ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ದೇಶಪಾಂಡೆ-ಡೀಕೆಶಿ ವಿರುದ್ಧ ಸೋನಿಯಾ ಗಾಂಧಿ ತೀವ್ರ ಅಸಮಾಧಾನ - ಕೋಡಲೇ ಲೋಪ ಸರಿಪಡಿಸಲು ಕಟ್ಟಾಜ್ಞೆ

ಬೆಂಗಳೂರು: ದೇಶಪಾಂಡೆ-ಡೀಕೆಶಿ ವಿರುದ್ಧ ಸೋನಿಯಾ ಗಾಂಧಿ ತೀವ್ರ ಅಸಮಾಧಾನ - ಕೋಡಲೇ ಲೋಪ ಸರಿಪಡಿಸಲು ಕಟ್ಟಾಜ್ಞೆ

Wed, 03 Mar 2010 16:59:00  Office Staff   S.O. News Service

ಬೆಂಗಳೂರು,ಮಾರ್ಚ್ 3: ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ಸಮರ್ಥವಾಗಿ ನಡೆಸಲು ವಿಫಲವಾಗಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಅಸಮಾಧಾನಗೊಂದಿರುವ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಆಗಿರುವ ಲೋಪವನ್ನು ಕೂಡಲೇ ಸರಿಪಡಿಸುವಂತೆ ಕಟ್ಟಾದೇಶ ನೀಡಿದ್ದಾರೆ.

 

ಕಳೆದ ಹದಿನೈದು ದಿನಗಳ ಹಿಂದೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ಕಾಂಗ್ರೆಸ್ ಮುಖಂಡರಿಗೆ ಈ ಕುರಿತು ಆದೇಶ ನೀಡಿದ್ದ ಸೋನಿಯಾ ಗಾಂಧಿ, ಇಂದು ರಾಜ್ಯದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವ ಕೇಂದ್ರ ಆರೋಗ್ಯ ಸಚಿವ ಗುಲಾಂ ನಭಿ ಆಜಾದ್ ಅವರ ಮೂಲಕ ಮತ್ತೊಮ್ಮೆ ಆದೇಶ ರವಾನಿಸಿದ್ದಾರೆ.

 

 

ಗುಲಾಂ ನಭಿ ಆಜಾದ್ ಇಂದು ಅಧಿಕೃತ ಕಾರ್ಯಕ್ರಮದ ಪ್ರಯುಕ್ತ ನಗರಕ್ಕೆ ಆಗಮಿಸಿದ್ದು, ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿಮಾಡಿ ಸೋನಿಯಾ ಗಾಂಧಿ ಅಸಮಾಧಾನಗೊಂಡಿರುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

 

 

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕೈಗೊಳ್ಳುವಂತೆ ಸೋನಿಯಾ ಗಾಂಧಿ ಅವರು ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದ್ದರು. ಬಹುತೇಕ ರಾಜ್ಯಗಳಲ್ಲಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಳೆಪೆ ಸಾಧನೆಯಾಗಿದೆ ಎಂದು ತಮ್ಮಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಇದನ್ನು ರಾಜ್ಯದಲ್ಲಿನ ಪಕ್ಷದ ಮುಖಂಡರಿಗೆ ತಿಳಿಸುವಂತೆಯೂ ಸೂಚಿಸಿದ್ದಾರೆ.

 

ಅದಕ್ಕಾಗಿಯೇ ನಿಮ್ಮನ್ನು ಭೇಟಿಯಾಗಿ ಈ ವಿಷಯ ತಿಳಿಸುತ್ತಿದ್ದೇನೆ. ಮುಂದಿನ ಒಂದೆರಡು ವಾರಗಳೊಳಗಾಗಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಗುಲಾಂ ನಭಿ ಆಜಾದ್ ಹೇಳಿರುವುದಾಗಿ ಪಕ್ಷದ ವಿಶ್ವಸನೀಯ ಮೂಲಗಳು ತಿಳಿಸಿವೆ.

 

 

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೂಡ ಗುಲಾಂ ನಭಿ ಆಜಾದ್ ಸೂಚನೆ ನೀಡಿದ್ದು, ಪಕ್ಷದ ಶಾಸಕರು, ಮಾಜಿ ಶಾಸಕರ ಮೂಲಕ ನೋಂದಣಿ ಅಭಿಯಾನಕ್ಕೆ ತ್ವರಿತ ಚಾಲನೆ ನೀಡುವಂತೆ ತಿಳಿಸಿದ್ದಾರೆ. ಇದರ ಪರಿಣಾಮ ಸಿದ್ದರಾಮಯ್ಯ ಎಲ್ಲಾ ಶಾಸಕರಿಗೆ ಆದೇಶ ನೀಡಿ, ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಹೇಳಿದ್ದಾರೆ.

 

ರಾಜ್ಯದಲ್ಲಿನ ಸದಸ್ಯತ್ವ ಅಭಿಯಾನ ಕುರಿತು ಕಳಪೆ ಸಾಧನೆಯಾಗಿರುವ ವರದಿ ದೆಹಲಿಗೆ ತಲುಪುತ್ತಿದ್ದಂತೆ ಕೆಂಡಮಂಡಲವಾದ ಸೋನಿಯಾ ಗಾಂಧಿ, ಜಿಟ್ಟುಗಟ್ಟಿರುವ ಕಾಂಗ್ರೆಸ್ ನಾಯಕರ ವರ್ತನೆಯ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರದಲ್ಲಿ ಯುಪಿ‌ಎ ಸರ್ಕಾರ ಅಧಿಕಾರದಲ್ಲಿದ್ದು ಉತ್ತಮ ಕೆಲಸ ಮಾಡುತ್ತಿದ್ದರೂ ಕೂಡ ಕರ್ನಾಟಕದ ಕಾಂಗ್ರೆಸ್ ನಾಯಕರು ಪಕ್ಷದ ಕೆಲಸದ ಬಗ್ಗೆ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ.

 

 

ರಾಜ್ಯಕ್ಕೆ ಮೂರು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಧಾನ ನೀಡಲಾಗಿದೆ. ರೈಲ್ವೆ ಪರಿಸರದಂತಹ ಎರಡು ರಾಜ್ಯ ಸಚಿವ ಖಾತೆ ಕೊಡಲಾಗಿದೆ. ದಕ್ಷಿಣ ಭಾರತದಲ್ಲಿ ಅರಳಿರುವ ಬಿಜೆಪಿ ಪಕ್ಷದ ಬೇರನ್ನು ಕಿತ್ತೊಗೆಯಲು ಬೇಕಾದ ಎಲ್ಲಾ ಸಹಕಾರವನ್ನು ನೀಡಲು ಪಕ್ಷ ಸಿದ್ಧವಾಗಿದೆ. ಹೀಗಿದ್ದರೂ ಸದಸ್ಯತ್ವ ಅಭಿಯಾನದಲ್ಲಿ ನಿರ್ಲಕ್ಷ್ಯ ವಹಿಸಿರುವುದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.

 

ಇದೇ ಮೂಲಗಳ ಪ್ರಕಾರ, ರಾಜ್ಯದ ಅಪ್ಜಲಪುರ, ಖಾನಾಪುರ, ಸವದತ್ತಿ ಸೇರಿದಂತೆ ಹಲವೆಡೆ ಸದಸ್ಯತ್ವ ಅಭಿಯಾನ ಶೂನ್ಯ ಪ್ರಮಾಣದಲ್ಲಿದೆ. ಕೆಲವೆಡೆ ಕಾಟಾಚಾರಕ್ಕೆ ಎಂಬಂತೆ ಸದಸ್ಯತ್ವ ಅಭಿಯಾನ ನಡೆಸಲಾಗಿದೆ.

 

 

ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ ಅವರು ಕಾಂಗ್ರೆಸ್ ಪಕ್ಷ ತೊರೆದ ನಂತರ ಚನ್ನರಾಯಪಟ್ಟಣದಲ್ಲಿ ಹೆಚ್ಚುವರಿಯಾಗಿ ೧೨ ಸಾವಿರ ಮಂದಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಪರಿಸ್ಧಿತಿ ಹೀಗಿರುವಾಗ ಎಲ್ಲೆಲ್ಲಿ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸುಂತೆ ಸೋನಿಯಾ ಗಾಂಧಿ ಅಂತಿಮ ಎಚ್ಚರಿಕೆ ನೀಡಿದ್ದಾರೆ ಇದೇ ಮೂಲಗಳು ಹೇಳಿವೆ. 

 


Share: