ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹುಬ್ಬಳ್ಳಿ: ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಮಳೆ - ಕನಿಷ್ಟ ೩೧ ಜನರ ಸಾವು

ಹುಬ್ಬಳ್ಳಿ: ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಮಳೆ - ಕನಿಷ್ಟ ೩೧ ಜನರ ಸಾವು

Thu, 01 Oct 2009 03:04:00  Office Staff   S.O. News Service
ಬೆಂಗಳೂರು, ಸೆ.30: ಉತ್ತರ ಕರ್ನಾಟಕ ಭಾಗದ ಎಂಟು ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದು, ಕನಿಷ್ಠ ೩೧ ಮಂದಿ ಮೃತಪಟ್ಟಿದ್ದಾರೆ. 

ಮಳೆಗೆ ಸಂಬಂಧಿಸಿದ ಅವಘಡಗಳಿಂದ ಬಿಜಾಪುರ ದಲ್ಲಿ ೧೨, ಬೆಳಗಾವಿಯಲ್ಲಿ ಎಂಟು, ಬಾಲಕೋಟೆಯಲ್ಲಿ ಮೂರು, ಕೊಪ್ಪಳದಲ್ಲಿ ಇಬ್ಬರು, ಗುಲ್ಬರ್ಗದಲ್ಲಿ ಸೇರಿದಂತೆ ಕನಿಷ್ಠ ೩೧ ಮಂದಿ ಮೃತಪಟ್ಟಿದ್ದಾರೆ. ಹಲವಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಬೆಳೆ ಹಾನಿ ವ್ಯಾಪಕವಾಗಿದ್ದು, ನೂರಾರು ಮನೆಗಳು ಕುಸಿದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಬೆಳಗಾವಿ, ಬಿಜಾಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣಗೆರೆಗಳಲ್ಲಿ ಮಳೆ ಹಾನಿ ತೀವ್ರವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಮನೆ ಕಳೆದುಕೊಂಡ ವರು ಬೀದಿ ಪಾಲಾಗಿದ್ದಾರೆ. ಜೀವ ಹಾನಿಗೆ ತಾತ್ಕಾಲಿಕ ವಾಗಿ ಸರಕಾರ 10 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಆದರೆ, ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ನಿರ್ಲಕ್ಷ ವಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗುಲ್ಬರ್ಗದಲ್ಲಿ ಮನೆಗೋಡೆ ಕುಸಿದು ತಾಯಿ ಮತ್ತು ಆಕೆಯ ಎರಡು ವರ್ಷದ ಮಗಳು ಮೃತಪಟ್ಟಿದ್ದಾರೆ.

ಬಿಜಾಪುರ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಸಿಂದಗಿ ತಾಲೂಕಿನಲ್ಲಿ ಐದು, ಬಸವನಬಾಗೇವಾಡಿಯಲ್ಲಿ ಮೂರು, ಇಂಡಿ ಮತ್ತು ಬಿಜಾಪುರ ಪಟ್ಟಣದಲ್ಲಿ ತಲಾ ಒಂದು ಸೇರಿ ಒಟ್ಟು 12 ಮಂದಿಯ ಪ್ರಾಣ ಹಾನಿಯಾಗಿರುವ ವರದಿಯಾಗಿದೆ. ಜಿಲ್ಲೆಯಲ್ಲಿ ದೋಣಿ ನದಿ ತುಂಬಿ ಹರಿಯುತ್ತಿರುವುದರಿಂದ ಕೋಟ್ಯಾಳ ಗ್ರಾಮ ಸಂಪೂರ್ಣ ಮುಳುಗಡೆಯಾಗಿದೆ. ಹುಬ್ಬಳ್ಳಿ-ಬಿಜಾಪುರದ ನಡುವಿನ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. 

ಜಿಲ್ಲಾಡಳಿತ ಮುನವಳ್ಳಿ ಮಾರ್ಗವಾಗಿ ಪರ್ಯಾಯ ದಾರಿ ರೂಪಿಸಿಕೊಟ್ಟಿದೆ. ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಇಗ್ಗದೇವನಪುರದಲ್ಲಿ ಮನೆಯೊಂದರ ಗೋಡೆ ಕುಸಿದು ಲಕ್ಷ್ಮಿಬಾಯಿ (೩೨), ಜಕ್ಕಪ್ಪ ಎಂಬ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾರೆ. 

ಬಿಜಾಪುರ ಪಟ್ಟಣದ ಒಡ್ಡರ ಒಣಿಯಲ್ಲಿ ಮನೆಯ ಗೋಡೆ ಕುಸಿದು ೩೦ ವರ್ಷ ಪ್ರಕಾಶ್ ಎಂಬವರು ಮೃತಪಟ್ಟಿದ್ದಾರೆ. ಅಲಮೇಲು ಪೊಲೀಸ್ ಠಾಣೆ ವ್ಯಾಪ್ತಿಯ ಮಠದಹಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ನಾಲ್ಕು ಮಂದಿಗೆ ಗಾಯಗಳಾಗಿವೆ. ಶಾಲೆಗೆ ಹೊರಟ್ಟಿದ್ದ ಮಾದೇವಿ ಎಂಬ ೧೨ ವರ್ಷದ ಬಾಲಕಿ ಹಳ್ಳವೊಂದರಲ್ಲಿ ಕೊಚ್ಚಿ ಹೋಗಿದ್ದಾಳೆ. ನಿನ್ನೆ ಬೆಳಗ್ಗೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಇಂದು ಬಾಲಕಿಯ ಶವಪತ್ತೆ ಹಚ್ಚಲಾಗಿದೆ. ಜಿಲ್ಲೆಯಾದ್ಯಂತ ಇದೇ ರೀತಿಯ ಅವಗಡಗಳಲ್ಲಿ ಹಲವರ ಪ್ರಾಣ ಹಾನಿಯಾಗಿದೆ ಎಂದು ಹೇಳಲಾಗಿದೆ.

ಬೆಳಗಾವಿ: ಜಿಲ್ಲೆಯಲ್ಲಿ ಈವರೆಗೆ ಆರು ಮಂದಿಯ ಪ್ರಾಣ ಹಾನಿಯಾಗಿದೆ. 

ಬೈಲಹೊಂಗಲ ತಾಲೂಕಿನ ಗಣಿಕೊಪ್ಪದಲ್ಲಿನ ಮನೆಯೊಂದು ಕುಸಿದು ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತಪಟ್ಟ ಮಕ್ಕಳನ್ನು ಕಿರಣಪಕ್ಕೀರಪ್ಪ ಕಟ್ಟಿಮನಿ(೬), ಕಾವೇರಿ ಶಿವಪ್ಪ ಮಾದಿಗರ (೭), ಕಾರ್ತಿಕ ಶಿವಪ್ಪ ಮಾದಿಗರ (೫), ಕಾದಂಬರಿ ಶಿವಪ್ಪ ಮಾದಿಗರ ಎಂದು ಗುರುತಿಸಲಾಗಿದೆ. ಈರಪ್ಪ ಕಟ್ಟಿಮನಿ, ಸಿದ್ದವ್ವ ಕಟ್ಟಿಮನಿ, ಮಾದೇವಿ ಮಾದಿಗರ ಎಂಬವರು ಗಾಯಗೊಂಡಿದ್ದಾರೆ.
ಗೋಕಾಕ ತಾಲೂಕಿನಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ.  ಅರಭಾವಿ ತೋಟದ ನಿವಾಸಿಗಳಾದ ಲಕ್ಷ್ಮಿ ಶಿವಪ್ಪ ಸಣ್ಣಪಾನಿ (೨೮), ರಾಯವ್ವ ಗಂಗಪ್ಪ ಸಣ್ಣಪಾನಿ (೨೫) ಎಂಬವರು ಆಯುಧ ಪೂಜೆಯ ಅಂಗವಾಗಿ ದೇವರಿಗೆ ನೈವೇದ್ಯ ನೀಡಲು ತೋಟಕ್ಕೆ ಹೋಗಿದ್ದಾಗ ಅವಗಡ ಸಂಭವಿಸಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಯಂದಾಗಿ ಜಿಲ್ಲೆಯಲ್ಲಿ ಹಲವಾರು ಮನೆಗಳು ಕುಸಿದಿವೆ. ನಾಗರದಿನ್ನಿ, ಅರಸಂಗಿ ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ಗುಲ್ಬರ್ಗ: ಜಿಲ್ಲೆಯಲ್ಲಿ ಪ್ರವಾಹಕ್ಕೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಕೂಲಿಕಾರ್ಮಿಕರು ಕೊಚ್ಚಿಹೋಗಿದ್ದಾರೆ. ಶವಗಳ ಹುಟುಕಾಟ ನಡೆಯುತ್ತಿದೆ. ನಿನ್ನೆ ಸಂಜೆ ಕೂಲಿಕೆಲಸ ಮುಗಿಸಿ ಆತುರಾತುರವಾಗಿ ಮನೆಗೆ ತೆರಳುತ್ತಿದ್ದ ಎಂಪಳ್ಳಿಯ ಹನುಮವ್ವ ತೇಜಪ್ಪ (೨೮), ಅಂಬಿಕಾ ಭೀಮಾಶಾ (೧೮) ಎಂಬುವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಇವರೊಂದಿಗಿದ್ದ ಇತರ ೮-೧೦ ಮಹಿಳೆಯರು ಪಾರಾಗಿದ್ದಾರೆ. ಸುರಪುರ ತಾಲೂಕಿನ ಹುಣಸಗಿ ಗ್ರಾಮದ ರೈತ ಸೋಮಪ್ಪ (೪೮) ಎಂಬವರೂ ಕೊಚ್ಚಿಹೋಗಿದ್ದಾರೆ.

ಕೊಪ್ಪಳ: ಜಿಲ್ಲೆಯ ಕುಷ್ಠಗಿ ತಾಲೂಕಿನ ಕೋತ್ತಗೇರಿ ಗ್ರಾಮದಲ್ಲಿ ಮನೆ ಕುಸಿದು ಮಂಜುಳಾ ನೆಲ್ಲೂರು ಎಂಬ ೨೮ ವರ್ಷದ ಮಹಿಳೆ ಮತ್ತು ಆಕೆಯ ಮಗ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಯಚೂರು: ಲಿಂಗಸೂರು ತಾಲೂಕಿನ ಗುರುಕುಂಟದಲ್ಲಿ ಮಳೆಯ ವೇಳೆ ವಿದ್ಯುತ್ ಕಂಬ ನೆಲಕ್ಕುರುಳಿ ತಂತಿ ತುಳಿದ ಸಿದ್ದಪ್ಪ (೩೦) ವ್ಯಕ್ತಿ ಮೃತಪಟ್ಟಿದ್ದಾರೆ.

ಬಾಗಲಕೋಟೆ: ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಗೋಡೆಕುಸಿದು ಬಾಲಕನ್ನೊಪ್ಪ ಸಾವನ್ನಪ್ಪಿದ್ದಾನೆ.

ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಣ್ಣೆಹಳ್ಳ ತುಂಬಿಹರಿಯುತ್ತಿದ್ದು ಪ್ರತಿವರ್ಷದಂತೆ ನವಲಗುಂದ ತಾಲೂಕಿನ ಕೆಲವು ಗ್ರಾಮಗಳು ಮುಳುಗಡೆಯ ಬೀತಿ ಎದರಿಸುತ್ತಿವೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ೧೬೦ ಮನೆಗಳು ಕುಸಿದಿವೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಸುರಿದ ಮಳೆಯಿಂದ ಸುಮಾರು ೪೦೦ ಎಕರೆ ಬೆಳೆ ಕೊಚ್ಚಿಹೋಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಲ್ಲೂರು ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ

Share: