯವರೆಗೆ ವಿದ್ಯುತ್ ಪೂರೈಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿಂದು ನಿಯಮ ೬೯ ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿ ಅವರು,ಈ ಬೇಸಿಗೆಯಲ್ಲಿ ರಾಜ್ಯ ಎದುರಿಸುತ್ರಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಒಂದು ಸಹಸ್ರ ಮೆಗಾವ್ಯಾಟ್ ವಿದ್ಯುತ್‌ನ್ನು ಖರೀದಿಸಲಾಗುತ್ತಿದ್ದು ಅಗತ್ಯ ಬಿದ್ದರೆ ಇನ್ನೂ ೪೦೦ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ತಯಾರಾಗಿರುವುದಾಗಿ ನುಡಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ವಿದ್ಯುತ್ ಬೇಡಿಕೆಯ ಪ್ರಮಾಣ ಶೇಕಡಾ೩೫ ರಷ್ಟು ಹೆಚ್ಚಿದೆ. ಇಷ್ಟಾದರೂ ಪರಿಸ್ಥಿತಿಯನ್ನು ಎದುರಿಸಲು ಹಿಂದಿನ ಎಲ್ಲ ಸರ್ಕಾರಗಳು ಕೈಗೊಂಡಿದ್ದಕ್ಕಿಂತ ಪರಿಣಾಮಕಾರಿ ಕ್ರಮಗಳನ್ನು ತಮ್ಮ ಸರ್ಕಾರ ಕೈಗೊಂಡಿದೆ ಎಂದರು.
ವಿದ್ಯುತ್ ವಿಷಯದಲ್ಲಿ ಇಂದಿನ ಪರಿಸ್ಥಿತಿಗೆ ನಮ್ಮ ಸರ್ಕಾರ ಕಾರಣವಲ್ಲ ಎಂದ ಅವರು,ಈ ಹಿಂದಿನ ಸರ್ಕಾರಗಳು ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರೆ ಇಂತಹ ಸನ್ನಿವೇಶವೇ ಸೃಷ್ಟಿಯಾಗುತ್ತಿರಲಿಲ್ಲ ಎಂದು ವಿವರಿಸಿದರು.
ನಾವು ಅಧಿಕಾರ ಹಿಡಿದ ದಿನವೇ ರಾಜ್ಯದ ವಿದ್ಯುತ್ ಪರಿಸ್ಥಿತಿ ಗಂಭೀರವಾಗಿತ್ತು ಎಂದ ಅವರು, ಈ ಸಂದರ್ಭದಲ್ಲಿ ವಿದ್ಯುತ್ ಉತ್ಪಾದಿಸಲು ಅಗತ್ಯವಾದ ಕಲ್ಲಿದ್ದಲು ಎರಡು ದಿನಕ್ಕಷ್ಟೇ ಸಾಲುವಂತಿತ್ತು.
ಇಂತಹ ಪರಿಸ್ಥಿತಿಯನ್ನು ನಾವು ಬದಲಿಸಿದೆವು. ಸಂಪುಟ ಉಪಸಮಿತಿಯನ್ನು ರಚಿಸಿ ಒಂದು ತಿಂಗಳ ಕಾಲ ವಿದ್ಯುತ್ ಉತ್ಪಾದಿಸಲು ಪೂರಕವಾಗುವಂತೆ ಕಲ್ಲಿದ್ದಲನ್ನು ದಾಸ್ತಾನು ಮಾಡಿದೆವು.ಹಿಂದಿನ ಸರ್ಕಾರಗಳಿಗೆ ಈ ಕೆಲಸ ಮಾಡಲು ಪುರುಸೊತ್ತಿರಲಿಲ್ಲ ಎಂದರು.
ವಿದ್ಯುತ್ ಸಮಸ್ಯೆ ಉಲ್ಬಣಗೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೇ ನೇರ ಹೊಣೆ. ಹಿಂದಿನ ಸರ್ಕಾರಗಳು ಪರಿಸ್ಧಿತಿ ಸುಧಾರಿಸಲು ಕ್ರಮ ಕೈಗೊಳ್ಳದ ಪರಿಣಾಮ ರಾಜ್ಯ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ ಎಂದು ಯಡಿಯೂರಪ್ಪ ದೂರಿದರು.
ದಾಖಲೆ ಉತ್ಪಾದನೆ
ಇದಾದ ನಂತರ ಪುನ: ಮಾತು ಮುಂದುವರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ,ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಉತ್ಪಾದಿಸಿದ ವಿದ್ಯುತ್ ಪ್ರಮಾಣದ ಅಂಕಿ ಅಂಶಗಳನ್ನು ನೀಡಿದ ಅವರು,ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ೧೨೫೨ ಮೆಗಾವ್ಯಾಟ್ ವಿದ್ಯುತ್‌ನ್ನು ಜಾಲಕ್ಕೆ ಸೇರಿಸಿದ್ದು ಪ್ರಸಕ್ತ ವರ್ಷ ೧೩೦೦ ಮೆಗಾವ್ಯಾಟ್ ವಿದ್ಯುತ್‌ನ್ನು ಸೇರಿಸುವುದಾಗಿ ಸ್ಪಷ್ಟ ಪಡಿಸಿದರು.
ಮುಂದಿನ ನಾಲ್ಕು ತಿಂಗಳಲ್ಲಿ ಉಡುಪಿ ವಿದ್ಯುತ್ ಯೋಜನೆಯಿಂದ ಆರು ನೂರು ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದ್ದು,ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಬಾಕಿ ಉಳಿದ ಆರು ನೂರು ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದರು.
ಇದು ಇದುವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳ ಪೈಕಿ ಬಿಜೆಪಿ ಸರ್ಕಾರವೇ ಹೆಚ್ಚಿನ ವಿದ್ಯುತ್ ಉತ್ಪಾದಿಸಿದ ಸರ್ಕಾರ ಎಂಬ ದಾಖಲೆ ಸೃಷ್ಟಿಯಾಗಿದೆ ಎಂದ ಅವರು, ಕಳೆದ ಹದಿನೈದು ವರ್ಷಗಳಲ್ಲಿ ಒಂದೆರಡು ಯೋಜನೆಗಳನ್ನು ಬಿಟ್ಟರೆ ಉಳಿದ್ಯಾವ ಯೋಜನೆಗಳೂ ಜಾರಿಗೆ ಬರಲಿಲ್ಲ ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದ ಮೇಲೆ ಕೆಪಿಸಿಗೆ ೫೦೦ ಕೋಟಿ ರೂ ಷೇರು ಬಂಡವಾಳ ಅಂತ ಕೊಟ್ಟು ಹಿಂದಿನ ಯಾವ ಸರ್ಕಾರಗಳೂ ಮಾಡದ ಕೆಲಸವನ್ನು ಮಾಡಿದೆವು. ಛತ್ತೀಸ್‌ಘಡದಲ್ಲಿ ತಲಾ ೮೦೦ ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ.
ಇದೇ ರೀತಿ ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ನಿರಂತರವಾಗಿ ವಿದ್ಯುತ್ ಒದಗಿಸುವ ನಿರಂತರ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಲು ನಾವು ಮುಂದಾಗಿದ್ದು ೨೦೧೦-೨೦೧೧ ರಲ್ಲಿ ಎಪ್ಪತ್ತು ತಾಲ್ಲೂಕುಗಳಲ್ಲಿ,೨೦೧೧-೧೨ ರಲ್ಲಿ ಐವತ್ತಾರು ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಟಾನಗೊಳ್ಳಲಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ವಿದ್ಯುತ್ ಪಾಲು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ.ಐದು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇವತ್ತು ಕೇಂದ್ರದಿಂದ ಸಿಗಬೇಕಾದ ಪಾಲು ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿವರಿಸಿದರು.
ಬಿಡದಿಯಲ್ಲಿ ೧೪೦೦ ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಅಧಾರಿತ ಯೋಜನೆಗೆ ಟೆಂಡರ್ ಕರೆಯಲಾಗಿದ್ದು ಮೂರುವರೆ ಸಾವಿರ ಕೋಟಿ ರೂ ವೆಚ್ಚದಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದರು.
ಇದೇ ರೀತಿ ಇನ್ನೂ ಹಲವು ಯೋಜನೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ವಿದ್ಯುತ್ ಪರಿಸ್ಥಿತಿ ಇನ್ನಷ್ಟು ಉತ್ತಮವಾಗಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಒಟ್ಟು ಐದು ಯೋಜನೆಗಳಿಂದ ಮುಂದಿನ ಮೂರ್‍ನಾಲ್ಕು ವರ್ಷಗಳಲ್ಲಿ ೫೯೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆಎಂದ ಅವರು ನಾವು ಅಧಿಕಾರದಲ್ಲಿರುವುದರ ಒಳಗೆ ವಿದ್ಯುತ್ ಕೊರತೆ ಸಂಪೂರ್ಣವಾಗಿ ನಿವಾರಿಸಿ ಇನ್ನೂ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್‌ನ್ನು ಹೊರರಾಜ್ಯಗಳಿಗೆ ಮಾರಲು ಸಮರ್ಥರಾಗುವುದಾಗಿ ವಿಶ್ವಾಸ ವ್ಯಕ್ತೈಸಿದರು.
ಬಿಜಾಪುರ ಜಿಲ್ಲೆಯಲ್ಲಿ ಎನ್‌ಟಿಪಿಸಿ ವತಿಯಿಂದ ಜಾರಿಗೊಳಿಸುತ್ತಿರುವ ಕೊಡಗಿ ವಿದ್ಯುತ್ ಯೋಜನೆಯ ಗುದ್ದಲಿ ಪೂಜೆ ಕಾರ್ಯ ಸಧ್ಯದಲ್ಲೇ ನಡೆಯಲಿದೆ.೨೦೧೨ ರ ವೇಳೆಗೆ ಮೊದಲ ಹಂತದ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಹೇಳಿದರು.
ವಿದ್ಯುತ್ ಜಾಲವನ್ನು ಉತ್ತಮಪಡಿಸಲು ೭೫೦೦ ಕೋಟಿ ರೂಗಳನ್ನು ವೆಚ್ಚ ಮಾಡಿ ೨೮೮ ವಿದ್ಯುತ್ ಉಪಸ್ಥಾವರಗಳನ್ನು ನಿರ್ಮಿಸಲಾಗಿದ್ದು ಆ ಮೂಲಕ ವಿತರಣಾ ನಷ್ಟದ ಪ್ರಮಾಣ ಕಡಿಮೆಯಾಗಿದೆ ಎಂದರು.