“ಮಾತೃ ದೇವೋ ಭವ", ಭಾರತ ಮಾತಾ ಕೀ ಜೈ. ದಾರಾಳವಾಗಿ ‘ಸಂಘ’ಗಳ ಬಾಯಲ್ಲಿ ಉದ್ಗಾರಗೊಳುವ ಶಬ್ದಗಳಿವು. 11-12-2010 ರಂದು ಸಂಸ ಬಯಲು ರಂಗ ಮಂದಿರದಲ್ಲಿ ಕೂಡ ದೊಡ್ಡ ದನಿಯಲ್ಲಿ ಕೇಳುತ್ತಿದ್ದ ಘೋಷಣೆಗಳಿವು. ಒಂದು ಖಾಸಗೀ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದರೆ ಕೇಸರಿ ಪಡೆಯ ದಂಡು ಕಟ್ಟಿಕೊಂಡು ಬಂದ ಪ್ರಮೋದ್ ಮುತಾಲಿಕ್‌ರವರಿಗೆ ತಮ್ಮ ಪಡೆಯ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಕಾರ್ಯಕ್ರಮದ ಪ್ರಾರಂಭದಲ್ಲಿಯೇ ಗದ್ದಲ ಮಾಡುತ್ತಿದ್ದ ಪಡೆ, ಹಿಂದುತ್ವವಾದಿಗಳ ಸಿದ್ದಾಂತಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದಾಗೆಲ್ಲ ಕೆಟ್ಟ ರೀತಿಯಲ್ಲಿ ಕೂಗಿ ಗದ್ದಲ ಮಾಡುತ್ತಿದ್ದರು. ಒಂದು ಹಂತದಲ್ಲಿ “ವಿಮಲಾ ಹಿಂದೂ ವಿರೋಧಿ, ಭಾರತ ಬಿಟ್ಟು ತೊಲಗಿ ಹಿಂದೂ ವಿರೋಧಿ ವಿಮಲಾಗೆ ಧಿಕ್ಕಾರ" ವೆಂಬ ಘೋಷಣೆಗಳೂ ಕೇಳಿ ಬರುತ್ತಿದ್ದವು. ಸೋದರೀ ಎಂದೇ ಸಂಬೋಧಿಸುತ್ತಿದ್ದ ಮುತಾಲಿಕ್‌ರಿಗೆ ಇದೇನು ತಪ್ಪುಎನಿಸುತ್ತಿರಲಿಲ್ಲ. ಪ್ರತಿ ಮಾತಿಗೂ ವಿರೋಧಿಸುತ್ತಿದ್ದ ಸೇನಾ ಪಡೆಯ ಅಸಹನೆ ಸಂಸ್ಕೃತಿಯ ಪ್ರತಿರೂಪವಾಗಿ ನಿಂತಿತ್ತು.ಪ್ರೇಕ್ಷಕರ ಗ್ಯಾಲರಿಯಲ್ಲಿ ದ್ವನಿವರ್ಧಕದೊಂದಿಗೆ ನಿರೂಪಕರು ಒಂದು ಹಂತದಲ್ಲಿ ಹೆಣಗಾಡುವ ಸ್ಥಿತಿ ಬಂದಾಗ, ಜನಪರ ಚಿಂತನೆಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಗತಿಪರ ವ್ಯಕ್ತಿಗಳ ಮಾತಿಗೆ ಮುತಾಲಿಕರೂ ಮತ್ತವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
ಒಂದು ಹಂತದಲ್ಲಿ ಮಾತಿನ ಚಕಮಕಿ ಹೆಚ್ಚಿದಾಗ ಸಂವಾದದಲ್ಲಿ ಪಾಲ್ಗೊಂಡಿದ್ದ ಅಗ್ನಿ ಶ್ರೀಧರ್ ಪ್ರಗತಿಪರರನ್ನು ಸಮಾಧಾನಿಸಲು ಕೆಳಗಿಳಿದು ಹೋದರು. ನಿರೂಪಕರು ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಸಿದ್ಧತೆಯಲ್ಲಿ ತೊಡಗಿದ್ದಾಗ ಏಕಾಏಕಿ ವೇದಿಕೆಗೆ ನುಗ್ಗಿದ ಇಬ್ಬರು ಮೂವರು ಕಿಡಿಗೇಡಿಗಳು ಮುತಾಲಿಕ್‌ರವರ ಮುಖಕ್ಕೆ ಮಸಿ ಬಳಿಯತೊಡಗಿದರು. ಅದೇ ವೇಳೆಗೆ ಅದುವರೆಗೂ ಇರದಿದ್ದ ಪೊಲೀಸರು ಇಡೀ ಸಂಸ ಬಯಲುರಂಗಮಂದಿರವನ್ನು ಆವರಿಸಿಕೊಂಡಿದ್ದು ವೇದಿಕೆಯಲ್ಲಿ ಕುಳಿತ ನನಗೆ ಅಚ್ಚರಿ ಎನಿಸುತ್ತಿತ್ತು. ಎಲ್ಲಿ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳುವ ವೇಳೆಗೆ ವೇದಿಕೆಗೆ ನುಗ್ಗಿದ ಖಾಕಿ ಪಡೆಯ, ಕಾವಿ ಪಡೆ ಇಡೀ ಪ್ರದೇಶವೇ ಒಂದು ರಣರಂಗವಾಗಿ ಮಾರ್ಪಟ್ಟಿತು. ನುಗ್ಗಿದ ‘ಸೇನೆ’ಯ ಜನ ಆ ಕೃತ್ಯಕ್ಕೆ ನಾನು ಹೊಣೆ ಎಂಬಂತೆ ಅವಾಚ್ಯ ಶಬ್ದಗಳಿಂದ ಬೈಯ್ಯತೊಡಗಿದರು. ತಳಿ ದೈಹಿಕ ಹಲ್ಲೆಗೂ ಮುಂದಾದರು. ಅವರು ನನ್ನ ಮೇಲೆರಗದಂತೆ ರಕ್ಷಿಸಿದ್ದು ಸುವರ್ಣ ವಾಹಿನಿಯ ಸಿಬ್ಬಂದಿ “ಮುತಾಲಿಕ್‌ರವರ ಮೇಲೆ ಮಾಡಿದ ಹಲ್ಲೆಯನ್ನು ಸಹ ಜನವಾದಿ ಖಂಡಿಸುತ್ತದೆ ಎಂಬ ಹೇಳಿಕೆಯನ್ನು ವಾಹಿನಿಗಳಿಗೆ ಕೊಡಲೂ ಅಡ್ಡಿಪಡಿಸಿದ್ದು ಪ್ರೇಕ್ಷಕರು ಎಂದುಕೊಂಡು ಬಂದ ಶ್ರೀರಾಮಸೇನೆಯ ಬೆಂಬಲಿಗ ಮಹಿಳಾಮಣಿಗಳು! ಆ ಸಂದರ್ಭದಲ್ಲಿ ಮೇಲೆ ನುಗ್ಗಿ ಬಂದ ಶ್ರೀರಾಮಸೇನೆಯ ಬೆಂಗಳೂರು ಮುಖ್ಯಸ್ಥ ಭವಾನಿ ಶಂಕರ್ ನನ್ನ ಮೇಲೆ ಉಗಿದು ಹಲ್ಲೆಗೆ ಪ್ರಯತ್ನಿಸಿದರು. ದುರಂತವೆಂದರೆ ಅಲ್ಲೇ ನಿಂತಿದ್ದ ಪೊಲೀಸ್ ಅಧಿಕಾರಿಗಳು ನಾನು ಚೀರಿ, ಚೀರಿ ಹೇಳುವಾಗಲೂ ಸಭ್ಯ ಗೃಹಸ್ಥರಂತೆ ನೋಡಿಕೊಂಡು ನಿಂತಿದ್ದರು. ಭವಾನಿ ಶಂಕರ್ ಮುತಾಲಿಕ್‌ನೊಂದಿಗೆ ನಿಲ್ಲುವಂತೆ ಜಾಗ ಕಾಲಿ ಮಾಡದಂತೆ ತಡೆಯಲು ಪ್ರಯತ್ನಿಸಿದರೇ ಹೊರತು ಆತನತ್ತ ಒಂದು ಹೆಜ್ಜೆಯೂ ಇಡಲಿಲ್ಲ. ಇದು ಏನನ್ನು ತೋರಿಸುತ್ತದೆ?
ಸೌಜನ್ಯ: ಜನಶಕ್ತಿ