ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ರಾಜ್ಯದ ಎಲ್ಲ ತಾಲ್ಲೂಕಿಗೂ ಅಗ್ನಿಶಾಮಕ ಠಾಣೆ

ರಾಜ್ಯದ ಎಲ್ಲ ತಾಲ್ಲೂಕಿಗೂ ಅಗ್ನಿಶಾಮಕ ಠಾಣೆ

Tue, 20 Apr 2010 13:42:00  Office Staff   S.O. News Service
ರಾಜ್ಯದ ಎಲ್ಲ ತಾಲ್ಲೂಕಿಗೂ ಅಗ್ನಿಶಾಮಕ ಠಾಣೆ
ಬೆಂಗಳೂರು, ಏಪ್ರಿಲ್ ೨೦    -  ರಾಜ್ಯದ ೧೭೬ ತಾಲ್ಲೂಕುಗಳ ಪೈಕಿ ೧೩೬ ತಾಲ್ಲೂಕುಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ೧೬೦ ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ೪೦ ತಾಲ್ಲೂಕುಗಳಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚುವರಿ ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಗೃಹ ಸಚಿವ ಡಾ ವಿ. ಎಸ್. ಆಚಾರ್ಯ ಅವರು ತಿಳಿಸಿದರು.
    ಅವರು ಇಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಸೇವೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು.
    ಅಗ್ನಿಶಾಮಕ ದಳಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ಪ್ರತಿವರ್ಷ ೩೫ ಕೋಟಿ ರೂ ಹೆಚ್ಚಿನ ಅನುದಾನವನ್ನು ಇಲಾಖೆಗೆ ನೀಡುತ್ತಿದ್ದು, ೨೦೦೯-೧೦ ನೇ ಸಾಲಿನಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿಗೆ ವಿಶೇಷವಾಗಿ ೧೦ ಕೋಟಿ ರೂ.  ಅನುದಾನವನ್ನು ಬಿಡುಗಡೆಮಾಡಲಾಗಿದೆ. ಇಲಾಖೆಯ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯ ನೀಡುವ ಉದ್ದೇಶದಿಂದ ಕಲ್ಯಾಣ ನಿಧಿಗೆ ೨೫ ಲಕ್ಷ ರೂ ನೀಡುವ ಪ್ರಸ್ತಾವನೆ ಹಾಗೂ ಗೃಹರಕ್ಷಕರಿಗೆ ಗೌರವ ಧನ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಸಚಿವರು ತಿಳಿಸಿದರು.
    ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹ ಹಾಗೂ ಭೂಕುಸಿತ, ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತ, ಬಳ್ಳಾರಿಯ ಬಹುಮಹಡಿ ಕುಸಿತ ಈ ಸಂದರ್ಭಗಳಲ್ಲಿ ಗೃಹ ರಕ್ಷಕ ಹಾಗೂ ಅಗ್ನಿಶಾಮಕ ದಳಗಳು ಸಲ್ಲಿಸಿದ ಶ್ಲಾಘನೀಯ  ಸೇವೆಯನ್ನು  ಅವರು ಪ್ರಶಂಶಿಸಿದರು.
    ಇಲಾಖೆ ಏಪ್ರಿಲ್ ೧೪ ರಿಂದ ೨೦ ರವರೆಗೆ ನಡೆಸಿದ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ  ನಾಗರಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಅಗ್ನಿ ಸುರಕ್ಷತೆ ಬಗ್ಗೆ ಸರಳ ಭಾಷೆಯಲ್ಲಿ ಮಾರ್ಗದರ್ಶನ ನೀಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಅಗ್ನಿ ಸುರಕ್ಷತೆಯ ಮಸ್ಕಟ್‌ನ್ನು ಬಿಡುಗಡೆ ಮಾಡಿದರು.
    ಸಮಾರಂಭದಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಶ್ರೀ ಸುನೀಲ್ ಕುಮಾರ್, ಡಿ.ಜಿ.ಪಿ. ಶ್ರೀಮತಿ ಜೀಜಾ ಮಾಧವನ್ ಹರಿಸಿಂಗ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕ್ರಿಕೆಟ್ ಸ್ಟೇಡಿಯಂ ಬಾಂಬ್ ಸ್ಪೋಟ
    ಬಾಂಬ್ ಸ್ಪೋಟದ ನಂತರವೂ   ಕ್ರಿಕೆಟ್ ಪಂದ್ಯವನ್ನು ನಡೆಸಲು ಅವಕಾಶ ನೀಡಿದ್ದೇಕೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಇದೊಂದು ಒಳ್ಳೆಯ ನಿರ್ಧಾರ.  ಭಯದ ವಾತಾವರಣ ಸೃಷ್ಟಿಸಿದ್ದಲ್ಲಿ ಗೇಟುಗಳಲ್ಲಿ ಪ್ರೇಕ್ಷಕರು ತುಳಿತಕ್ಕೆ ಒಳಗಾಗುತ್ತಿದ್ದರು.   ಪಂದ್ಯಗಳನ್ನು ನವಿ ಮುಂಬಯಿಗೆ ಸ್ಥಳಾಂತರಿಸಿದ ಕಾರಣ ಭದ್ರತೆ ದೃಷ್ಟಿಯಿಂದಲ್ಲ,  ಇದಕ್ಕೆ ಬೇರೆ ಕಾರಣಗಳಿರಬೇಕು.  ಆ ಕಾರಣಗಳು ಯಾವುದೆಂಬುದನ್ನು  ಐಪಿ‌ಎಲ್ ಪದಾಧಿಕಾರಿಗಳನ್ನೇ ಕೇಳಬೇಕೆಂದರು.
    ಬಾಂಬ್ ಸ್ಪೋಟದ ಪ್ರಕರಣಕ್ಕೆ ಬಾಜಿದಾರರ ಕೈವಾಡವೂ ಇರಬಹುದು.  ಆ ಕೋನದಿಂದಲೂ ತನಿಖೆ ನಡೆಯುತ್ತಿದೆ ಎಂದರು.  
 ಅಗ್ನಿ ದುರಂತಗಳು ಸಂಭವಿಸುವುದನ್ನು  ತಪ್ಪಿಸಲು ಕ್ರಮ:
    ಅಗ್ನಿ  ದುರಂತಗಳು ಸಂಭವಿಸುವುದನ್ನು  ತಪ್ಪಿಸಲು ಕೆ.ಇ.ಬಿ. ಅಗ್ನಿಶಾಮಕ ದಳ, ಪೌರಾಡಳಿತ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೊಳಗಂಡ ತಂಡವೊಂದನ್ನು ರಚಿಸಿ, ಕಾಲ ಕಾಲಕ್ಕೆ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ದುರಂತಗಳ ಮುನ್ನೆಚ್ಚರಿಕೆ ವ್ಯವಸ್ಥೆ ಇರುವ ಬಗ್ಗೆ ತಪಾಸಣೆ   ನಡೆಸಲಾಗುವುದೆಂದರು.


Share: