ಭಟ್ಕಳ, ಜನವರಿ 31: ರಾಜ್ಯದಾಂದ್ಯಂತ ಧಾರ್ಮಿಕ ಸ್ಥಳಗಳ ಮೇಲಿನ ಧಾಳಿ ಸತತವಾಗಿ ಮುಂದುವರೆಯುತ್ತಿದ್ದು ಆತಂಕಕ್ಕೆ ದಾರಿಮಾಡಿಕೊಟ್ಟಿದೆ. ಭಟ್ಕಳ ಹಾಗೂ ಮೈಸೂರಿನ ಚರ್ಚುಗಳ ಮೇಲಿನ ಧಾಳಿ ಹಸಿಯಾಗಿದ್ದಂತೆಯೇ ಮಂಗಳೂರಿನಲ್ಲಿ ಮಾತೆ ಮೇರಿಯವರ ಬಣ್ಣದ ಚಿತ್ರವಿದ್ದ ಗಾಜಿನ ಫಲಕ, ಎರೆಡು ಮಸೀದಿಗಳು, ಒಂದು ಅನಾಥಾಶ್ರಮ ಹಾಗೂ ಒಂದು ಮನೆಯ ಮೇಲೆ ಧಾಳಿಯಾಗಿರುವ ವರದಿಯಾಗಿದೆ. ಈ ವರದಿಗಳಿಂದ ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ ಮನೆಮಾಡಿದೆ. ಈ ಧಾಳಿಗಳಿಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಹೇಳಿಕೆಗಳೂ ಪ್ರಚೋದನೆ ನೀಡುತ್ತಿವೆ ಎಂದು ಸ್ಥಳೀಯರು ಆಪಾದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೋಲೀಸರು ಹಾಗೂ ಆಡಳಿತ ವರ್ಗ ಕೈಗೊಂಡಿರುವ ಕ್ರಮಗಳು ಎಳ್ಳಷ್ಟೂ ಸಮಾಧಾನಕರವಾಗಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಕಂಪಾಲಾದಲ್ಲಿ ಎರೆಡು ಮಸೀದಿಗಳ ಮೇಲೆ ಧಾಳಿ:
ಶನಿವಾರ ರಾತ್ರಿ ಉಳ್ಳಾಲ ಪೋಲೀಸ್ ಠಾಣೆಯ ವ್ಯಾಪ್ತಿಗೊಳಪಡುವ ಕಂಪಾಲದಲ್ಲಿ ರಾ.ಹೆದ್ದಾರಿಯ ಬದಿಯಲ್ಲಿರುವ ನೂರಾನಿ ಮಸೀದಿಯ ಮೇಲೆ ಕಲ್ಲುತೂರಾಟ ನಡೆದಿದ್ದು ಕಿಟಕಿ ಗಾಜುಗಳು ಒಡೆದಿವೆ. ಮಸೀದಿ ಪಕ್ಕದಲ್ಲಿರುವ ಒಂದು ಮೊಬೈಲ್ ಅಂಗಡಿ ಹಾಗೂ ಮನೆಯೊಂದರ ಮೇಲೂ ಗುರಿಯಿರಿಸಿದ್ದ ದುಷ್ಕರ್ಮಿಗಳು ಕಲ್ಲುತೂರಾಟ ನಡಿಸಿ ಹಾನಿ ಎಸಗಿದ್ದಾರೆ. ಈ ಧಾಳಿ ನಡೆದ ಕೊಂಚವೇಳೆಯ ಬಳಿಕ ಈ ಸ್ಥಳದಿಂದ ಕೊಂಚದೂರವಿರುವ ನೂರುಸ್ಸಲಾಮ್ ಜುಮಾ ಮಸೀದಿಯ ಮೇಲೂ ಧಾಳಿ ನಡೆದಿದ್ದು ಕಿಟಕಿ ಗಾಜುಗಳು ಒಡೆದಿವೆ ಹಾಗೂ ಬಾಗಿಲು ಜಖಂಗೊಂಡಿದೆ. ಮೇಲ್ನೋಟಕ್ಕೆ ಮೊದಲು ಕಲ್ಲು ತೂರಾಟ ನಡೆಸಿದವರೇ ಇಲ್ಲೂ ಧಾಳಿ ನಡೆಸಿರಬಹುದೆಂದು ಗುಮಾನಿ ಹುಟ್ಟಿಸುತ್ತದೆ.
| |
ಅನಾಥಾಶ್ರಮವನ್ನೂ ಬಿಡದ ದುಷ್ಕರ್ಮಿಗಳು: ನೂರುಸ್ಸಲಾಂ ಜುಮಾ ಮಸೀದಿಯ ಪಕ್ಕದಲ್ಲಿಯೇ ಇರುವ ಅನಾಥಾಶ್ರಮವನ್ನೂ ಈ ದುಷ್ಕರ್ಮಿಗಳು ತಮ್ಮ ಕುಕೃತ್ಯಕ್ಕೆ ಗುರಿಯಾಗಿಸಿದ್ದಾರೆ. ಕಲ್ಲು ತೂರಾಟದಿಂದ ಕಿಟಕಿ ಗಾಜುಗಳು ಒಡೆದದ್ದು ಮಾತ್ರವಲ್ಲದೆ ಒಳಗೆರಗಿದ ಕಲ್ಲು ಮಲಗಿದ್ದ ಬಾಲಕನನ್ನು ಗಾಯಗೊಳಿಸಿದೆ. ಹದಿಮೂರು ವರ್ಷದ ಮೊಹಮ್ಮದ್ ರೋಷನ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ನಾತೂರಿನಲ್ಲಿ ಮೇರಿಮಾತೆಯ ಚಿತ್ರವಿದ್ದ ಗಾಜಿನ ಫಲಕಕ್ಕೂ ಕಲ್ಲು:
ಮಂಗಳೂರಿನ ಕರ್ದ್ರಿ ಪೋಲೀಸ್ ಠಾಣೆಯ ವ್ಯಾಪ್ತಿಗೊಳಪಡುವ ನಾತೂರಿನ Canara Organization for Development and Peace (CODP) ಕಟ್ಟಡಕ್ಕೂ ಕಲ್ಲೆಸೆದ ದುಷ್ಕರ್ಮಿಗಳು ಮಾತೆ ಮೇರಿಯವರ ಚಿತ್ರವಿದ್ದ ಸುಂದರ ಫಲಕವನ್ನು ಘಾಸಿಗೊಳಿಸಿದ್ದಾರೆ. ಈ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಕಟ್ಟಡದ ಕಿಟಕಿ ಗಾಜುಗಳೂ ಒಡಿದಿವೆ.
ಈ ಎಲ್ಲಾ ಘಟನೆಗಳು ಶನಿವಾರ ಅಪರಾತ್ರಿ ಎರಡರಿಂದ ಎರೆಡೂವರೆಯ ನಡುವೆ ನಡೆದಿದ್ದು ಮಸೀದಿ, ಅನಾಥಾಶ್ರಮ ಹಾಗೂ ಮನೆಯ ಮೇಲಿನ ಧಾಳಿ ಪ್ರಕರಣಗಳನ್ನು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಚರ್ಚ್ ಮೇಲಿನ ಧಾಳಿ ಪ್ರಕರಣವನ್ನು ಕದ್ರಿ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
2008ರಲ್ಲಿ ಮಂಗಳೂರಿನ ಹಲವು ಚರ್ಚುಗಳ ಮೇಲೆ ಭಜರಂಗದಳ ಧಾಳಿ ನಡೆಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಆಸ್ಟ್ರೇಲಿಯಾದ ಭಾರತೀಯರ ಮೇಲೆ ಧಾಳಿ ನಡೆಸಿದರೆ ಭಾರತದ ಕ್ರೈಸ್ತರ ಮೇಲೆ ಧಾಳಿ ನಡೆಸಲಾಗುವುದು ಎಂದು ಶ್ರೀರಾಮಸೇನೆ ಬೆದರಿಕೆ ಒಡ್ಡಿದ್ದ ಬಳಿಕವೂ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಧಾಳೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಭಟ್ಕಳ ಹಾಗೂ ಮೈಸೂರಿನ ಚರ್ಚುಗಳ ಮೇಲೆ ಶ್ರೀರಾಮಸೇನೆ ಧಾಳಿ ನಡೆಸಿದೆ. ಈ ನಿಟ್ಟಿನಲ್ಲಿ ನಿಷ್ಪಲರಾದ ಪೋಲೀಸರ ಮೇಲೆ ರಾಜ್ಯಪಾಲರು ಗಣರಾಜ್ಯೋತ್ಸವದ ಸಮಾರಂಭದಲ್ಲಿ ತೀಕ್ಷ್ಣವಾಗಿ ಟೀಕಿಸಿದ್ದಾರೆ. ಎರೆಡು ದಿನಗಳ ಬಳಿಕ ಮುಖ್ಯಮಂತ್ರಿಗಳೂ ಧಾಳಿ ನಡೆಸಿದವರ ಕೈ ಕಡಿಯಲು ಕರೆನೀಡಿದ್ದಾರೆ. ಆದರೂ ಈ ಎಲ್ಲಾ ಮನವಿ, ಬೆದರಿಕೆಗಳಿಗೆ ಜಗ್ಗದ ದುಷ್ಕರ್ಮಿಗಳು ನಿರಾಂತಕವಾಗಿ ಅಲ್ಪಸಂಖ್ಯಾತ ಧಾರ್ಮಿಕ ಹಾಗೂ ಅನಾಥಾಶ್ರಮಗಳ ಮೇಲೆ ಧಾಳಿ ನಡೆಸುತ್ತಿದ್ದಾರೆ.