ಬೆಂಗಳೂರು, ಮಂಗಳವಾರ, 29 ಡಿಸೆಂಬರ್ :
ಸುಗಮ ಸಂಗೀತ ಲೋಕದ ಕಂಚಿನ ಕಂಠದ ಗಾಯಕ ಸಿ.ಅಶ್ವಥ್(70ವ) ಮಂಗಳವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಶ್ವಥ್ ಅವರು ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದ ಪರಿಣಾ ಮ ಇಂದು ತಮ್ಮ ಗಾನ ನಿಲ್ಲಿಸಿದ್ದಾರೆ. ತಮ್ಮ 71ನೇ ಹುಟ್ಟು ಹಬ್ಬದ ದಿನ(ಡಿ.29)ದಂದೇ ಅಶ್ವ ಥ್ ಇಹಲೋಕ ತ್ಯಜಿಸಿರುವುದು ಅಶ್ವಥ್ ಅಭಿಮಾನಿಗಳಲ್ಲಿ ದಿಗ್ಭ್ರಾಂತಿ ಮೂಡಿಸಿದೆ.
ಭಾವಗೀತೆ ಮತ್ತು ಜಾನಪದ ಗೀತೆಗಳ ಹಾಡಿಗೆ ಜೀವ ತುಂಬುವ ಮೂಲಕ ಲಕ್ಷಾಂತರ ಸಂಗೀ ತಾಭಿಮಾನಿಗಳಲ್ಲಿ ರೋಮಾಂಚನ ಮೂಡಿಸುತ್ತಿದ್ದ ಅಶ್ವಥ್ ನಿಧನ ಸಂಗೀತ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಂಗೀತ ಕಾರ್ಯಕ್ರಮಗಳಿಂದ ಮನೆ ಮಾತಾದ ಅಶ್ವಥ್ ಸಾವಿರಾ ರು ಯವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದರು.
1939 ಡಿಸೆಂಬರ್ 29ರಂದು ಹಾಸನದ ಚನ್ನರಾಯಪಟ್ಟಣದಲ್ಲಿ ಜನಿಸಿದ್ದ ಸಿ.ಅಶ್ವಥ್ ಸುಮಾರು 27ವರ್ಷಗಳ ಕಾಲ ಐಐಟಿಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ರಂಗಭೂಮಿ, ಕಾಕನಕೋಟೆ ಮೂ ಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಜನಮೆಚ್ಚುಗೆ ಪಡೆದ ಹೆಮ್ಮೆ ಅಶ್ವಥ್ ಅವರದ್ದು. ಮೈಸೂರು ಮಲ್ಲಿಗೆ, ಶ್ರಾವಣ ಬಂತು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಆಲ್ಬಮ್ ಹೊರಬಂದಿತ್ತು.
ಬೆಂಗಳೂರು: ಕನ್ನಡದ ಸಂಗೀತ ಸಾಮ್ರಾಜ್ಯದ ತಾರೆ ಸಿ. ಅಶ್ವಥ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅವರು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
೧೯೩೯ ಡಿಸೆಂಬರ್ ೨೯ರಂದು ಜನಿಸಿದ್ದ ಅವರು, ಸಂಗೀತದಲ್ಲೇ ಸಾಧನೆ ಮಾಡಿದವರು. ಬಾಲ್ಯ ದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು, ಗುರುಗಳಾದ ದೇವಗಿರಿ ಶಂಕರ್ ರಾವ್ ರವರಲ್ಲಿ ಸಂಗೀತಾಭ್ಯಾಸ ಮಾಡಿದರು. ಕಾಕನಕೋಟೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡು ವ ಮೂಲಕ ಅವರು ಚಿತ್ರೋದ್ಯಮಕ್ಕೆ ಕಾಲಿಟ್ಟರು.
ಅಲ್ಲಿಂದ ಪ್ರಾರಂಭವಾದ ಅವರ ವಿಶಿಷ್ಟ ಛಾಪು, ನಂತರ ಸುಗಮ ಸಂಗೀತದೆಡೆಗೂ ಹೊರಳಿತು. ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಹಾಡುಗಳು, ಸುಬ್ಬಾಭಟ್ಟರ ಮಗಳೇ ಮುಂತಾದ ಧ್ವನಿಸುರುಳಿ ಅವರನ್ನು ಯಶಸ್ಸಿನ ಹಾಗೂ ಜನಪ್ರಿಯತೆಯ ಉತ್ತುಂಗಕ್ಕೇರಿಸಿದವು. ಸುಗಮ ಸಂಗೀತದಲ್ಲೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಸಿ. ಅಶ್ವಥ್, ಭಾವಗೀತೆಗಳ ಲೋಕಕ್ಕೇ ಹೊಸ ಮೆರುಗನ್ನು ತಂದಿತ್ತವರು.
ತಮ್ಮ ವಿಭಿನ್ನ ಪ್ರಯೋಗವಾದ `ಕನ್ನಡವೇ ಸತ್ಯ' ಕಾರ್ಯಕ್ರಮದ ಮೂಲಕ ಅಶ್ವಥ್, ಕನ್ನಡದ ಮನೆ ಮಾತಾದಾರು. ಕನ್ನಡದ ಇತಿಹಾಸದಲ್ಲೇ `ಕನ್ನಡವೇ ಸತ್ಯ' ಒಂದು ಮೈಲಿಗಲ್ಲಾಗಿದೆ. ಸಂಗೀತವನ್ನು ತಮ್ಮದೇ ಆದ ಸೂಕ್ಷ ಒಳನೋಟದಿಂದ ನೋಡುತ್ತಿದ್ದ ಅಶ್ವಥ್, ತಮ್ಮನ್ನು ತಾವು ಸಂಗೀತ ಸಂಯೋಜರೆಂದು ಹೇಳಿಕೊಳ್ಳದೇ, `ಸ್ವರ ಸಂಯೋಜಕರೆಂದೇ ಕರೆದುಕೊಳ್ಳುತ್ತಿದ್ದರು.
ಇಂದು ಡಿಸೆಂಬರ್. ೨೯ ಅವರ ೭೧ನೇ ಜನ್ಮದಿನದಂದೇ ಅವರು ವಿಧಿವಶರಾಗಿರುವು ದು ಕಾಕತಾಳೀಯ ಹಾಗೂ ವಿಪರ್ಯಾಸ.
ರಘುದೀಕ್ಷಿತ್ ಸಂತಾಪ: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ `ಸೈಕೋ' ಖ್ಯಾತಿಯ ರಘು ದೀಕ್ಷಿತ್, ಸಿ. ಅಶ್ವಥ್‌ರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು `ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, `ಕನ್ನಡ ಸಾಹಿತ್ಯ ಲೋಕದ ಅನುಪಮ ಗೀತೆಗಳ ನ್ನು ಕನ್ನಡದ ಜನರಿಗೆ ತಲುಪಿಸಿದ ಮಹಾನ್ ಸಂಗೀತ ನಿರ್ದೇಶಕ ಹಾಗೂ ಗಾಯಕ' ಎಂದು ಹೊಗಳಿದ್ದಾರೆ.
`ಅವರ ಕನ್ನಡ ಸುಗಮ ಸಂಗೀತ ಬಗೆಗಿದ್ದ ಹಲವು ಯೋಜನೆಗಳಿಗೆ, ಅವರ ನಿಧನದ ನಂತರ ಪ್ರಶ್ನಾರ್ಥಕ ಚಿಹ್ನೆ ಮೂಡಿದ್ದು, ಮುಂದೆ ಅದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ, ನನ್ನಂಥ ಯುವ ಸಂಗೀತ ನಿರ್ದೇಶಕರ ಮೇಲಿದೆ. ಅಂಥ ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಅಶ್ವಥ್ ರವರ ಯೋಜನೆ ಹಾಗೂ ಕನಸುಗಳನ್ನು ನನಸು ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸುತ್ತೇವೆ' ಎಂದು ರಘು ದೀಕ್ಷಿತ್ ಹೇಳಿದ್ದಾರೆ.
ಅಶ್ವತ್ಥ್ ನಿಧನಕ್ಕೆ ಯಡಿಯೂರಪ್ಪ ಶೋಕ
ಬೆಂಗಳೂರು, ಡಿ. 29 : ಹುಟ್ಟಿದ ದಿನವೇ ಕೊನೆಯುಸಿರೆದ ಸುಗಮ ಸಂಗೀತ ಕ್ಷೇತ್ರದ ಅಪ ರೂಪದ ಗಾಯಕ ಸಿ ಆಶ್ವತ್ಥ್ (70) ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸಿ ಅಶ್ವತ್ಥ್ ನಿಧನದಿಂದ ಸುದ್ದಿ ಆಘಾತ ತರಿಸಿದೆ. ಅವರಿಲ್ಲ ಸಂಗೀತ ಕ್ಷೇತ್ರ ಬಡವಾಗಿದೆ. ಸುಗಮ ಸಂಗೀತ, ಚಲನಚಿತ್ರದಲ್ಲಿ ತನ್ನದೇ ಆದ ಛಾಪು ಮೂಡಿ ಸಿದ್ದ ಅಶ್ವತ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.
ಅಶ್ವತ್ಥ್ ನಿಧನದ ಅಂಗವಾಗಿ ವಿಧಾನಮಂಡಲದ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಅಶ್ವತ್ಥ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ವಿಚಾರಿ ಸಿದ್ದರು. ಅಲ್ಲದೇ, ಅಶ್ವತ್ಥ್ ಅವರ ಆಸ್ಪತ್ರೆಯ ಅಷ್ಟೂ ಖರ್ಚನ್ನು ಸರಕಾರ ಭರಿಸಲಿದೆ ಎಂದು ಹೇಳಿಕೆ ನೀಡಿದ್ದರು.
ಅಶ್ವತ್ಥ ಅವರ ಪಾರ್ಥೀವ ಶರೀರವನ್ನು ಜೆಸಿ ರಸ್ತೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಹಿಂಭಾಗ ಸಂಸ ಬಯಲು ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ದರುಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತ ಶಿಶುನಾಳ ಷರೀಫರ 'ತರವಲ್ಲ ತಗೀ ನಿನ್ನ ತಂಬೂರಿ... 'ಕಾಮನಬಿಲ್ಲು ಚಿತ್ರದ 'ಉಳುವಾ ಯೋಗಿ ನೋಡಲ್ಲಿ 'ಎಂಬ ಮನೋಜ್ಞ ಗೀತೆಗಳನ್ನು ಹಾಡುವ ರಾಜ್ಯದ ಸಂಗೀತ ಪ್ರಿಯರ ಮನೆಮಾತಾಗಿದ್ದ ಅಶ್ವತ್ಥ್ ಅವರು ಗೀತೆ ಮುಗಿಸಿ ಎದ್ದು ಹೋಗಿದ್ದಾರೆ. ಅಶ್ವತ್ಥ್ ಕಂಠಸಿರಿಯಲ್ಲಿ ಹೊರಬಂದಿರುವ ಹಾಡುಗಳು ಮಾತ್ರ ಅಜರಾಮರವಾಗಿವೆ.
ಅಶ್ವಥ್ ಹಾಡಿದ ಸಂತ ಶಿಶುನಾಳ ಶರೀಫರ ಜನಪ್ರಿಯ ಗೀತೆಗಳಲ್ಲೊಂದಾದ 'ತರವಲ್ಲ ತಗಿ ನಿನ್ನ ತಂಬೂರಿ...' ಓದುಗರಿಗಾಗಿ...
ತರವಲ್ಲ ತಗಿ ನಿನ್ನ ತಂಬೂರಿ - ಸ್ವರ
ಬರದೆ ಬಾರಿಸದಿರು ತಂಬೂರಿ
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ
ಮದ್ದಲಿ ದನಿಯೊಳು ತಂಬೂರಿ - ಅದ
ತಿದ್ದಿ ನುಡಿಸಬೇಕೊ ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ
ಬಾಳಬಲ್ಲವರಿಗೆ ತಂಬೂರಿ - ದೇವ
ಫಾಲಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ
ಸತ್ಯ ಶರಧಿಯೊಳು ತಂಬೂರಿ - ನಿತ್ಯ
ಉತ್ತಮರಾಡುವ ತಂಬೂರಿ
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ
ಹಸನಾದ ಮ್ಯಾಳಕೆ ತಂಬೂರಿ - ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದುಪುರಾಣದಿ
ಹಸನಾಗಿ ಬಾರಿಸೊ ತಂಬೂರಿ
ಗಾಯಕ ಸಿ.ಅಶ್ವತ್ಥ್
ಸೌಜನ್ಯ: ವೆಬ್ ದುನಿಯಾ