ನವದೆಹಲಿ, ನವೆಂಬರ್ ೯: ‘ನಾವು ತಾಯಿ ಸುಷ್ಮಾ ಸ್ವರಾಜ್ ಅವರ ಮಕ್ಕಳು...ಕೌಟುಂಬಿಕ ವಿಷಯಗಳಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ತಾಯಿ ಸುಷ್ಮಾ ಅವರೇ ನಮಗೆ ಮಾರ್ಗದರ್ಶಕಿ...ತಾಯಿಯ ಮಾತನ್ನು ಮಕ್ಕಳು ಕೇಳಲೇಬೇಕು...ರಾಜ್ಯದ ಒಳಿತಿಗೆ, ಅಭಿವೃದ್ಧಿಗಾಗಿ ತಾಯಿ ಸುಷ್ಮಾ ಅವರು ತೆಗೆದುಕೊಂಡಿರುವ ಈ ನಿರ್ಧಾರವನ್ನು ನಾವು ಒಪ್ಪಿಕೊಂಡಿದ್ದೇವೆ....’
-ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿಯೇ ಸಿದ್ಧ ಎಂದು ಸಾರಿ ಶನಿವಾರ ಸಂಜೆಯ ತನಕ ಅದೇ ಮಾತನ್ನು ಆಡುತ್ತ ಬಂದಿದ್ದ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಭಾನುವಾರ ಸಂಜೆ ಇಲ್ಲಿ ಸಾರಿದರು.
ತಾಯಿ ಸುಷ್ಮಾ ಯಾವ ನಿರ್ಧಾರ ತೆಗೆದುಕೊಂಡರೂ ಅದು ಸರಿಯಾದ ನಿರ್ಧಾರವೇ ಆಗಿರುತ್ತದೆ. ಅವರು ಹೇಳಿದಂತೆ ಭಿನ್ನಮತ ಹೋಗಲಾಡಿಸಿಕೊಂಡು ರಾಜ್ಯ ಮೆಚ್ಚುವ ರೀತಿಯಲ್ಲಿ ಐದು ವರ್ಷ ಮಾತ್ರವಲ್ಲ ಇನ್ನೂ ೫೦ ವರ್ಷ ಬಿಜೆಪಿ ಸರ್ಕಾರ ನಡೆಸಿಕೊಂಡು ಹೋಗುತ್ತೇವೆ ಎಂದು ಅವರು ಯಡಿಯೂರಪ್ಪ ಅವರ ಪಕ್ಕ ನಿಂತು ಹೇಳಿದರು.
ಯಡಿಯೂರಪ್ಪ ಅವರ ಮುಖ ನೋಡಲೂ ತಯಾರಿಲ್ಲ ಎಂದಿದ್ದ ಅವರು ಮುಖ್ಯಮಂತ್ರಿಯ ಪಕ್ಕದಲ್ಲಿ ನಿಂತು ಕ್ಯಾಮೆರಾಗಳಿಗೆ ‘ಪೋಸು’ ನೀಡಿದರು.
ಸುಷ್ಮಾ ಜೊತೆ ಚರ್ಚೆ:ಬಹಳ ದಿನಗಳ ನಂತರ ಯಡಿಯೂರಪ್ಪ ಮತ್ತು ಜನಾರ್ದನರೆಡ್ಡಿ ಅವರನ್ನು ಒಟ್ಟಿಗೆ ನೋಡುತ್ತಿದ್ದೀರಿ...ಶಾಂತಪೂರ್ಣ ಪರಿಹಾರ ದೊರೆತದ್ದಕ್ಕೆ ನನಗೆ ಬಹಳ ಖುಷಿಯಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.
ಶುಕ್ರವಾರ ಹಠಾತ್ತನೆ ಹೈದರಾಬಾದ್‌ಗೆ ತೆರಳಿದ್ದ ಜನಾರ್ದನರೆಡ್ಡಿ ಅವರು ಸುಷ್ಮಾ ಕರೆಯ ಮೇರೆಗೆ ಶನಿವಾರ ಮಧ್ಯರಾತ್ರಿಯ ನಂತರ ದೆಹಲಿ ತಲುಪಿದರು. ಭಾನುವಾರ ಬೆಳಗ್ಗೆ ಸುಷ್ಮಾ ಅವರ ಬಂಗಲೆ ತಲುಪಿ ಹತ್ತೂವರೆಯಿಂದ ಒಂದು ತಾಸು ಚರ್ಚೆ ನಡೆಸಿ ಹೊರಬಿದ್ದರು. ಹೊರಗೆ ಕಾದಿದ್ದ ಸುದ್ದಿಗಾರರ ಜೊತೆ ಒಂದೆರಡು ಮಾತನಾಡಿದ ಅವರು ತಾವು ಮೆತ್ತಗಾಗಿರುವ ಸ್ಪಷ್ಟ ಸೂಚನೆ ನೀಡಿದರು. ಮತ್ತೆ ನಾಲ್ಕು ಗಂಟೆಗೆ ಸುಷ್ಮಾ ಅವರ ಮನೆಗೆ ಬರುವುದಾಗಿ ಹೇಳಿ ಹೊರಟರು. ಮೊದಲ ಬಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಪೂರ್ವಾಹ್ನ ಕರ್ನಾಟಕ ಭವನದ ತಮ್ಮ ಕೋಣೆಯಲ್ಲಿ ಮೂರು ತಾಸು ನಿರಾಳ ನಿದ್ರೆ ಮಾಡಿ ಎದ್ದು ಸುಷ್ಮಾ ಮನೆಗೆ ಬರಬೇಕೆಂಬ ಕರೆಯನ್ನು ಕಾದು ಕುಳಿತರು.
ಆಡ್ವಾಣಿಗೆ ಶುಭಾಷಯ:ಈ ನಡುವೆ ಬೆಂಗಳೂರಿನಿಂದ ಬಂದವರೂ ಸೇರಿದಂತೆ ಹನ್ನೆರಡು ಮಂದಿ ಸಚಿವರನ್ನು ಜೊತೆಗಿಟ್ಟುಕೊಂಡು ಆಡ್ವಾಣಿ ನಿವಾಸಕ್ಕೆ ತೆರಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದರು. ಕರ್ನಾಟಕ ಭವನಕ್ಕೆ ವಾಪಸಾಗಿ ಛಾನೆಲ್ ಕ್ಯಾಮೆರಾಗಳಿಗೆ ಒಮ್ಮೆ ‘ಬೈಟ್’ ನೀಡಿ ಅಪರಾಹ್ಣ ನಾಲ್ಕಕ್ಕೆ ತಲುಪಿದ್ದು ಸುಷ್ಮಾ ಸ್ವರಾಜ್ ಮನೆಗೆ. ಅಲ್ಲಿ ಆಗಲೇ ಬಂದು ಕುಳಿತಿದ್ದರು ರೆಡ್ಡಿ- ಶ್ರೀರಾಮುಲು- ಅನಂತಕುಮಾರ್. ಯಡಿಯೂರಪ್ಪ ಅವರೇ ಮುಂದಾಗಿ ಶ್ರೀರಾಮುಲು ಅವರನ್ನು ತಬ್ಬಿಕೊಂಡರು. ರೆಡ್ಡಿಯವರನ್ನು ಮಾತನಾಡಿಸಿದರು. ಎಲ್ಲ ನಿಮ್ಮ ಸುತ್ತಮುತ್ತ ಇದ್ದವರಿಂದಲೇ ತಪ್ಪು ತಿಳಿವಳಿಕೆ ಆದದ್ದು ಎಂದು ರೆಡ್ಡಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೇಳುತ್ತಿದ್ದಂತೆಯೇ ಸುಷ್ಮಾ ಮಧ್ಯಪ್ರವೇಶ. ಇನ್ನು ಸಾಕು ನಡೆಯಿರಿ ಎಂದು ಅಂಗಳದಲ್ಲಿ ಕಾದಿದ್ದ ಸುದ್ದಿಗಾರರ ಸೇನೆಯ ಮುಂದಕ್ಕೆ ಉಭಯ ಬಣಗಳನ್ನೂ ಕರೆತಂದು ಶಾಂತಿ ಘೋಷಣೆ ಮಾಡಿದರು.
ಸೌಜನ್ಯ: ಕನ್ನಡಪ್ರಭ