ಹೊನ್ನಾವರ, ಅಕ್ಟೋಬರ್ 20: ತಾಲ್ಲೂಕಿನ ಹಡಿನಬಾಳ ಖರ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಗೇರಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೃತ ಮಹಿಳೆ ಶಾಲಿನಿ ಕೃಷ್ಣಶೆಟ್ಟಿ ಓರ್ವ ಗೃಹಿಣಿಯಾಗಿದ್ದು ಮುಗ್ವಾ ಕೊಂಡಾಕುಳಿಯ ನಾರಾಯಣ ಗೋವಿಂದ ಶೆಟ್ಟಿ ಎಂಬುವರ ಮಗಳಾಗಿದ್ದಾರೆ. ಅವರನ್ನು ಎರೆಡು ವರ್ಷದ ಕೆಳಗೆ ಕಡಗೇರಿಯ ಕೃಷ್ಣ ಗಣಪತಿ ಶೆಟ್ಟಿ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ.
ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಗಂಡ ವರದಕ್ಷಿಣೆಗಾಗಿ ಕಿರುಕುಳ ಸಹಾ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತನ ನೀಚ ಕೃತ್ಯಕ್ಕೆ ಆತನ ಸಹೋದರಿಯರಾದ ಭಾರತಿ ಗಣಪತಿ ಶೆಟ್ಟಿ, ಶಶಿಕಲಾ ಗಣಪತಿ ಶೆಟ್ಟಿ ಮತ್ತು ಮಹಾಲಕ್ಷ್ಮಿ ಗಣಪತಿ ಶೆಟ್ಟಿ ಸಹಾ ಸಹಕರಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತರ ತಾಯಿ ರಾಧಾ ನಾರಾಯಣ ಶೆಟ್ಟಿಯವರು ಈ ದೂರು ನೀಡಿದ್ದು ಪ್ರಕರಣವನ್ನು ಹೊನ್ನಾವರ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.