ಅಹ್ಮದಾಬಾದ್: ಗುಜರಾತ್‌ನ ಬನಾಸ್ಕಾಂತಾ ಜಿಲ್ಲೆಯಲ್ಲಿ ಗುರುವಾರ ಎಮ್ಮೆಗಳನ್ನು ಸಾಗಿಸುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ನಕಲಿ ಗೋರಕ್ಷಕರ ಗುಂಪೊಂದು ಹತ್ಯೆಗೈದಿದೆ.
ಇದು 'ಗುಂಪಿನಿಂದ ಥಳಿಸಿ ಹತ್ಯೆ'ಯ ಘಟನೆ ಎಂದು ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆಯೊಂದು ಬಣ್ಣಿಸಿದ್ದರೆ, ಪೊಲೀಸರು ಅದನ್ನು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ಐವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಹತ್ಯೆಯಾಗಿರುವ ವ್ಯಕ್ತಿಯನ್ನು ಬನಾಸ್ಕಾಂತಾ ಜಿಲ್ಲೆಯ ಸೇಸಾನ್ ನವಾ ಗ್ರಾಮದ ನಿವಾಸಿ ಮಿಶ್ರಿಖಾನ್ ಬಲೋಚ್ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಮಿಶ್ರಿಖಾನ್ ಮತ್ತು ಇನ್ನೋರ್ವ ಗ್ರಾಮಸ್ಥ ಹುಸೇನ್‌ಖಾನ್ ಹಜ್ಜಿಬಾಬುಖಾನ್ ಬಲೋಚ್ ದೀಸಾ ಪಟ್ಟಣದ ಜಾನುವಾರು ಸಂತೆಗೆ ಎರಡು ಎಮ್ಮೆಗಳನ್ನು ಸಾಗಿಸುತ್ತಿದ್ದಾಗ ಅವರ ವಾಹನದ ಟೈರ್ ಪಂಕ್ಚರ್ ಆಗಿತ್ತು.
ಈ ವೇಳೆ ಆರೋಪಿಗಳು ಅಲ್ಲಿಗೆ ವಾಹನದಲ್ಲಿ ಬಂದಿದ್ದರು. ಕಳೆದ ವರ್ಷದ ಜುಲೈನಲ್ಲಿ ತನ್ನೊಂದಿಗೆ ಜಗಳವಾಡಿದ್ದ ಆರೋಪಿಗಳು ತಮ್ಮ ವಿರುದ್ದ ಪೊಲೀಸ್ ದೂರುಗಳನ್ನು ದಾಖಲಿಸಿದ್ದಕ್ಕಾಗಿ ತನ್ನನ್ನು ನಿಂದಿಸತೊಡಗಿದ್ದರು ಎಂದು ಹುಸೇನ್‌ಖಾನ್ ಪೊಲೀಸರಿಗೆ ತಿಳಿಸಿದ್ದಾರೆ. ಆ ಸಂದರ್ಭದಲ್ಲಿಯೂ ಪೊಲೀಸ್ ದೂರುಗಳು ಎಮ್ಮೆಗಳ ಸಾಗಣೆ ಕುರಿತು ವಿವಾದಕ್ಕೆ ಸಂಬಂಧಿಸಿದ್ದವು.
ಆರೋಪಿಗಳು ಕೊಲ್ಲುವುದಾಗಿ ಬೆದರಿಕೆಯೊಡ್ಡಿದಾಗ ಹುಸೇನ್ ಖಾನ್ ಮತ್ತು ಮಿಶ್ರಿಖಾನ್ ತಮ್ಮ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದರು,ಆದರೆ ಪಂಕ್ಚರ್ ಆಗಿದ್ದ ಟೈರ್ ಒಡೆದಿತ್ತು. ಈ ವೇಳೆ ಹುಸೇನ್‌ಖಾನ್ ತಪ್ಪಿಸಿಕೊಂಡಿದ್ದರೆ ಮಿಶಿಖಾನ್ ಆರೋಪಿಗಳ ಕೈಗೆ ಸಿಕ್ಕಿಬಿದ್ದಿದ್ದ. ಆರೋಪಿಗಳು ಆತನನ್ನು ಕಬ್ಬಿಣದ ರಾಡ್‌ಗಳು ಮತ್ತು ಮಚ್ಚುಗಳಿಂದ ಹೊಡೆದು ಹತ್ಯೆಗೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಖೆರಾಜಸಿನ್ದ ವಘಲಾ, ನಿಕುಲಸಿನ, ಜಗತ್ನ್, ಪ್ರವೀಣ್ ಸಿನ್ನ ಮತ್ತು ಹಮೀರಭಾಯಿ ಠಾಕೋರ್ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಈ ಪೈಕಿ ಜಗತ್‌ಸಿನ್ನ ಮತ್ತು ಹಮೀರಭಾಯಿಯನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಲ್ಪಸಂಖ್ಯಾತರ ಸಮನ್ವಯ ಸಮಿತಿ ಗುಜರಾತ್ ಎಂಬ ಸ್ವಯಂಸೇವಾ ಸಂಘಟನೆಯು ಘಟನೆಯನ್ನು 'ಗುಂಪಿನಿಂದ ಹತ್ಯೆ 'ಎಂದು ಬಣ್ಣಿಸಿದೆ. ಇಂತಹ ಅಪರಾಧಗಳನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅದು ಡಿಜಿಪಿ ವಿಕಾಸ್ ಸಹಾಯ್ ಅವರನ್ನು ಆಗ್ರಹಿಸಿದೆ.
ಇದನ್ನು ಗುಂಪಿನಿಂದ ಹತ್ಯೆ ’ಎಂದು ಕರೆಯಲಾಗುವುದಿಲ್ಲ ಎಂದು ಹೇಳಿರುವ ಬನಾಸ್ಕಾಂತಾ ಎಸ್‌ಪಿ ಅಕ್ಷಯರಾಜ ಮಕ್ವಾನಾ ಅವರು,ಘಟನೆಯನ್ನು ಗುಂಪಿನಿಂದ ಹತ್ಯೆ ಎಂದು ಕರೆಯಲು ಕೆಲವು ಕೋಮು ಅಂಶಗಳು ಅಗತ್ಯವಾಗುತ್ತವೆ. ಜುಲೈ 2023ರಲ್ಲಿ ನಡೆದ ಘಟನೆಯಿಂದಾಗಿ ಈ ದಾಳಿ ನಡೆದಿರುವಂತೆ ಮತ್ತು ಆರೋಪಿಗಳಿಗೆ ಹತ್ಯೆಯ ಉದ್ದೇಶವಿರಲಿಲ್ಲ, ಅವರು ಮೃತನನ್ನು ಬೆದರಿಸಲು ಬಯಸಿದ್ದಂತೆ ಕಂಡು ಬರುತ್ತಿದೆ ಎಂದಿದ್ದಾರೆ.