ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ಭಟ್ಕಳ: ೨೦೦೯ರ ಮೀನುಗಾರಿಕಾ ಮಸೂದೆ ವಿರೋಧಿಸಿ ಮನವಿ

ಭಟ್ಕಳ: ೨೦೦೯ರ ಮೀನುಗಾರಿಕಾ ಮಸೂದೆ ವಿರೋಧಿಸಿ ಮನವಿ

Fri, 15 Jan 2010 03:44:00  Office Staff   S.O. News Service
ಭಟ್ಕಳ, ಜನವರಿ 15: ಕೇಂದ್ರ ಸರಕಾರದ ೨೦೦೯ರ ನೂತನ ಮೀನುಗಾರಿಕಾ ಮಸೂದೆಯು ಜಾರಿಗೊಂಡಲ್ಲಿ ಮೀನುಗಾರರು ಬೀದಿ ಪಾಲಾಗಬೇಕಾಗುತ್ತದೆ ಎಂದು ಅಳಲನ್ನು ತೋಡಿಕೊಂಡಿರುವ ಸ್ಥಳೀಯ ಮೀನುಗಾರರು ಮಸೂದೆಯನ್ನು ಜಾರಿಗೊಳಿಸದಂತೆ ಆಗ್ರಹಿಸಿ ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ಸೋಮವಾರ ಸರಕಾರಕ್ಕೆ ಮನವಿ ಸಲ್ಲಿಸಿದರು.
 
ಮೀನುಗಾರರ ಚಟುವಟಿಕೆಗಳ ಕಾರ್ಯಕ್ಷೇತ್ರವನ್ನು ಕನಿಷ್ಠಗೊಳಿಸುವುದರಿಂದ ಮೊದಲೇ ಮತ್ಸಕ್ಷಾಮ ಅನುಭವಿಸುತ್ತಿರುವ ಲಕ್ಷಾಂತರ ಮೀನುಗಾರರ ಮೇಲೆ ಇನ್ನಷ್ಟು ಸಂಕಷ್ಟಗಳನ್ನು ಹೇರಿದಂತಾಗುತ್ತದೆ. ಸರಕಾರ ಈ ಕುರಿತು ಅಧ್ಯಯನ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಭಟ್ಕಳ ಮೀನು ಮಾರುಕಟ್ಟೆಯು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಒಣ ಮೀನು ವ್ಯಾಪಾರಸ್ಥರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಪುರಸಭೆ ಮುಂದಾಗಬೇಕು. ರಸ್ತೆಯ ಬದಿಯ ಮೀನು ವ್ಯಾಪಾರಿಗಳನ್ನು ಉಳಿದ ವ್ಯಾಪಾರಿಗಳೊಂದಿಗೆ ಪ್ರತ್ಯೇಕಗೊಳಿಸುವುದು ಸರಿಯಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕ ಚಂದ್ರ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ವಸಂತ ಖಾರ್ವಿ, ಶಂಕರ ಹೆಬ್ಳೆ, ವಾಸು ಮೊಗೇರ, ಶಂಭು ನಾರಾಯಣ ಖಾರ್ವಿ, ನಾಗಪ್ಪ ಖಾರ್ವಿ, ಮಂಜುನಾಥ ಖಾರ್ವಿ, ತಿಮ್ಮಪ್ಪ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.


Share: