ಭಟ್ಕಳ, ಜನವರಿ 25: ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಶಿಲುಬೆಯೊಂದನ್ನು ಧ್ವಂಸಗೊಳಿಸಲೆತ್ನಿಸಿದ್ದು ನಾವೇ ಎಂದು ಶ್ರೀರಾಮಸೇನೆ ಒಪ್ಪಿಕೊಂಡ ಬಳಿಕ ಇದುವರೆಗೆ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಶ್ರೀರಮಸೇನೆಯ ನಾಯಕ ಶಂಕರ್ ನಾಯಕ್ ಸಹಾ ಸೇರಿದ್ದಾರೆ.
ಶುಕ್ರವಾರದ ಘಟನೆಯ ಬಳಿಕ ತಾಲ್ಲೂಕಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ತಾಲ್ಲೂಕಿನ ಎಲ್ಲಾ ಚರ್ಚು ಹಾಗೂ ಮಸೀದಿಗಳಿಗೆ ರಕ್ಷಣೆ ಒದಗಿಸಲಾಗಿದೆ ಎಂದು ಡಿ.ವೈ.ಎಸ್.ಪಿ. ಡಾ. ವೇದಮೂರ್ತಿ ತಿಳಿಸಿದ್ದಾರೆ.
ಹೆಚ್ಚುವರಿ ಎಸ್.ಪಿ. ಶ್ರೀ ವಿ.ಬಿ. ಗಾಂವಕರ್ ಭಟ್ಕಳಕ್ಕೆ ಆಗಮಿಸಿ ಧ್ವಂಸಗೊಂಡ ಶಿಲುಬೆಯನ್ನು ವೀಕ್ಷಿಸಿದರು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜನರೊಂದಿಗೆ ಅವರು ಸಮಾಲೋಚಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಮುಂಡಳ್ಳಿ ಚರ್ಚ್ ಪಾದ್ರಿ ಫಾ. ಅಲ್ಫಾನ್ಸೋ ರವರನ್ನು ಅವರ್ ಭೇಟಿಯಾಗಿ ಈ ಕೃತ್ಯವನ್ನೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೊನ್ನಾವರ ಸಿಪಿಐ ಶ್ರೀ ಜಗದೀಶ್ ಸಹಾ ಜೊತೆಗಿದ್ದರುವ್. ಈಗ ಶಂಕರ್ ನಾಯಕ್ ಈ ಧಾಳಿಯ ಹೊಣೆಯನ್ನು ಹೊತ್ತಿರುವುದರಿಂದ ಅವರನ್ನೂ ಅವರ ಸಹವರ್ತಿಗಳನ್ನೂ ಬಂಧನಕ್ಕೆ ಒಳಪಡಿಸಿದ್ದು ಇನ್ನೂ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ವಿವರಗಳು ದೊರಕಿವೆ, ಅವರನ್ನು ಶೋಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಭಟ್ಕಳ ಎಂ.ಎ.ಎ.ಶ್ರೀ ಜೆ.ಡಿ ನಾಯ್ಕ, ಬಿಜೆಪಿ ಮುಖಂಡ ಪರಮೇಶ್ವರ ದೇವಾಡಿಗ ಸಹಿತ ಹಲವು ಪ್ರಮುಖರು ಈ ಕೃತ್ಯವನ್ನು ಖಂಡಿಸಿದ್ದಾರೆ. ಭಟ್ಕಳದ ಮಜ್ಲಿಸ್-ಎ-ಇಸ್ಲಾಹ್ ವ ತಂಜೀಮ್ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರು ಈ ಘಟನೆಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದು ಶ್ರೀರಾಮಸೇಯ ನಿಲುವನ್ನು ಖಂಡಿಸಿದೆ. ದುಷ್ಕರ್ಮಿಗಳಿಗೆ ಕಠಿಣ ಸಜೆ ನೀಡಬೇಕೆಂದು ಸಂಘಟನೆ ಆಗ್ರಹಿಸಿದೆ.