ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ಕರ್ನಾಟಕ ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ಇಲ್ಲ - ಹೈಕಮಾಂಡ್ - ರ್‍ಎಡ್ಡಿ ಸಹೋದರರಿಗೆ ಬೆಂಬಲ ಸೂಚಿಸಿದ ಆರೆಸ್ಸೆಸ್ಸೆ

ನವದೆಹಲಿ: ಕರ್ನಾಟಕ ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ಇಲ್ಲ - ಹೈಕಮಾಂಡ್ - ರ್‍ಎಡ್ಡಿ ಸಹೋದರರಿಗೆ ಬೆಂಬಲ ಸೂಚಿಸಿದ ಆರೆಸ್ಸೆಸ್ಸೆ

Mon, 02 Nov 2009 02:40:00  Office Staff   S.O. News Service
ನವದೆಹಲಿ/ ಬೆಂಗಳೂರು, ನ.೧ ಅತ್ತ ಬಿಜೆಪಿ ವರಿಷ್ಠರು ಪಕ್ಷದಲ್ಲಿನ ಬಿಕ್ಕಟ್ಟಿಗೆ ತೇಪೆ ಹಚ್ಚಲು ಸನ್ನದ್ಧರಾಗುತ್ತಿದ್ದರೆ, ಇತ್ತ ಬಳ್ಳಾರಿ ರೆಡ್ಡಿಗಳ ಪಾಳೆಯ ಹೈಕಮಾಂಡ್‌ಗೇ ಸಡ್ಡು ಹೊಡೆಯಲು ಸಿದ್ಧವಾಗುತ್ತಿದೆ.

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ನಾಯಕತ್ವ ಬದಲಿಸುವ ಇರಾದೆ ತನಗಿಲ್ಲ ಎಂದು ಹೈಕಮಾಂಡ್ ಭಾನುವಾರ ಇನ್ನಷ್ಟು ಗಟ್ಟಿಯಾಗಿ ಪುನರುಚ್ಚರಿಸಿದೆ. ಆದರೆ, ಅದಕ್ಕೊಪ್ಪದೆ ತಮ್ಮ ಹೋರಾಟ ಮುಂದುವರೆಸುವ ಸುಳಿವು ಬಂಡಾಯಗಾರರ ನೆಲೆಯಿಂದ ಹೊರಬಿದ್ದಿದೆ. 
ಭಾನುವಾರದ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯ ಬಿಜೆಪಿಯಲ್ಲಿನ ಸಂಕಷ್ಟ ಅಷ್ಟು ಸುಲಭಕ್ಕೆ ಬಗೆಹರಿಯುವಂಥದ್ದಲ್ಲ ಎಂಬುದು ಯಾರಿಗಾದರೂ ಅರ್ಥವಾದೀತು. 

೧ ನಾಯಕತ್ವ ಬದಲಾವಣೆ ಇಲ್ಲ ಎಂದು ಆಡ್ವಾಣಿ, ರಾಜನಾಥ್, ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಸ್ಪಷ್ಟನೆ. 
೨ನಾಯಕತ್ವ ಬದಲಿಸುವುದು ಅನಿವಾರ್ಯವೆಂದು ಸ್ಪೀಕರ್ ಶೆಟ್ಟರ್ ಅವರಿಂದ ಅರುಣ್ ಜೇಟ್ಲಿಗೆ ವಿವರಣೆ. 
೩ನಾಯಕತ್ವ ಬದಲಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂಬ ಬಿಗಿ ನಿಲುವು ರೆಡ್ಡಿ ಪಾಳೆಯದಿಂದ ಪ್ರಕಟ. 
೪ಶಾಸಕರ ಸಹಿ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ವರಿಷ್ಠರಿಗೆ ಸ್ಪೀಕರ್ ಶೆಟ್ಟರ್ ಮನವಿ. 
೫ಕೊನೆಯದು ಮತ್ತು ಅತಿ ಮಹತ್ವದ್ದು: ರೆಡ್ಡಿಗಳನ್ನೇ ಬೆಂಬಲಿಸುವುದು ಎಂಬ ನಿಲವಿಗೆ ರಾಜ್ಯದ ಆರೆಸ್ಸೆಸ್. 
ಹೈಕಮಾಂಡ್ ಬೆಂಬಲ ಯಡಿಯೂರಪ್ಪ ಅವರಿಗೆ ದೊರೆತಿದೆ ಎಂಬುದು ಅಂತಿಮವಾದ ತಕ್ಷಣ ಬಿಜೆಪಿ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪುತ್ತದೆ ಎಂಬ ನಿರೀಕ್ಷೆಯಿತ್ತು. ಆದರದು ಇಂದಿನ ಬೆಳವಣಿಗೆಯೊಂದಿಗೆ ಉಲ್ಟಾ ಆಗಿದೆ. ಹೈಕಮಾಂಡ್ ನಿರ್ಧಾರ ಹೊಸತೊಂದು ಬಿಕ್ಕಟ್ಟಿಗೆ ನಾಂದಿ ಹಾಡುವ ಲಕ್ಷಣ ಕಾಣುತ್ತಿದೆ. 
 
ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ನೆರೆಪೀಡಿತ ಜಿಲ್ಲೆಗಳಲ್ಲಿ ವಸತಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಿರುಮ್ಮಳರಾಗಿದ್ದರು. ಹೈಕಮಾಂಡ್ ಮತ್ತು ಮಠಾಧೀಶರು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆತ್ಮವಿಶ್ವಾಸ ಅವರ ಮುಖದಲ್ಲಿತ್ತು. 
 
ದಿಲ್ಲಿಯಲ್ಲಿ ಎಲ್ಲಾ ನಾಯಕರು: ಯಡಿಯೂರಪ್ಪ ಮತ್ತು ರೆಡ್ಡಿಗಳನ್ನು ಹೊರತುಪಡಿಸಿ ರಾಜ್ಯ ಬಿಜೆಪಿಯ ಬಹುತೇಕ ನಾಯಕರು ಭಾನುವಾರ ದೆಹಲಿಯಲ್ಲಿದ್ದರು. 
ರಾಜ್ಯಾಧ್ಯಕ್ಷ ಸದಾನಂದಗೌಡರು ವರಿಷ್ಠರ ಜೊತೆ ಮಾತುಕತೆ ನಡೆಸಿ, ಯಡಿಯೂರಪ್ಪ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದೂ ಸೋಮವಾರ ಸಂಜೆಯ ಹೊತ್ತಿಗೆ ಎಲ್ಲ ಸಮಸ್ಯೆ ಸಲೀಸಾಗಿ ಬಗೆಹರಿಯಲಿದೆಯೆಂದೂ ಪ್ರಕಟಿಸಿದರು. 
 
ರಾಜ್ಯ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆಯ ಒತ್ತಾಯದಿಂದ ತಾವು ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
ಗೃಹ ಸಚಿವ ಡಾ|ವಿ.ಎಸ್.ಆಚಾರ್ಯ, ಸಚಿವ ಸುರೇಶ್ ಕುಮಾರ್ ಮತ್ತು ವಿ.ಧನಂಜಯ ಕುಮಾರ್ ಬೆಳಗ್ಗೆಯೇ ಎಲ್.ಕೆ.ಆಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆ ಅನಗತ್ಯ ಎಂಬ ಅಭಿಪ್ರಾಯ ಮಂಡಿಸಿದರು. ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಕೂಡ ನಾಯಕರನ್ನು ಭೇಟಿ ಮಾಡಿ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕೆಂದು ಮನವಿ ಮಾಡಿದರು. ರಾಜ್ಯದ ೧೧ ಮಂದಿ ಬಿಜೆಪಿ ಸಂಸದರು ಕೂಡ ವರಿಷ್ಠರನ್ನು ಭೇಟಿಯಾಗಿ ನಾಯಕತ್ವ ಬದಲಾವಣೆ ಬೇಕಿಲ್ಲ ಎಂದರು. 
 
ಕಂದಾಯ ಸಚಿವ ಕರುಣಾಕರ ರೆಡ್ಡಿ ಸೋಮವಾರ ಮುಂಜಾನೆ ದೆಹಲಿ ತಲುಪುವ ನಿರೀಕ್ಷೆಯಿದೆ. 

ಈಗಲೇ ಹೇಳುವುದು ಬೇಡ: ನಾಯಕತ್ವ ಬದಲಾವಣೆ ಇಲ್ಲ ಎಂದು ಕಡ್ಡಿ ಮುರಿದಂತೆ ಸಾರ್ವಜನಿಕ ಹೇಳಿಕೆ ನೀಡಲು ಬಿಜೆಪಿಯ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಈಗಲೇ ಸಿದ್ಧರಿದ್ದಾರೆ. ಆದರೆ, ರೆಡ್ಡಿ ಸೋದರರ ಭೇಟಿಗೆ ಮುನ್ನ ಈ ಮಾತು ಹೇಳುವುದು ಸರಿಯಲ್ಲ ಎಂದು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ರೆಡ್ಡಿ ಸೋದರರು ದೆಹಲಿಗೆ ಬಂದಾಗ ಅವರ ಕಿವಿಗೆ ಈ ವಿಚಾರ ಹಾಕಿದ ನಂತರವೇ ಅಂತಿಮ ಘೋಷಣೆ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 
ಆಪರೇಷನ್ ಯಶಸ್ವಿ, ಆದರೆ ರೋಗಿ ಬದುಕಲಿಲ್ಲ ಎಂಬಂತಾದರೂ ಚಿಂತೆಯಿಲ್ಲ. ಆದರೆ, ನಾಯಕತ್ವ ಬದಲಾವಣೆಯ ಬೇಡಿಕೆಗೆ ಸೊಪ್ಪು ಹಾಕಕೂಡದು. ಒಮ್ಮೆ ಮಣಿದರೆ ತಪ್ಪು ಸಂಕೇತ ಹೊರಹೊಮ್ಮಲು ಅವಕಾಶ ನೀಡಿದಂತಾಗುತ್ತದೆ ಎಂಬುದು ವರಿಷ್ಠರ ಆಲೋಚನೆ. 
 
ಆದರೆ, ರಾಜಕಾರಣದಲ್ಲಿ ಹಸಿಬಿಸಿ ಅನುಭವದ ರೆಡ್ಡಿ ಸೋದರರು ಯಡಿಯೂರಪ್ಪ ತಲೆದಂಡಕ್ಕಾಗಿ ನಡೆಸಿರುವ ಸಮರದಲ್ಲಿ ಹೈಕಮಾಂಡ್ ನಿರ್ಧಾರ ಕೇಳಿದ ನಂತರ ಹಿಂದೆ ಸರಿಯುವರೇ ಅಥವಾ ಹಗ್ಗ ಹರಿಯುವ ತನಕ ಜಗ್ಗಲು ತೋಳು ಮಡಿಸಿ ನಿಂತಿದ್ದಾರೆಯೇ ಎಂಬುದನ್ನು ಆಧರಿಸಿ ಭವಿಷ್ಯದ ಬೆಳವಣಿಗೆಗಳು ರೂಪ ಪಡೆಯಲಿವೆ. 

ವರಿಷ್ಠರ ರಾಜಿ ಸೂತ್ರ 
ಕಾರ್ಯವೈಖರಿ ತಿದ್ದಿಕೊಳ್ಳುವಂತೆ ಸಿ‌ಎಂಗೆ ತಾಕೀತು 
ಸರ್ಕಾರದಲ್ಲಿ ಕೋರ್ ಕಮಿಟಿಯಂತಹ ವ್ಯವಸ್ಥೆ 
ಶಾಸಕರ ದೂರಿಗೆ ಸ್ಪಂದಿಸಲು ಸರ್ಕಾರಕ್ಕೆ ಸೂಚನೆ 
ವರ್ಗಾವಣೆಗಳ ಮರುವಿಮರ್ಶೆ 
ಯಡಿಯೂರಪ್ಪನವರ ಕೆಲ ಆಪ್ತ ತಲೆಗಳ ದಂಡ 
ಮಂತ್ರಿ ಸ್ಥಾನ ಒಪ್ಪಿಕೊಳ್ಳಲು ಶೆಟ್ಟರ್ ಮನವೊಲಿಕೆ 
ರೆಡ್ಡಿ ಸೋದರರಿಗೆ ಒಂದು ಲಕ್ಷ್ಮಣರೇಖೆ 

ರೆಡ್ಡಿಗಳ ಸಡ್ಡಿನ ಸೂತ್ರ 
ತಾಕೀತು ಸಾಲದು, ಹುದ್ದೆಯಿಂದ ಇಳಿಸಬೇಕು 
ನಾಯಕ ಬದಲಾಗಬೇಕು, ಕೋರ್ ಕಮಿಟಿ ಬೇಕು 
ಸಿ‌ಎಂ ೧೬ ತಿಂಗಳಿಂದ ನಮ್ಮನ್ನು ಆಲಿಸಲಿಲ್ಲ 
ವರ್ಗಾವರ್ಗಿ ಮುಗಿದ ಮೇಲೆ ಈಗೇನು ಉಳಿದಿದೆ? 
ಹೊಸ ಸಂಪುಟದಲ್ಲಿ ಶೋಭಾ ಇರಬಾರದು 
ಶೆಟ್ಟರ್ ಅವರೇ ಮುಖ್ಯಮಂತ್ರಿಯಾಗಲಿ 
ಲಕ್ಷ್ಮಣರೇಖೆ ದಾಟಿಲ್ಲ, ಪಕ್ಷಕ್ಕಾಗೇ ಈ ಹೋರಾಟ 

ಹಿಡಿಯಷ್ಟು ರಾಜಕಾರಣಿಗಳು ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಇಂಥವರಿಗೆ ರಾಜ್ಯವನ್ನು ಒತ್ತೆಯಿಡಲು ಸಾಧ್ಯವಿಲ್ಲ. ತಾಯಿ ಭುವನೇಶ್ವರಿಯೇ ನನ್ನನ್ನು ರಕ್ಷಿಸುತ್ತಾಳೆ. 
-ಬಿ.ಎಸ್. ಯಡಿಯೂರಪ್ಪ 

ರಾಜ-ಮಹಾರಾಜರು ಆಳಿ ಹೋಗಿರುವ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಯಾವ ಲೆಕ್ಕ? ನಾಟಕ ಆಡಿದರೆ, ಮೊಸಳೆ ಕಣ್ಣೀರು ಸುರಿಸಿದರೆ ನಾಡಿನ ಜನತೆ ಯಾರನ್ನೂ ಸುಮ್ಮನೆ ಬಿಡಲ್ಲ. 
- ಬಿ. ಜನಾರ್ದನರೆಡ್ಡಿ 

ನಮ್ಮ ನಾಡಿನ ಅಮೂಲ್ಯ ಅದಿರನ್ನು ವಿದೇಶಗಳಿಗೆ ಮಾರಿ ಬಂದ ಹಣದಿಂದ ರಾಜಕೀಯ ಮಾಡುವವರು ನಿರ್ನಾಮ ಆಗಲೇ ಬೇಕು. ನನ್ನ ನೈತಿಕ ಬೆಂಬಲ ನಿಮಗೆ 
(ಯಡಿಯೂರಪ್ಪಗೆ) ಇದೆ. 
-ಯು.ಆರ್. ಅನಂತಮೂರ್ತಿ

ಸೌಜನ್ಯ: ಕನ್ನಡಪ್ರಭ


Share: