ಬೆಂಗಳೂರು, ಡಿ.10:‘ಎಂದಾದರು ಬಾ, ಎಂತಾದರು ಬಾ, ಎಂದೆಂದಿಗೂ ಕನ್ನಡಿಗರ ಒಲವಾಗಿ ಬಾ!’
ಹೊಸ ರಾಜ್ಯವಾಗಿ ಉದಯಿಸಲಿರುವ ತೆಲಂಗಾಣ ಹೊಸ ನೆರೆ ರಾಜ್ಯವಾಗಿ ಕರ್ನಾಟಕದೊಂದಿಗೆ ಉತ್ತಮ ಸ್ನೇಹ ಸೌಹಾರ್ದಯುತ ಬಾಂಧವ್ಯ ಹೊಂದಲಿ ಎಂಬ ಈ ಆಶಯ ಎಲ್ಲ ಕನ್ನಡಿಗರದು.
ಕನ್ನಡಿಗರ ಸೌಮ್ಯ ಸ್ವಭಾವದ ದುರ್ಲಾಭ ಪಡೆದುಕೊಳ್ಳುವ ನೆರೆರಾಜ್ಯಗಳು ನೀರಾವರಿ, ಗಡಿ ವಿಷಯದಲ್ಲಿ ಕರ್ನಾಟಕ ಹಾಗೂ ಕನ್ನಡಿಗರ ಮೇಲೆ ಮೇಲೆ ಸವಾರಿ ಮಾಡುತ್ತಲೇ ಬಂದಿವೆ. ಒಂದೆಡೆ ನೆರೆಯ ಆಂಧ್ರಪ್ರದೇಶ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಹೊರಬೀಳುವ ಮೊದಲೇ ತನಗಿಷ್ಟ ಬಂದಂತೆ ೧೭ಕ್ಕೂ ಹೆಚ್ಚು ಯೋಜನೆಗಳನ್ನು ಅಕ್ರಮವಾಗಿ ಕೈಗೆತ್ತಿಕೊಂಡು ಕೃಷ್ಣಾ ನದಿ ನೀರು ಕಬಳಿಸುವ ಹರಸಾಹಸ ನಡೆಸುತ್ತ ಬಂದಿದೆ.
ಆಂಧ್ರಕ್ಕೆ ಸುಪ್ರೀಂ ಕೋರ್ಟ್, ಕೃಷ್ಣಾ ನ್ಯಾಯಾಧಿಕರಣ ಪದೇ ಪದೇ ಛೀಮಾರಿ ಹಾಕಿದ್ದರೂ ಕಾಲು ಕೆರೆದು ಜಗಳಕ್ಕೆ ಬರುವುದನ್ನು ಆಂಧ್ರ ಬಿಟ್ಟಿಲ್ಲ.
ಮತ್ತೊಂದೆಡೆ ಹಿಂದಿನಿಂದ ಇರುವ ಕಾವೇರಿ ನದಿ ವಿವಾದ ಹಾಗೂ ಹೊಸ ಹೊಗೇನಕಲ್ ಯೋಜನೆ ಮೂಲಕ ತಮಿಳುನಾಡು ಸರ್ಕಾರ ಕನ್ನಡಿಗರ ಸಹನೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದ್ದರೆ, ಇನ್ನೊಂದೆಡೆ ಕಳಸಾ-ಬಂಡೂರಿ ನಾಲಾ ಕುಡಿಯುವ ನೀರು ಯೋಜನೆಗೆ ಗೋವಾ ಸರ್ಕಾರ ತೊಡರುಗಾಲು ಹಾಕಿದೆ.ನೂತನ ರಾಜ್ಯವಾದರೆ ಕರ್ನಾಟಕದೊಂದಿಗಿನ ಅಂತಾರಾಜ್ಯ ವಿವಾದಗಳೇನೂ ಬಗೆಹರಿಯುವುದಿಲ್ಲ. ಇದುವರೆಗೆ ಆಂಧ್ರ ರಾಜ್ಯದೊಂದಿಗೆ ಹೋರಾಡಬೇಕಾಗಿದ್ದ ನಮಗೆ ಇನ್ನು ಮುಂದೆ ಮತ್ತೊಂದು ರಾಜ್ಯವೂ ಸೇರಿದಂತಾಗುತ್ತದೆ ಅಷ್ಟೆ. ತೆಲಂಗಾಣ ವ್ಯಾಪ್ತಿಗೆ ಒಳಪಡಲಿರುವ ಜಿಲ್ಲೆಗಳ ಗಡಿ ಈಚೆಗಿನ ಪರಿಸ್ಥಿತಿ ಹೇಗಿದೆ ಎಂಬುದರ ಅವಲೋಕನ ಇಲ್ಲಿದೆ.
ವಿವಾದಾತ್ಮಕ ಸಂಗಮ ಬಂಡಾ ಯೋಜನೆ: ಗುಲ್ಬರ್ಗ ಜಿಲ್ಲೆಯ ಗುರುಮಠಕಲ್ ಗಡಿಯಿಂದ ೧೫ ಕಿ.ಮೀ ದೂರದಲ್ಲಿ ತಲೆ ಎತ್ತಿರುವ ಬಹುಕೋಟಿ ರು. ಮೊತ್ತದ ಸಂಗಮ ಬಂಡಾ ನೀರಾವರಿ ಯೋಜನೆ ಕೃಷ್ಣಾ ಕೊಳ್ಳದ ವಿವಾದಾತ್ಮಕ ಯೋಜನೆಗಳಲ್ಲೊಂದು. ಹೊಸ ತೆಲಂಗಾಣ ರಾಜ್ಯದೊಂದಿಗೆ ಬರುವ ದಿನಗಳಲ್ಲಿ ಈ ಯೋಜನೆ ಕರ್ನಾಟಕ- ತೆಲಂಗಾಣ ನಡುವಿನ ಜಲ ಕದನಕ್ಕೆ ಕಾರಣವಾಗಬಹುದಾಗಿದೆ.ಹಳ್ಳಕ್ಕೆ ಅಡ್ಡಲಾಗಿ ಬಾಂದಾರು ನಿರ್ಮಿಸಿ ನೀರನ್ನು ಶೇಖರಿಸುವ ಈ ಯೋಜನೆ ಅಕ್ರಮ. ಇಲ್ಲಿನ ಹಿನ್ನೀರು ಗುರುಮಠಕಲ್‌ನ ಗಡಿಯಲ್ಲಿನ ಸಾವಿರಾರು ಹೆಕ್ಟರ್ ಫಲವತ್ತಾದ ಕೃಷಿ ಭೂಮಿ ಆಪೋಶನಗೈಯಲಿದೆ ಎಂಬ ಆತಂಕಗಳು ಇವೆ. ಈಗಾಗಲೇ ರಾಜ್ಯ ಸರ್ಕಾರ ಈ ಯೋಜನೆ ಬಗ್ಗೆ ಕೇಂದ್ರ ಜಲ ಆಯೋಗದ ಮುಂದೆ ಆಕ್ಷೇಪ ಸಹ ಎತ್ತಿದೆ.
ನಾರಾಯಣಪುರ ಜಲಾಶಯ: ಕೃಷ್ಣಾ ನದಿ ಬಿಜಾಪುರದಿಂದ ಗುಲ್ಬರ್ಗ ಜಿಲ್ಲೆಗೆ ಹರಿದು ಬಂದು ನೇರವಾಗಿ ತೆಲಂಗಾಣದ ಮೆಹಬೂಬ ನಗರ ಜಿಲ್ಲೆ ಪ್ರವೇಶಿಸುತ್ತದೆ. ಗುಲ್ಬರ್ಗದಲ್ಲಿರುವ ನಾರಾಯಣಪುರ ಜಲಾಶಯ ತೆಲಂಗಾಣ, ಕರ್ನಾಟಕದ ನಡುವಿನ ಮಹತ್ವದ ಜಲಾಶಯ. ಮಳೆಗಾಲದಲ್ಲಿ ಹೆಚ್ಚಿನ ನೀರು ಇಲ್ಲಿಂದ ಹೊರ ಬಿಟ್ಟಾಗ ಮೆಹಬೂಬ ನಗರ ಪ್ರವಾಹಕ್ಕೆ ಗುರಿಯಾಗುತ್ತದೆ. ಸದಾಕಾಲ ಈ ವಿಚಾರವೇ ಸುದ್ದಿಗೆ ಗ್ರಾಸವಾಗಿರುತ್ತದೆ. ಬರುವ ದಿನಗಳಲ್ಲಿ ಈ ಸಂಗತಿಯೂ ಉಭಯ ರಾಜ್ಯಗಳ ನಡುವಿನ ಚರ್ಚೆಯ ಸಂಗತಿಯಾಗುವ ಸಂಭವವಿದೆ.
ಗಡಿ ಕನ್ನಡಿಗರಿಗೆ ಸಂಕಷ್ಟ ಸಾಧ್ಯತೆ: ತೆಲಂಗಾಣ ವ್ಯಾಪ್ತಿಗೆ ಒಳಪಡುವ ಆಂಧ್ರದ ಮೆಹಬೂಬ್‌ನಗರ ಜಿಲ್ಲೆಯು ರಾಯಚೂರು ಜಿಲ್ಲೆಯ ಗಡಿಯಲ್ಲಿದ್ದು, ಅದರಿಂದ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಮತ್ತಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆಯಿದೆ. ತೆಲಂಗಾಣ ರಾಜ್ಯಕ್ಕೆ ಸೇರ್ಪಡೆಗೊಳ್ಳುವ ಜುರಾಲಾ ನೀರಾವರಿ ಯೋಜನೆಯ ಹಿನ್ನೀರಿನಿಂದ ಆಗುವ ಸಮಸ್ಯೆಗಳ ಪರಿಹಾರದ ವಿಷಯದಲ್ಲಿ ಗೊಂದಲ ಏಳುವ ಸಾಧ್ಯತೆಯಿದೆ.ರಾಯಚೂರು ಜಿಲ್ಲೆಯ ದೇವದುರ್ಗ ಗೂಗಲ್ ಬ್ರಿಡ್ಜ್ ಕಂ- ಬ್ಯಾರೇಜ್ ವಿಷಯದಲ್ಲಿ ಕಳೆದ ಅನೇಕ ವರ್ಷಗಳಿಂದ ಆಂಧ್ರದ ತಗಾದೆ ಮುಂದುವರಿದಿದೆ. ಈಗ ತೆಲಂಗಾಣ ಪ್ರದೇಶದ ಅಭಿವೃದ್ಧಿ ವಿಷಯ ಬಂದಾಗ ನೀರಾವರಿ ಯೋಜನೆಗಳೇ ಪ್ರಾಮುಖ್ಯತೆ ಪಡೆಯಲಿವೆ. ಆಗ ಗೂಗಲ್ ಯೋಜನೆಯಡಿ ನೀರು ನಿಲುಗಡೆಗೆ ತೆಲಂಗಾಣದವರು ಅಡ್ಡಿಯಾಗಬಹುದು.ಇದೇ ವೇಳೆ ಆಂಧ್ರದ ಗಡಿ ಭಾಗದ ಮೆಹಬೂಬ್‌ನಗರ ಜಿಲ್ಲೆಯ ಮಾಗನೂರು ಮಂಡಲದ ವ್ಯಾಪ್ತಿಯಲ್ಲಿನ ೧೩ ಕನ್ನಡ ಭಾಷಿಕರಿರುವ ಹಳ್ಳಿಗಳು ತೆಲಂಗಾಣ ವ್ಯಾಪ್ತಿಗೆ ಸೇರುವುದರಿಂದ ಅಲ್ಲಿನ ಕನ್ನಡ ಭಾಷಿಕರು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಯಿದೆ.ಕನ್ನಡ ಮಾಧ್ಯಮದ ಶಾಲೆಗಳಿಗೆ ಅಲ್ಲಿ ಕಂಟಕ ಎದುರಾಗಿ ತೆಲುಗು ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುವುದರಿಂದ ಕನ್ನಡ ಭಾಷಿಕರು ತೊಂದರೆಗೊಳಗಾಗುವ ಲಕ್ಷಣಗಳಿವೆ.
ನಾರಂಜಾ ನಾಲಾ ಇತ್ಯರ್ಥ?: ನೂತನ ರಾಜ್ಯ ರಚನೆಯಿಂದ ಬೀದರ್ ಗಡಿ ಭಾಗದಲ್ಲಿರುವ ಜಹೀರಾಬಾದ್ ಸಮೀಪ ಹಾದು ಹೋಗುವ ನಾರಂಜಾ ನದಿಯ ಕಾಲುವೆ ನೀರಿನ ಹಂಚಿಕೆಯ ಕುರಿತ ವಿವಾದ ಇತ್ಯರ್ಥವಾಗುವ ಸಂಭವಗಳಿವೆ ಎಂಬುದು ಸ್ಥಳೀಯರ ಆಶಯ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ತೆಲಂಗಾಣಕ್ಕೆ ಹೊಂದಿಕೊಂಡಿರುವ ಜಹೀರಾಬಾದ್ ಮತ್ತು ನಾರಾಯಣಖೇಡ್ ಸಮೀಪದಲ್ಲಿ ಮತ್ತಷ್ಟು ಕೈಗಾರಿಕೆಗಳು ಬೆಳೆಯುವ ಆಶಾ ಭಾವನೆ ಜಿಲ್ಲೆಯವರದು.
ತೆಲಂಗಾಣ ಸ್ಥಾಪನೆ ಆದರೆ ನಾವು ಮತ್ತು ‘ಮಹಾ’ ಒಟ್ಟಾಗಿ ಆಂಧ್ರದ ವಿರುದ್ಧ ಹೋರಾಡಿದಂತೆ ತೆಲಂಗಾಣ, ಆಂಧ್ರ ಸೇರಿ ಕರ್ನಾಟಕದ ವಿರುದ್ಧ ಹೋರಾಟ ಮಾಡುತ್ತವೆ.
-ಎಚ್.ಕೆ.ಪಾಟೀಲ್
ಮಾಹಿತಿ: ಕ.ಮ. ರವಿಶಂಕರ ಜೊತೆ ಗುಲ್ಬರ್ಗದಿಂದ ಶೇಷಮೂರ್ತಿ ಅವಧಾನಿ, ರಾಯಚೂರಿನಿಂದ ಜಗನ್ನಾಥ ದೇಸಾಯಿ, ಬೀದರ್‌ನಿಂದ ಶಶಿಕಾಂತ ಬೆಂಬುಳಗೆ.
ಸೌಜನ್ಯ: ಕನ್ನಡಪ್ರಭ