ಬೆಂಗಳೂರು,ಫೆ,೧೩: ಅಧಿಕಾರದ ಆಸೆಗಾಗಿ ನಾಡಿನ ರೈತ ಸಮುದಾಯಕ್ಕೆ ಅನ್ಯಾಯವಾಗುವ ಯಾವುದೇ ವಿಚಾರಗಳಲ್ಲೂ ರಾಜೀಮಾಡಿಕೊಳ್ಳುವುದಿಲ್ಲ. ರೈತ ಸಮುದಾಯದ ಹಿತ ಕಾಯಲು ಬದ್ದವಾಗಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಧಿಕಾರದಲ್ಲಿ ಇರುವವರೆವಿಗೂ ನಾಡಿನ ನೆಲ, ಜಲ, ಭಾಷೆಯ ಹಿತದ ಜೊತೆಗೆ ರೈತ ಸಮುದಾಯದ ಹಿತ ಕಾಯ್ದು ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದ ಕಂಡ ಅಪ್ರತಿಮ ರೈತ ನಾಯಕ ದಿವಂಗತ ಪ್ರೋ: ಎಂ.ಡಿ.ನಂಜುಂಡ ಸ್ವಾಮಿ ಅವರ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ರಾಜ್ಯ ಬಜೆಟ್ ರೈತಪರವಾಗಿರುತ್ತದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೇನೆ. ಅವರ ಹಿತ ಕಾಯುತ್ತೇನೆ ಎಂದರು.
ರೈತರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡುವುದಾಗಿ ಫನತೊಟ್ಟ ಅವರು, ರೈತರು ಈ ನಾಡಿನ ನಿಜವಾದ ಮಾಲೀಕರು, ಯಜಮಾನರು ಎಂದರು.
ಪ್ರೋ: ಎಂ.ಡಿ. ನಂಜುಂಡಸ್ವಾಮಿ ಅವರು ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳ ಬಗ್ಗೆ ಹೋರಾಟ ನಡೆಸಿದವರು. ಅವರ ಹೋರಾಟವೇ ತಮಗೂ ರೈತ ಪರ ಹೋರಾಟ ನಡೆಸಲು ಸ್ಪೂರ್ತಿ, ಪ್ರೇರಣೆ ಎಂದರು.
ಅನ್ನದಾತನಿಗೆ ನೋವಾದಾಗಲೆಲ್ಲಾ ಅವರಲ್ಲಿ ಧೈರ್ಯ, ಸ್ವಾಭಿಮಾನ ತುಂಬಿ ರೈತರು ಗೌರವಯುತವಾದ ಜೀವನ ನಡೆಸುವಂತೆ ಮಾಡಿದವರು ಪ್ರೋ: ಎಂ.ಡಿ.ಎನ್. ಅವರು ಕುಲಾಂತರಿ [ ಬಿಟಿ ] ಬೀಜಗಳ ವಿರುದ್ಧ ಹಿಂದೆಯೇ ಪ್ರತಿಭಟನೆ ನಡೆಸಿ ಎಚ್ಚರಿಕೆಯ ಗಂಟೆ ಮೊಳಗಿಸಿದ್ದರು ಎಂದರು.
ಇದೇ ಸಂದರ್ಭದಲ್ಲಿ ಪ್ರೋ: ಎಂ.ಡಿ.ಎನ್ ಅವರ ಕುರಿತಾದ ವಿಶ್ವ ರೈತ ಚೇತನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ತಾವು ರಾಜಕೀಯಕ್ಕೆ ಬಂದಿದ್ದರೆ ಅದಕ್ಕೆ ಪೂರ್ಣ ಪ್ರೇರಣೆ ಪ್ರೋ: ಎಂ.ಡಿ.ಎನ್. ಎಂದು ಹೇಳಿ, ಅವರ ಹೋರಾಟದ ಗುಣಗಳನ್ನು ಸ್ಮರಿಸಿಕೊಂಡರು.
ಅನ್ಯಾಯದ ವಿರುದ್ಧ ಸಿಡಿದೇಳುವ ನ್ಯಾಯಯುತ ಹಕ್ಕುಗಳಿಗಾಗಿ ತಮ್ಮದೇ ಆದ ಮಾರ್ಗದಲ್ಲಿ ಚಳವಳಿ ನಡೆಸುತ್ತಿದ್ದ ಪ್ರೋ: ಅವರಂತಹ ನಾಯಕ ಮತ್ತೆ ನಾಡಿನಲ್ಲಿ ಕಾಣಸಿಗುವುದು ಕಷ್ಟ ಸಾಧ್ಯ ಎಂದವರು ಬಾವುಕರಾಗಿ ನುಡಿದರು.