ಭಟ್ಕಳ, ಏಪ್ರಿಲ್ ೧೫ : ತಾಲೂಕಿನಲ್ಲಿ ನಿರಂತರವಾಗಿ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಭಟ್ಕಳ ತಾಲೂಕು ಅತಿಕ್ರಮಣದಾರರ ಹೋರಾಟ ಸಮಿತಿ ಮಂಗಳವಾರ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಉತ್ತರಕನ್ನಡ ಜಿಲ್ಲೆ ವಿದ್ಯುತ್ ಉತ್ಪಾದನಾ ನೆಲೆಯಾಗಿದ್ದರೂ ಇಲ್ಲಿಯ ಜನರು ವಿದ್ಯುತ್ ಕಡಿತ ಸಮಸ್ಯೆಯಿಂದ ಮುಕ್ತರಾಗಿಲ್ಲ. ಇದೀಗ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದು, ವಿದ್ಯುತ್ ಕಡಿತದಿಂದ ಕಂಗಾಲಾಗಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿಯೂ ಜಿಲ್ಲೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಟ್ಕಳ ತಂಜೀಮ್ ಅಧ್ಯಕ್ಷ ಬದ್ರುಲ್ಲಾ ಹಸನ್ ಮೌಲೀಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಖಾಲೀದ್, ಕಾರ್ಯದರ್ಶಿ ಅಬ್ದುಲ್ ರಕೀಬ್ ಎಮ್.ಜೆ., ಪುರಸಭಾ ಸದಸ್ಯ ಇನಾಯಿತುಲ್ಲಾ ಶಾಬಂದ್ರಿ, ಯುವಕಾಂಗ್ರೆಸ್ ಮುಖಂಡ ರಹೀಮ್, ಜಾಲಿ ಗ್ರಾಮ ಪಂಚಾಯತ ಮಾಜಿ ಸದಸ್ಯ ಸುಲೇಮಾನ್, ಹಮೀದ್ ಮುಂತಾದವರು ಉಪಸ್ಥಿತರಿದ್ದರು.