ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ವಕ್ಫ್ ಆಸ್ತಿ ಮಾರಾಟ: ಮಂಡಳಿ ಅಧ್ಯಕ್ಷ ಸೇರಿ ಒಂಬತ್ತು ಮಂದಿ ವಿರುದ್ದ ವಂಚನೆ ಪ್ರಕರಣ ದಾಖಲು

ಬೆಂಗಳೂರು: ವಕ್ಫ್ ಆಸ್ತಿ ಮಾರಾಟ: ಮಂಡಳಿ ಅಧ್ಯಕ್ಷ ಸೇರಿ ಒಂಬತ್ತು ಮಂದಿ ವಿರುದ್ದ ವಂಚನೆ ಪ್ರಕರಣ ದಾಖಲು

Mon, 07 Dec 2009 02:42:00  Office Staff   S.O. News Service
ಬೆಂಗಳೂರು,ಡಿ.6: ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ಅಧ್ಯಕ್ಷ ಖಾಲಿದ್ ಅಹ್ಮದ್ ಸೇರಿದಂತೆ ಒಟ್ಟು ಒಂಬತ್ತು ಮಂದಿ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಅಲ್ಪಸಂಖ್ಯಾತರ ಇಲಾಖೆಯ ಅಧೀನ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ವಕ್ಫ್ ಮಂಡಳಿ ಅಧ್ಯಕ್ಷ ಖಾಲಿದ್ ಅಹ್ಮದ್, ಅಂದಿನ ಸಿ‌ಇ‌ಓ ಎಂ.ಎ.ಖಾಲಿದ್, ಕಾನೂನು ಸಲಹೆಗಾರ ಮಹಮ್ಮದ್ ಟಿಪ್ಪು ಸುಲ್ತಾನ್, ಸದಸ್ಯರಾದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ,   ಎಸ್.ಎಂ.ಎಚ್.ಜಾಹUರದಾರ್, ಸೈಯದ್ ಝಯೀಮ್ ರಝಾ ಆಬಿದಿ, ಮುದೀರ್ ಆಗಾ ಹಾಗೂ ಆರ್.ಅಬ್ದುಲ್ ರಿಯಾಝ್ ಖಾನ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ನಗರದ ಲಾಲ್‌ಬಾಗ್ ಹತ್ತಿರದ ಅಣ್ಣಿಪುರ ಗ್ರಾಮದ ಸರ್ವೆ ನಂ.೧೮ರ ೨ಎಕರೆ ೩ಗುಂಟೆ ವಕ್ಫ್ ಮಂಡಳಿಗೆ ಸೇರಿದ ಸುಮಾರು ೬೬ ಕೋಟಿ ಮೌಲ್ಯದ ಜಮೀನನ್ನು ಭವರಿಲಾಲ್ ಎನ್ನುವವರಿಗೆ ಸೇರಿದ್ದೆಂದು ಹೇಳಿ ಅವರಿಂದ ೧ ಕೋಟಿ ಪರಿಹಾರ ಹಣವನ್ನು ಪಡೆದು ಸದರಿ ಜಮೀನು ಭವರಿಲಾಲ್‌ಗೆ ಹಿಂದುರಿಗಿಸಿದ ಆರೋಪ ಈ ಒಂಬತ್ತು ಜನರ  ಮೇಲಿತ್ತು.

ಹಿನ್ನಲೆ: ವಕ್ಫ್ ಮಂಡಳಿ ಆಸ್ತಿ ಆಕ್ರಮ ಮಾರಾಟ ಸಂಬಂಧ ತನಿಖೆ ಸಲ್ಲಿಸುವಂತೆ ದಿ.೫.೧೨.೦೮ರಂದು ಸರಕಾರ ಸಿ‌ಓಡಿಗೆ ಆದೇಶ ನೀಡಿತ್ತು. ಸರಕಾರದ ಆದೇಶದಂತೆ ತನಿಖೆ ನಡೆಸಿದ ಸಿ‌ಓಡಿ ೧೩ ಸಾಕ್ಷಿಗಳನ್ನು ಮತ್ತು ೧೮ ದಾಖಲಾತಿಗಳನ್ನು ಪರೀಶಿಲಿಸಿದ ನಂತರ ದಿ.೨೪.೧.೦೯ರಂದು ಮಧ್ಯಾಂತರ ಹಾಗೂ ದಿ.೧೭.೨.೦೯ರಂದು ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು.

ಸಿ‌ಓಡಿ ವರದಿ ಶಿಫಾರಸಿನ ಮೇಲೆ ತಪ್ಪಿತಸ್ಥ ಒಂಬತ್ತು ಜನರ ಮೇಲೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐ‌ಆರ್ ದಾಖಲಿಸಬೇಕು ಎಂದು ದಿ.೬.೬.೦೯ರಂದು ಸರಕಾರದ ಒಳಾಡಳಿತ(ಅಪರಾಧಗಳು) ಇಲಾಖೆಯ ಅಧೀನ ಕಾರ್ಯದಶಿಗಳು ಆದೇಶ ಹೊರಡಿಸಿದ್ದರು.

ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲು ಮಾಡಬೇಕು ಎಂದು ದಿ.೬.೬.೦೯ಕ್ಕೆ ಸರಕಾರ ಆದೇಶ ಹೊರಡಿಸಿದ್ದರೂ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದ್ದನ್ನು ಪ್ರಶ್ನಿಸಿ ಕರ್ನಾಟಕ ಮುಸ್ಲಿಮ್ ಸಂಘರ್ಷ ಸಮಿತಿ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.


Share: