ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ನಿಷ್ಕ್ರಿಯಗೊಳಿಸಿ, ರಾಜಾರೋಷವಾಗಿ ಅಕ್ರಮ ಗೋಸಾಗಾಟಕ್ಕೆ ಅನುವು ಮಾಡಿಕೊಟ್ಟಿರುವುದನ್ನು ವಿರೋಧಿಸಿ, ಬಿಜೆಪಿ ಮಂಡಲದ ವತಿಯಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲ್ಲೂಕು ಆಡಳಿತ ಕಚೇರಿ ಎದುರು ಕೆಲಹೊತ್ತು ಧರಣಿ ಕುಳಿತು ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ, "ಜಿಲ್ಲಾ ಉಸ್ತುವಾರಿ ಸಚಿವರು ಭಟ್ಕಳದ ಚೆಕ್ ಪೋಸ್ಟ್‌ಗಳನ್ನು ಬಂದ್ ಮಾಡಿಸಿ, ಅಕ್ರಮ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಪ್ರತಿ ದಿನ ಗೋಸಾಗಾಟ ನಡೆಯುತ್ತಿದೆ. ಅಧಿಕಾರಿಗಳು ತಮ್ಮ ಕೆಲಸ ಪಾರದರ್ಶಕವಾಗಿ ಮಾಡಬೇಕು. ಅದನ್ನು ಬಿಟ್ಟು, ಸಚಿವರ ಮಾತನ್ನು ಕೇಳುವುದನ್ನು, ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ಮೊದಲು ಬಿಡಬೇಕು. ಸಚಿವರ ಮಾತಿನಂತೆ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ," ಎಂದು ಎಚ್ಚರಿಕೆ ನೀಡಿದರು. "24 ಗಂಟೆಯೊಳಗೆ ಭಟ್ಕಳದಲ್ಲಿ ಸ್ಥಾಪಿಸಲಾದ ನಾಲ್ಕೂ ಚೆಕ್ ಪೋಸ್ಟ್‌ಗಳನ್ನು ಪುನರಾರಂಭಿಸಿ, ಬಂದೋಬಸ್ತ್ ಹೆಚ್ಚಿಸಿ, ಗೋಸಾಗಾಟ ಸೇರಿದಂತೆ ಅಕ್ರಮ ಗೋಸಾಗಾಟ, ಗೋಹತ್ಯೆಗೆ ಕಡಿವಾಣ ಹಾಕಬೇಕು," ಎಂದು ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಹಳೇ ಅತಿಕ್ರಮಣದಾರರು ಸಂಕಷ್ಟದಲ್ಲಿದ್ದಾರೆ. "ಸಚಿವರಾಗಿದ್ದವರು ತಮ್ಮ ಒಡೆತನದ ಶಾಲೆ ಬಳಿ 2.5 ಎಕರೆ ಅರಣ್ಯಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ. ಜವಾಬ್ದಾರಿಯುತ ಸಚಿವರು ಈ ರೀತಿ ಅರಣ್ಯ ಭೂಮಿ ಅತಿಕ್ರಮಣ ಮಾಡುವುದು ಸರಿಯೇ?" ಎಂದು ಪ್ರಶ್ನಿಸಿದ ಅವರು, "ಕೂಡಲೇ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸುವ ಕೆಲಸ ಮಾಡಬೇಕು," ಎಂದು ಆಗ್ರಹಿಸಿದರು.
ಮಾಜಿ ಪಶ್ಚಿಮ ಘಟ್ಟ ಸಂರಕ್ಷಣೆ ಆಯೋಗದ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, "ಈಗಾಗಲೇ ಸಾವಿರಾರು ಗೋವುಗಳು ಭಟ್ಕಳ ಪಟ್ಟಣದಲ್ಲಿ ಜಮಾ ಆಗಿವೆ. ಅಕ್ರಮವಾಗಿ ಗೋಸಾಗಾಟವನ್ನು ನೀವು ತಡೆಯದಿದ್ದರೆ, ನಮ್ಮ ಕಾರ್ಯಕರ್ತರು ತಡೆಯುವುದು ಅನಿವಾರ್ಯವಾಗಿದೆ. ಗೋಸಾಗಾಟ ತಡೆಯದಾಗ ಕಾನೂನು ಚೌಕಟ್ಟಿನಲ್ಲಿ ಏನು ನಡೆಯುತ್ತದೆ, ಅದು ಒಂದು ಭಾಗವಾಗಿರುತ್ತದೆ. ನಾವು ತಡೆಯಬೇಕಾದರೆ, ಎಲ್ಲಾ ಹೋರಾಟಕ್ಕೆ ಸಿದ್ದರಾಗಿ ತಡೆಯುತ್ತಿದ್ದೇವೆ," ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನ ಮೆರವಣಿಗೆ ಶಂಸುದ್ದೀನ್ ಮಾರ್ಗವಾಗಿ ತಾಲ್ಲೂಕು ಆಡಳಿತಕ್ಕೆ ತಲುಪಿತು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಪ್ರಮುಖರಾದ ದಿನೇಶ ನಾಯ್ಕ, ಮೋಹನ ನಾಯ್ಕ, ಸುರೇಶ ನಾಯ್ಕ, ಭಾಸ್ಕರ ದೈಮನೆ, ವಿಷ್ಣುಮೂರ್ತಿ ಹೆಗಡೆ, ಪ್ರಮೋದ ಜೋಷಿ, ರಾಘು ನಾಯ್ಕ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು