ಸಂಚಾರಿ ಜನತಾ ನ್ಯಾಯಾಲಯ : ಆಲ್ದೂರಿನಲ್ಲಿ 14ಪ್ರಕರಣಗಳ ಇತ್ಯರ್ಥ
ಚಿಕ್ಕಮಗಳೂರು ಡಿ.18 : ಸಮೀಪದ ಆಲ್ದೂರು ಹೋಬಳಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥ ಯಾತ್ರೆ ಅಂಗವಾಗಿ ಏರ್ಪಡಿಸಿದ್ದ ಸಂಚಾರಿ ನ್ಯಾಯಾಲಯದಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂದಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ ೧೪ ಪ್ರಕರಣಗಳನ್ನು ಇತ್ಯಾರ್ಥ ನಡೆಸಲಾಯಿತು.
ಹಸಿರು ಬಣ್ಣದ ವಿಶಾಲವಾದ ಬಸ್ಸಿನೊಳಗೆ ಕಿರು ನ್ಯಾಯಾಲಯವನ್ನೇ ಅಲ್ಲಿ ಸೃಷ್ಟಿಸಲಾಗಿತ್ತು. ನ್ಯಾಯ ಪೀಠದಲ್ಲಿ ಆಸೀನರಾಗಿದ್ದ ಜಿಲ್ಲಾ ಕಾರ್ಮಿಕ ನ್ಯಾಯಾಲದ ನ್ಯಾಯಾಧೀಶ ಪಿ.ವಿ.ಸಿಂಗ್ರಿಯವರ ಮುಂದೆ ಆಲ್ದೂರು ಠಾಣಾ ವ್ಯಾಪ್ತಿಗೆ ಸಂಬಂದಿಸಿದಂತೆ ೫೦ ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆಗಾಗಿ ಇಡಲಾಗಿತ್ತು. ವಿಚಾರಣೆಗಾಗಿ ಈ ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಪಿರ್‍ಯಾದಿಗಳ ಹಾಗೂ ಆರೋಪಿ ಸ್ಥಾನದಲ್ಲಿದ್ದವರ ಹೇಳಿಕೆ ಪಡೆದು ಪರಸ್ಪರ ಮನವರಿಕೆಯ ಮೂಲಕ ಬಹುತೇಕ ಪ್ರಕರಣಗಳನ್ನು ರಾಜಿ ಸಂದಾನದಲ್ಲಿ ಮುಕ್ತಾಯಗೊಳಿಸಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಹೊಸ ಪ್ರಯೋಗವಾಗಿರುವ ಸಂಚಾರಿ ಜನತಾ ನ್ಯಾಯಾಲಯದ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಸಹಜ ಕುತೂಹಲವಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದವರು ಪ್ರಕರಣಗಳ ವಿಚಾರಣೆ ವೀಕ್ಷಿಸಲು ಮುಗಿಬಿದ್ದಿದ್ದರು. ಅವರನ್ನು ಪೋಲಿಸರು ನಿಯಂತ್ರಿಸಲು ಹರಸಾಹಸಪಟ್ಟ ಘಟನೆಯು ಈ ಸಂದರ್ಭದಲ್ಲಿ ನಡೆಯಿತು.
ಕಾರ್ಮಿಕ ವಂತಿಗೆ ಪಾವತಿಸುವಂತೆ ಕಲ್ಯಾಣಮಂಡಳಿ ಸೂಚನೆ
ಚಿಕ್ಕಮಗಳೂರು ಡಿ. ೧೮:- ಕರ್ನಾಟಕ ಕಾರ್ಮಿಕ ಕಲ್ಯಾಣನಿಧಿ ಕಾಯ್ದೆಯಡಿ ಬರುವ ಎಲ್ಲಾ ಕಾರ್ಖಾನೆಗಳು, ಪ್ಲಾಂಟೇಶನ್‌ಗಳು, ಉದ್ಯಮ ಸಂಸ್ಥೆಗಳು, ಕಾರ್ಮಿಕ ಮತ್ತು ಮಾಲೀಕರ ವಂತಿಗೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ಕಾರ್ಮಿಕ ಕಲ್ಯಾಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೌದ್ಧಿಕ ಕೆಲಸ ಹಾಗೂ ನುರಿತ ನೌಕರರು,ಅಡಳಿತ ವರ್ಗದ ನೌಕರರು ಸೇರಿದಂತೆ ೫೦ ಮತ್ತು ಅದಕ್ಕಿಂತ ಹೆಚ್ಚಿನ ನೌಕರರನ್ನು ನೇಮಕ ಮಾಡಿಕೊಂಡ ಎಲ್ಲಾ ಅಂಗಡಿ, ವಾಣಿಜ್ಯ ಶಿಕ್ಷಣ, ಚಾರಿಟಬಲ್ ಸಂಸ್ಥೆಗಳು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘಸಂಸ್ಥೆಗಳ ಮಾಲೀಕರು ಸಹ ಕಾರ್ಮಿಕ ಮತ್ತು ಮಾಲೀಕರ ವಂತಿಗೆಯನ್ನು ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜನವರಿ ೧೫ರೊಳಗೆ ವಂತಿಗೆ ಹಾಗೂ ಪಾವತಿಯಾಗದೆ ಬಾಕಿ ಇರುವ ಮೊತ್ತವನ್ನು ಕಲ್ಯಾಣ ಆಯುಕ್ತರು ಕರ್ನಾಟಕ ಕಾರ್ಮಿಕ ಕಲ್ಯಾಣ ಭವನ ನಂ ೪೮, ೨ನೇ ಮಹಡಿ ಮತ್ತಿಕೆರೆ ಮುಖ್ಯರಸ್ತೆ ಯಶವಂತಪುರ ಬೆಂಗಳೂರು-೨೨ ಇಲ್ಲಿಗೆ ಸಂದಾಯ ಮಾಡುವಂತೆ ಕೋರಿದ್ದಾರೆ.
ತರೀಕೆರೆಯಲ್ಲಿ ನಡೆಯಲಿರುವ ಮೂರು ದಿನಗಳ ಗಾಯನ ಕಲಿಕಾ ಶಿಬಿರಕ್ಕೆ ಆರ್ಜಿ ಆಹ್ವಾನ:
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಮೈಸೂರು ಅನಂತಸ್ವಾಮಿ ಅವರ ಸ್ಮರಣಾರ್ಥ ಮೂರು ದಿನಗಳ ಗಾಯನ ಕಲಿಕಾ ಶಿಬಿರವನ್ನು ತರೀಕೆರೆಯಲ್ಲಿ ಆಯೋಜಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಶಿಬಿರವು ಜನವರಿ ೧೫ ರಿಂದ ೧೭ ರವರೆಗೆ ನಡೆಯಲಿದೆ, ಶಿಬಿರಾರ್ಥಿಗಳು ೧೫ ರಿಂದ ೩೦ ರ ವಯೋಮಿತಿಯೊಳಗಿರಬೇಕು. ವಯಸ್ಸಿನ ದೃಡೀಕರಣಕ್ಕಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ತತ್ಸಮಾನ ದೃಡೀಕರಣವನ್ನು ಒದಗಿಸಬೇಕು.
ಅಸಕ್ತರು ಬಿಳಿ ಹಾಳೆಯಲ್ಲಿ ಸ್ವವಿವರ ಬರೆದು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕುವೆಂಪು ಕಲಾಮಂದಿರ ಚಿಕ್ಕಮಗಳೂರು ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕಡೆಯ ದಿನಾಂP ಜನವರಿ ೫ ಆಗಿರುತ್ತದೆ.