ಬೆಂಗಳೂರು, ನ.13: ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಗಿದುಕೊಂಡಿರುವ ‘ಕಗ್ಗಂಟು’ ಬಿಡಿಸಲು ಮತ್ತೆ ಬಿಜೆಪಿ ರಾಷ್ಟ್ರೀಯ ನಾಯಕರೇ ಮಧ್ಯೆ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಸಚಿವರಾಗಿ ಜಗದೀಶ್ ಶೆಟ್ಟರ್ ಅವರು ಪ್ರಮಾಣ ವಚನ ಸ್ವೀಕರಿಸುವ ದಿನದಂದೇ ‘ದೆಹಲಿ ಒಪ್ಪಂದ’ದಂತೆ ತಮ್ಮ ಬಣದ ಕನಿಷ್ಠ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂದು ರೆಡ್ಡಿ ಸಹೋದರರ ಬಣ ಹಿಡಿದಿರುವ ಪಟ್ಟನ್ನು ಸಡಿಲಗೊಳಿಸಿಲ್ಲ.
ಇದೇ ವೇಳೆ, ತಮ್ಮ ಜತೆ ಮತ್ತಿಬ್ಬರು ಪ್ರಮಾಣ ವಚನ ಸ್ವೀಕರಿಸಬೇಕೆಂದು ಜಗದೀಶ್ ಶೆಟ್ಟರ್ ಅವರೂ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಆದರೆ, ಸಂಪುಟದಲ್ಲಿ ಖಾಲಿ ಇರುವುದು ಕೇವಲ ಎರಡು ಸ್ಥಾನ ಮಾತ್ರ. ಶೆಟ್ಟರ್ ಜತೆಗೆ ಮತ್ತೊಬ್ಬರು ಮಾತ್ರ ಮಂತ್ರಿಯಾಗಬಹುದು. ತಲಾ ಒಂದು ಸ್ಥಾನ ಹಂಚಿಕೊಡಲು ಮುಂದಾದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬೆಂಬಲಿಗ ಮಂತ್ರಿಯೊಬ್ಬರ ತಲೆದಂಡ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ತಮ್ಮ ಯಾವುದೇ ಬೆಂಬಲಿಗ ಮಂತ್ರಿಯನ್ನು ಕೈ ಬಿಡುವುದಿಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವ ಸಂಪುಟ ಪುನಾರಚನೆ ವಿಚಾರ ಕಗ್ಗಂಟು ರೂಪ ತಳೆದಿದೆ.
ಹೈಕಮಾಂಡ್ ಹೆಗಲಿಗೆ ಬಿದ್ದ ‘ಕಗ್ಗಂಟು’: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರ ರಾಜೀನಾಮೆ ಪಡೆಯಬೇಕೆಂಬ ಫರ್ಮಾನು ಹೊರಡಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದ ರೆಡ್ಡಿ ಬಣ ಮತ್ತು ಫರ್ಮಾನನ್ನು ಹೊರಡಿಸಿದ್ದ ಹೈಕಮಾಂಡ್ ವಿರುದ್ಧ ಮುಖ್ಯಮಂತ್ರಿಗಳು ಪರೋಕ್ಷವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದು ರಹಸ್ಯವಾಗಿ ಉಳಿದಿಲ್ಲ.
ಈ ಹಿನ್ನೆಲೆಯಲ್ಲಿ ಮತ್ತೆ ಕೆಲವು ಸಚಿವರನ್ನು ಕೈಬಿಡಬೇಕೆಂಬ ರೆಡ್ಡಿ ಬಣದ ಬೇಡಿಕೆಯನ್ನು ಈಡೇರಿಸಿದರೆ ಮತ್ತೆ ಅವರಿಗೆ ಮಣೆ ಹಾಕಿದಂತಾಗುತ್ತದೆ. ಈ ವಿಚಾರದ ಬಗ್ಗೆ ತಾವು ತಲೆ ಕೆಡಿಸಿಕೊಳ್ಳುವುದು ಸೂಕ್ತವಲ್ಲ. ಈ ಹಿಂದೆ ಉಂಟಾಗಿದ್ದ ಬಿಕ್ಕಟ್ಟನ್ನು ಪರಿಹರಿಸುವ ನೆಪದಲ್ಲಿ ತಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುವ ರೂಪದಲ್ಲಿ ಪರಿಹಾರ ಸೂತ್ರಗಳನ್ನು ರೂಪಿಸಿದ್ದ ಹೈಕಮಾಂಡೇ ಸಂಪುಟ ಪುನಾರಚನೆ ಬಿಕ್ಕಟ್ಟನ್ನೂ ಪರಿಹರಿಸಲಿ ಎಂಬ ವಾದ ಯಡಿಯೂರಪ್ಪ ಪಾಳಯದಿಂದ ಕೇಳಿಬರುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಒಂದೆರಡು ದಿನಗಳಲ್ಲಿ ಸಂಪುಟ ಸೇರಲಿದ್ದಾರೆ. ಆದರೆ, ಅವರ ಜತೆ ಎಷ್ಟು ಮಂದಿ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಬೇಕೆಂಬ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ನಾಯಕರೇ ನಿರ್ಧರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಶೆಟ್ಟರ್ ಒಬ್ಬರೇ ಮಂತ್ರಿ?: ಬಿಜೆಪಿ ಹೈಕಮಾಂಡ್‌ನ ಪ್ರಮುಖರಾದ ರಾಜನಾಥ್‌ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರು ರಾಜ್ಯಕ್ಕೆ ಆಗಮಿಸುವುದು ನವೆಂಬರ್ ೧೮ ರಂದು. ಅಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅಂದೇ ಸಮನ್ವಯ ಸಮಿತಿಯೂ ರಚನೆ ಆಗುವ ಸಾಧ್ಯತೆಗಳಿವೆ. ಇಷ್ಟರಲ್ಲಾಗಲೇ ಶೆಟ್ಟರ್ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಆಗಿರುತ್ತದೆ.ಅಂದರೆ, ಸ್ಪೀಕರ್ ಸ್ಥಾನಕ್ಕೆ ನವೆಂಬರ್ ೧೬ ರಂದು ರಾಜೀನಾಮೆ ನೀಡಲಿರುವ ಶೆಟ್ಟರ್ ೧೭ ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಷ್ಟರೊಳಗೆ
ದೆಹಲಿಯಿಂದಲೇ ಹೈಕಮಾಂಡ್ ಮಂತ್ರಿ ಮಂಡಲದಿಂದ ಕೈಬಿಡುವ ಸದಸ್ಯರು ಮತ್ತು ಶೆಟ್ಟರ್ ಜತೆಗೆ ಪ್ರಮಾಣ ವಚನ ಸ್ವೀಕರಿಸುವ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ. ಸದ್ಯದ ಮಟ್ಟಿಗೆ ಈ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಶೆಟ್ಟರ್ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಬಹುದು.
ಶೆಟ್ಟರ್ ಶೀಘ್ರವೇ ಸಂಪುಟ ಸೇರಲಿ ದ್ದಾರೆ. ಅವರ ಜತೆ ಎಷ್ಟು ಶಾಸಕರು ಸಚಿವರಾಗಬೇಕು ಎಂದು ರಾಷ್ಟ್ರೀಯ ನಾಯಕರೇ ನಿರ್ಧರಿಸಲಿದ್ದಾರೆ.
-ಬಿಎಸ್‌ವೈ
ಸ್ಪೀಕರ್ ಸ್ಥಾನಕ್ಕೂ ನನಗೂ ಸಂಬಂಧವಿಲ್ಲ. ಸಚಿವನಾಗೇ ಮುಂದುವರಿಯುತ್ತೇನೆ. ರಾಜೀನಾಮೆ ನೀಡುವ ಬಗ್ಗೆ ವರಿಷ್ಠರು ನನ್ನಲ್ಲಿ ಚರ್ಚಿಸಿಲ್ಲ.
-ಉದಾಸಿ
ಸೌಜನ್ಯ: ಕನ್ನಡಪ್ರಭ