ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ತಿರುಗುಬಾಣವಾಗಿ ಪರಿಣಮಿಸಿದ ಆಪರೇಶನ್ ಕಮಲ

ಬೆಂಗಳೂರು: ತಿರುಗುಬಾಣವಾಗಿ ಪರಿಣಮಿಸಿದ ಆಪರೇಶನ್ ಕಮಲ

Tue, 03 Nov 2009 03:11:00  Office Staff   S.O. News Service
ಬೆಂಗಳೂರು, ಅ.೩೧: ಈ ಮೊದಲು ‘ಆಪರೆಷನ್ ಕಮಲ’ ನಡೆಸಿ ಬಿಜೆಪಿಗೆ ಸ್ಥಿರ ಸರಕಾರ ರಚನೆಗೆ ಅಗತ್ಯದಷ್ಟು ಸಂಖ್ಯಾ ಬಲ ತಂದುಕೊಟ್ಟ ಗಣಿಧಣಿಗಳು ಅದೇ ‘ಆಪರೆಷನ್ ಕಮಲ’ವನ್ನು ಯಡಿಯೂರಪ್ಪನವರನ್ನು ಕೆಳಗಿಳಿಸಲು ಅಸ್ತ್ರವನ್ನಾಗಿ ಬಳಸಲು ಮುಂದಾಗಿದ್ದಾರೆ.

ನಾಯಕತ್ವಕ್ಕೆ ಪಟ್ಟು ಹಿಡಿದಿರುವ ಗಣಿಧಣಿಗಳು ಹೈಕಮಾಂಡ್ ನಿಲುವಿಗೆ ಬದ್ಧ ಎಂದು ಹೇಳುತ್ತಿದ್ದಾರೆ. ಹೈಕಮಾಂಡ್ ತಮ್ಮ ಬೇಡಿಕೆಯನ್ನು ಈಡೇರಿಸುತ್ತದೆ, ಇಲ್ಲವಾದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಸುಮಾರು ೭೫ ಶಾಸಕರನ್ನು ಹೈದರಾಬಾದ್‌ಗೆ ಕೊಂಡೊಯ್ದಿರಿರುವ ಗಣಿಧಣಿಗಳು ಇನ್ನಷ್ಟು ಶಾಸಕರನ್ನು ಕಲೆ ಹಾಕುವ ಯತ್ನದಲ್ಲಿದ್ದಾರೆ. ಅಗತ್ಯವಾದರೆ ಯಡಿಯೂರಪ್ಪನವರ ಮುಂದೆ ಪೆರೆಡ್ ನಡೆಸಿ ಬಲ ಪ್ರದರ್ಶನಕ್ಕೂ ಸಿದ್ಧರಿದ್ದಾರೆ ಎಂದು ಹೇಳಲಾಗಿದೆ. ಯಾವುದೇ ಒತ್ತಡಕ್ಕೂ ಬಿಜೆಪಿ ಮಣಿಯದೆ ಇದ್ದರೆ ಕನಿಷ್ಠ ೧೦ ಮಂದಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಸುವ ಯೋಜನೆ ಸಿದ್ಧಗೊಂಡಿದೆ ಎಂದು ಹೇಳಲಾಗಿದೆ.

ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ೧೧೦ ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಪಕ್ಷೇತರರು ಬೆಂಬಲ ನೀಡಿದ್ದರಿಂದ ಸರಕಾರ ರಚನೆಯಾಯಿತು. ಸ್ಥಿರ ಸರಕಾರ ರಚನೆಗೆ ಅಗತ್ಯದಷ್ಟು ಸಂಖ್ಯೆಯನ್ನು ಕಲೆ ಹಾಕಲು ಗಣಿಧಣಿಗಳು ಇತರ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಿ ಆಪರೆಷನ್ ಕಮಲ ನಡೆಸಿದರು. ನಂತರ ನಡೆದ ಉಪ ಚುನಾವಣೆಗಳಿಂದ ಬಿಜೆಪಿ ೧೧೭ ಶಾಸಕರ ಬಲವನ್ನು ಪಡೆದುಕೊಳ್ಳುವ ಮೂಲಕ ಸ್ಥಿರ ಸರಕಾರ ರಚನೆ ಮಾಡಿದೆ. ಜೊತೆಗೆ ಆರು ಮಂದಿ ಪಕ್ಷೇತರರ ಪೈಕಿ ೫ ಮಂದಿ ಬಿಜೆಪಿಯೊಂದಿಗಿದ್ದಾರೆ. ಅದರಲ್ಲಿ ಇಬ್ಬರು ಯಡಿಯೂರಪ್ಪ ಬಣದಲ್ಲಿ ಮೂವರು ಗಣಿಧಣಿಗಳ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಜೆಪಿಯ ಐದು ಮಂದಿ ಶಾಸಕರಿಂದ ರಾಜೀನಾಮೆ ಕೊಡಿಸಿದರೂ ಬಹುಮತವಿಲ್ಲದೆ ಯಡಿಯೂರಪ್ಪನವರ ಸರಕಾರ ಅಸ್ಥಿರತೆಗೆ ಸಿಲುಕಲಿದೆ. ಅತಂತ್ರ ವಿಧಾನಸಭೆಯಿಂದಾಗಿ ಸಂವಿಧಾನಿಕ ಬಿಕ್ಕಟ್ಟು ಉಂಟಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ. ಇಂಥದೊಂದು ಅಪಾಯಕಾರಿ ಯೋಜನೆಯನ್ನು ಗಣಿಧಣಿಗಳು ಹೊಂದಿರುವುದರಿಂದ ಯಡಿಯೂರಪ್ಪನವರ ಬಣ ಆತಂಕಕ್ಕೆ ಒಳಗಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಶಾಸಕರ ಮನವೊಲಿಸುವ ಯತ್ನ ಸಫಲವಾಗದೆ ಇರುವುದು ಇನ್ನಷ್ಟು ಇಕ್ಕಟ್ಟಿನ ಪರಿಸ್ಥಿತಿಯನ್ನು ನಿರ್ಮಿಸಿದೆ. ಆದ್ದರಿಂದ ಯಡಿಯೂರಪ್ಪ ಕಠಿಣ ನಿರ್ದಾರಗಳನ್ನು ಕೈಗೊಳ್ಳಲು ಸಾಧ್ಯವಾಗದೆ ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈಗ ಉಂಟಾಗಿರುವ ಬಿಕ್ಕಟ್ಟನ್ನು ಕಾಲಹರಣದ ಮೂಲಕ ತನ್ನಂತಾನೆ ಪರಿಹಾರವಾಗುವಂತೆ ನೋಡಿಕೊಳ್ಳುವ ತಂತ್ರವನ್ನು ಬಿಜೆಪಿ ವರಿಷ್ಠರು ಅನುಸರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

Share: