ಭಟ್ಕಳ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಾಲಿ ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಇಲಾಖೆಗಳ ಸಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಭೇಟಿ ಬಚಾವೋ ಭೇಟಿ ಬಡಾವೋ ಅಭಯಾನದ ಕಾರ್ಯಕ್ರಮವನ್ನು ತಾಲೂಕಿನ ಜಾಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಭಟ್ಕಳದ ಹಿರಿಯ ಸಿವಿಲ್ ಜಡ್ಜ್ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಕುರಾಣಿ ಕಾಂತ ರವರು ಉದ್ಘಾಟಿಸಿದರು.ಅವರು ಮಾತನಾಡುತ್ತಾ ಇಂದಿನ ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಅವಕಾಶಗಳಿವೆ.ಮಹಿಳೆಯರಿಗೆ ಶೋಷಣೆಯ ವಿರುದ್ಧ ಕಾನೂನಿನ ರಕ್ಷಣೆ ಇದೆ.ಹೆಣ್ಣು ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಮಾಡುವುದು ಅಪರಾಧವಾಗಿದೆ. ಅಂತಹ ಸಂಗತಿಗಳು ಗಮನಕ್ಕೆ ಬಂದರೆ ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಧಾನ ಸಿವಿಲ್ ಜಡ್ಜ್ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಧನವತಿಯವರು ಮಾತನಾಡುತ್ತ ಇಂದಿನ ಸಮಾಜದಲ್ಲಿ ಇಂದಿಗೂ ಲಿಂಗ ತಾರತಮ್ಮ ಇರುವುದು ಖೇದಕರ. ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಸಬಲಳಾಗಿದ್ದಾಳೆ.ಮಹಿಳೆಯರಿಗೆ ಶೋಷಣೆ ವಿರುದ್ಧ ಸಂಪೂರ್ಣ ರಕ್ಷಣೆ ಇದೆ. ಈ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ ದೇವಡಿಗ ಮಾತನಾಡಿ ಹೆಣ್ಣು ಮನೆಯ ನಂದಾದೀಪ, ಅದು ನಂದದ ದೀಪವಾಗಿರಲಿ ಎಂದು ನುಡಿದರು.ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಗಂಗಾ ಗೌಡ ಮಾತನಾಡಿದರು.ವೇದಿಕೆಯಲ್ಲಿ ಜಾಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ತಿಮ್ಮಪ್ಪ ದೇವಡಿಗ ಉಪಸ್ಥಿತರಿದ್ದರು.ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಸ್ವಾಗತಿಸಿದರು. ಜಾಲಿ ಪ್ರೌಢಶಾಲೆಯ ಶಿಕ್ಷಕ ಶ್ರೀಧರ ಶೇಟ್ ನಿರೂಪಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾರದ ನಾಯ್ಕ ವಂದಿಸಿದರು. ಜಾಲಿ ಪ್ರೌಢಶಾಲೆಯ
ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.