ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಭಿನ್ನಮತ : ತಲೆಮೇಲಿನ ದೊಣ್ಣೆ

ಭಿನ್ನಮತ : ತಲೆಮೇಲಿನ ದೊಣ್ಣೆ

Sun, 10 Jan 2010 02:59:00  Office Staff   S.O. News Service

`ಬಿಜೆಪಿ'ಯನ್ನು `ಬನಿಯಾ' ಜನಗಳ (ವ್ಯಾಪಾರಿಗಳ) ಪಕ್ಷವೆಂದು ಹಿಂದೆಲ್ಲಾ ಕರೆಯಲಾಗುತ್ತಿತ್ತು. ಆದರೀಗ ಅದು ತನ್ನ `ನೆಲೆ'ಯನ್ನು (!) `ವಿಸ್ತರಿಸಿ'ಕೊಳ್ಳುತ್ತಿದೆ ? ಅದು ಭ್ರಷ್ಟ ಜನರ ಪಕ್ಷವೆಂದೂ, ಭಂಡ ಜನರ ಪಕ್ಷವಾಗಿ ವಿಕಾಸ ಹೊಂದಿದ್ದನ್ನು ಕಂಡಿದ್ದೇವೆ. ಅದೇ ರೀತಿ ಈಗದು `ಭಿನ್ನಮತೀಯರ ಜಗಳಗಂಟ ಪಕ್ಷ'ವಾಗಿ ನಿತ್ಯನೂತನವಾಗಿ ವಿಜೃಂಭಿಸುತ್ತಿದೆ. `ರಾಜ್ಯ ಹತ್ತಿ ಉರಿದರೇನು? ಜನರೆಲ್ಲಾ ಅದರಲ್ಲಿ ಬೆಂದರೇನು? ತಮ್ಮದೇನಿದ್ದರೂ ಕುರ್ಚಿ ಪುರಾಣ ಪಾರಾಯಣ' ಎಂದು ಅಧಿಕಾರದ ಗದ್ದುಗೆ ಸುತ್ತ ಜೊಲ್ಲು ಸುರಿಸಿ ತಿರುಗುವ ತೋಳಗಳ ಹಿಂಡಾಗಿಬಿಟ್ಟಿದೆ. ಇದಕ್ಕೆ `ದೇಶಭಕ್ತ (!) ಆರೆಸ್ಸೆಸ್ಸಿನ  ಉಸ್ತುವಾರಿ ಬೇರೆ!

ಭಿನ್ನಮತೀಯ ಆರ್ಭಟ!

ಭಿನ್ನಮತೀಯರ ಬಣದಲ್ಲೇ ಬಂಡಾಯಗಾರನಾಗಿ ತನಗೆ ಮಂತ್ರಿಗಿರಿ ಸಿಗಲಿಲ್ಲವೆಂದು ಖಾಲಿ ಇರುವ ಸ್ಥಾನ ತನಗೆ ಕೊಡದಿದ್ದರೆ ಬಂಡಾಯ ಬಿರುಸಾಗುವುದೆಂದು ಅಧಿಕಾರಾಕಾಂಕ್ಷೆಯ ಹತ್ತಾರು ಶಾಸಕರೊಂದಿಗೆ ಬೈಠಕ್ ನಡೆಸಿ ಕೂಗಾಡುತ್ತಿದ್ದ ರೇಣುಕಾಚಾರ್ಯನಿಗೆ ಮಂತ್ರಿ ಪದವಿಯ ಮೂಳೆ ತುಂಡು ಈಗ ಬಾಯಿಗೆ. ಜೊತೆಗೆ ಅಬ್ಕಾರಿ (ಸಾರಾಯಿ) ಖಾತೆಯ ಬಾಟಲಿಯನ್ನು ಕೈಗಿಡಲಾಗಿದೆ. ಇದು `ರೇಣುಕ' ನಿಗೆ ಖುಷಿ ತಂದಿಲ್ಲವಂತೆ. ವಸತಿ ಖಾತೆ ನೀಡಿದ್ದರೆ ನಿರ್ವಸತಿದಾರರಿಗೆ ಸೇವೆ ಸಲ್ಲಿಸುತ್ತಾ, ಸೈಟ್ ದಂಧೆಯಲ್ಲಿ ಚೀಲ ತುಂಬಿಸಿಕೊಳ್ಳಬಹುದಿತ್ತು ಎಂದೆಲ್ಲಾ ರೇಣುಕಾಚಾರ್ಯ ಗೊಣಗಿದರೂ ಈತನ ಮಂತ್ರಿಗಿರಿಯ ವಿರುದ್ಧವೇ ಬಂಡಾಯ ಭುಗಿಲೆದ್ದುದ್ದರಿಂದ ಸಿಕ್ಕಷ್ಟೇ ಸಾಕಪ್ಪ ಎಂದು ಮುದುರಿ ಕೂಡುವಂತೆ ಮಾಡಲಾಗಿದೆ. ರೇಣುಕಾ ಪ್ರಸಂಗದಿಂದ ಉತ್ತೇಜಿತರಾಗಿ ಇಡೀ ಸನ್ನಿವೇಶವನ್ನು ಬಳಸಿರುವ ಮಂತ್ರಿ ಪದವಿ ಆಕಾಂಕ್ಷೆಯ ಅತೃಪ್ತ ಶಾಸಕರು ಗುಂಪು ಕಟ್ಟಿ ಗಲಾಟೆ ಆರಂಭಿಸಿದ್ದಾರೆ. ಆರಂಭದಲ್ಲಿ ಇಂತಹವರು 10 ಜನ ಎಂದಿದ್ದದ್ದು ಈಗ ಶಾಸಕ ಅಪ್ಪಚ್ಚು ರಂಜನ್ ಪ್ರಕಾರ ಅದು 34 ಕ್ಕೂ ಹೋಗಿದೆಯಂತೆ. ಹೀಗಾಗಿ ನಿತ್ಯವೂ ಬಿಜೆಪಿಯಲ್ಲಿ ಭಿನ್ನಮತೀಯರ ಆರ್ಭಟ!

ಲಾಭ ಯತ್ನ

ಈಗಿನ ಭಿನ್ನಮತೀಯ ಬಂಡಾಯದಿಂದಾಗಿ ಒಂದು ಹಂತದಲ್ಲಿ ಸರ್ಕಾರವೇ ಉರುಳುವುದೇ ಎಂಬಂತೆ ಬಿಂಬಿಸಲಾಗಿತ್ತು. ಕಳೆದ ವಾರವೂ ತಾತ್ಕಾಲಿಕ ಶಮನವನ್ನೇನೋ ಪಡೆದಿತ್ತು. ಆದರೆ ಈಗಿನ `ಬಿಜೆಪಿ ನಿಷ್ಠ' ಭಿನ್ನಮತೀಯರು ಅಲ್ಲಿಂದ ಹೊರಬರಲು ಯೋಚಿಸುತ್ತಿರುವಂತೆ ಕಾಂಗ್ರೆಸ್, ಜೆಡಿ(ಎಸ್) ಪಕ್ಷಗಳು ಅದರ ಲಾಭ ಪಡೆಯಲು ತಂತ್ರ ರೂಪಿಸಿದ್ದವು. ತಾವು `ಬಿಜೆಪಿ ಸರ್ಕಾರವನ್ನು ಬೀಳಿಸುವುದಿಲ್ಲ' ಎಂದು ಕಾಂಗ್ರೆಸ್ ಹೇಳಿರುವಾಗಲೇ ಒಂದೊಮ್ಮೆ ಬಿದ್ದು ಹೋಗಲು ಸಾಧ್ಯವಿದ್ದರೆ ಅದರ ಫಲವನ್ನು ಪಡೆಯಲು ಕಾಂಗ್ರೆಸ್ ಹಿಂದೇಟು ಹಾಕಲಾರದು. ಕಾಂಗ್ರೆಸ್-ಜೆಡಿ(ಎಸ್)ನ ಅಂತಹ ಯತ್ನಗಳು ಮುಂದುವರಿದಿವೆ.

ಜನರಲ್ಲಿ ಹೇಸಿಗೆ, ಅಪರಾಧ ಬಿಡಲೊಲ್ಲದ ಸಿ.ಎಂ.

ಇಲ್ಲಿ ಬಿಜೆಪಿ ಪಕ್ಷ ತನ್ನ ಇಂತಹ ಜನದ್ರೋಹಿ ಅಧಿಕಾರದಾಹಿ ರಾಜಕಾರಣದಿಂದ ರಾಜ್ಯದ ಜನತೆಯಲ್ಲಿ ಹೇಸಿಗೆಯನ್ನು ಹುಟ್ಟಿಸಿದೆ. ಒಂದೆಡೆ ನಿತ್ಯವೂ ಬವಣೆಗಳ ನಡುವೆ ಬೇಯುವ ಜನತೆ, ಅನ್ಯಾಯಗಳ ವಿರುದ್ಧ ಬೀದಿಗಿಳಿಯುವ, ದಮನ ಎದುರಿಸಿ ಹೋರಾಟ ನಡೆಸುತ್ತಿರುವ ಜನತೆಆದರೆ ಇದಕ್ಕೆ ಕಿವಿಗೊಡದ, ಸಮಸ್ಯೆ ಇತ್ಯರ್ಥಪಡಿಸದ ಸಕರ್ಾರ. ಈ ಎಲ್ಲಾ ವಿದ್ಯಮಾನಗಳಿಂದ ಜನತೆ ಬೇಸತ್ತಿದ್ದಾರೆ. ಬಿಜೆಪಿಯನ್ನು ಬೆಂಬಲಿಸುತ್ತಾ ಬಂದವರೂ ದೂರ ಸರಿಯುವ ಸ್ಥಿತಿಯಿದೆ. ಇದು ಅರಿವಿಗೆ ಬಂದೇ ಮುಖ್ಯಮಂತ್ರಿ ಯಡಿಯೂರಪ್ಪ ಸಾರ್ವಜನಿಕವಾಗಿ `ಕುರ್ಚಿ ಉಳಿಸಿಕೊಳ್ಳಲು ಹೀಗೆಲ್ಲಾ ಮಾಡಬೇಕಾಗಿದೆ' ಎಂದೂ `ತನ್ನ ತಪ್ಪನ್ನು ಮುನ್ನಿಸಬೇಕೆಂದೂ ಮುಂದೆ ಹಾಗೆ ಮಾಡುವುದಿಲ್ಲ'ವೆಂದೂ ಅಪರಾಧ ಒಪ್ಪಿಕೊಳ್ಳಲೇಬೇಕಾಗಿ ಬಂದಿದೆ. ಆದರೆ ಆ ಅಪರಾಧಧ ಜಾಡನ್ನು ಬಿಡಲು ಸಿದ್ಧವಿಲ್ಲ.

ಅಧಃಪತನ

ರೇಣುಕಾಚಾರ್ಯನಿಗೆ ಮಂತ್ರಿ ಪದವಿ ಕೊಟ್ಟದ್ದು ಯಡಿಯೂರಪ್ಪನೇ ಎಂಬಂತೆ ಬಿಂಬಿಸುವ ಕೆಲಸವನ್ನು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ ರಂತಹವರು ಕೈಗೆತ್ತಿಕೊಂಡಿದ್ದಾರೆ. ಮುಖ್ಯ ಮಂತ್ರಿಗಳು ಅದರ ಹೊಣೆ ಹೊರುವ ಅಥವಾ ತಾವಿರುವ ಹತಾಶ ಸ್ಥಿತಿಯನ್ನು ಪ್ರಕಟಿಸುತ್ತಿದ್ದಾರೆ. ಆದರೆ ರೇಣುಕಾಚಾರ್ಯಗೆ ಮಂತ್ರಿ ಪದವಿ ಸಿಕ್ಕಿದ್ದು ಆರ್.ಎಸ್.ಎಸ್.ನ ನಿರ್ದೇಶನದ ನಂತರವೇ. ಅದೇ ರೀತಿ ಅದರ ನೇತೃತ್ವದ ಸಮನ್ವಯ ಸಮಿತಿಯೂ ಒಪ್ಪಿದೆ. ಆದರೆ ಭಟ್ರಂತಹವರು ತಮ್ಮ ಮೂಲ ಸಂಸ್ಥೆಯ ಖಳನಾಯಕ ಅಥವಾ ಕುಖ್ಯಾತ ಪಾತ್ರವನ್ನು ಮರೆಸಲು, ಗೆಳೆಯ ಅನಂತಕುಮಾರರ ರಾಜಕೀಯ ತಂತ್ರ ಉಳಿಸಲು ಹೆಣಗುತ್ತಿದ್ದಾರೆ. ಋಷಿ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದೇವೆಂಬ  ಆರೆಸ್ಸೆಸ್ಸಿನ ಕೊಳಕು ಸ್ಥಿತಿ, ಅನೈತಿಕ ರಾಜಕೀಯ ಸೈದ್ಧಾಂತಿಕ ಅಧಃಪತನವನ್ನು ಈ ಎಲ್ಲಾ ವಿದ್ಯಮಾನಗಳು ಅನಾವರಣ ಮಾಡುತ್ತಿವೆ.

ತಲೆ ಮೇಲೆ ದೊಣ್ಣೆಗಳು

ಎಷ್ಟೆಲ್ಲಾ ಸರ್ಕಸ್ ನಡೆಸಿದರೂ ಭಿನ್ನಮತದ ಬಂಡಾಯ, ಬ್ಲಾಕ್ಮೇಲ್ಗಳಿಂದ ಬಿಜೆಪಿ ಹೊರತಾಗಲು ಸಾಧ್ಯವೇ ಇಲ್ಲವಾಗಿದೆ. ಈಗಾಗಲೇ `ಬಿಜೆಪಿಯಲ್ಲಿ ದಲಿತರಿಗೆ ಸ್ಥಾನಮಾನವೇ ಇಲ್ಲ. ದಲಿತರನ್ನು ನಿರ್ಲಕ್ಷಿಸಲಾಗುತ್ತಿದ್ದು ಅಲ್ಲಿಂದ ಯಾವಾಗ ಬೇಕಾದರೂ ಹೊರಬರಬೇಕಾಗಬಹುದು' ಎಂಬ ಧಮಕಿಯನ್ನು ಬಿಜೆಪಿ ಹಿರಿಯ ಸಂಸದ ರಮೇಶ್ ಜಿಗಜಿಣಗಿ ಕೆಲವು ಶಾಸಕರ ಪರವಾಗಿ ಬಹಿರಂಗವಾಗಿ ಸಾರಿದ್ದಾರೆ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಭಿನ್ನಮತೀಯರ ಇನ್ನೊಂದು ಗುಂಪು ಸಕ್ರಿಯವಾಗಿ ಯಡಿಯೂರಪ್ಪನನ್ನು ಕಾಡುತ್ತಲೇ ಇದೆ. ಬೀಸುವ ದೊಣ್ಣೆಗಳಿಂದ ಹೇಗಾದರೂ ತಪ್ಪಿಸಿಕೊಂಡು ಸರ್ಕಾರ ಸಾಗಲು ಯತ್ನಗಳು ನಡೆದರೂ ತಲೆ ಉರುಳುವುದನ್ನು ತಪ್ಪಿಸಲು ಸಾಧ್ಯವಾಗದೇ ಹೋಗುವ ಸ್ಥಿತಿಯಿದೆ.

ಸ್ಪೀಕರ್ ಆಯ್ಕೆ ವಿಧಾನ: ಪ್ರಜಾಪ್ರಭುತ್ವ ವಿರೋಧಿ ಕ್ರಮ

ಕರ್ನಾಟಕದ ವಿಧಾನಸಭೆಯ ಕಲಾಪಗಳ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ದಾಖಲಾಯಿತು. ಜಗದೀಶ್ ಶೆಟ್ಟರವರ ರಾಜೀನಾಮೆಯಿಂದ ತೆರವಾದ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಅಂದೇ ಖ್ಯಾತ ನಟ ವಿಷ್ಣುವರ್ಧನವರ ನಿಧನದಿಂದಾಗಿ ಕಲಾಪ ಮುಂದೆ ಹಾಕಲು ವಿರೋಧ ಪಕ್ಷಗಳು ಕೋರಿದರೂ ಕೇಳಿಸಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿಯ ಹಂಗಾಮಿ ಸ್ಪೀಕರ್ ಆಗಿದ್ದ ರಘುಪತಿ ಭಟ್ ಏಕಪಕ್ಷೀಯವಾಗಿ ಉಪಸಭಾಪತಿ ಬೋಪಯ್ಯನವರನ್ನು ದ್ವನಿಮತದಿಂದ ಸ್ಪೀಕರ್ ಆಗಿ ಆಯ್ಕೆ ಹೊಂದಿರುವುದಾಗಿ ಪ್ರಕಟಿಸಿದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಇದು ಬಿಜೆಪಿಯ ಬುಡಮೇಲು ರಾಜಕೀಯ ತಂತ್ರಕ್ಕೆ ಮತ್ತೊಂದು ಸಾಕ್ಷಿಯಾಯಿತು.

ಸ್ಪೀಕರ್ ಸ್ಥಾನಕ್ಕೆ ಭೋಪಯ್ಯನವರಲ್ಲದೇ ಕಾಂಗ್ರೆಸ್, ಜೆಡಿ(ಎಸ್)ನ ಜಂಟಿ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರರವರು ಮತ್ತು ಇನ್ನಿಬ್ಬರು ಒಟ್ಟು ನಾಲ್ಕು ನಾಮಪತ್ರಗಳಿದ್ದವು. ಚುನಾವಣೆ ನಡೆಯಬೇಕಾದದ್ದು ಅನಿವಾರ್ಯವಿತ್ತು. 123 ಬಲದ ಬಿಜೆಪಿಗೆ ಬಹುಮತವಿದೆ. ಆದರೆ ಚುನಾವಣೆ ನಡೆದರೆ ಈಗಾಗಲೇ ಭಿನ್ನಮತ ಬಂಡಾಯದ ಬೇಗುದಿಯಲ್ಲಿ ನರಳುತ್ತಿರುವ ಬಿಜೆಪಿಯ ಹಲವು ಶಾಸಕರು ವಿರೋಧಪಕ್ಷಗಳ ಜಂಟಿ ಅಭ್ಯರ್ಥಿಗೆ ಮತ ನೀಡಿಬಿಡಬಹುದು ಅಥವಾ ಮತದಾನದಿಂದ ಹೊರಗೆ ಉಳಿಯಬಹುದು ಎಂಬ ಆತಂಕದಿಂದ ಚುನಾವಣೆ ನಡೆಸುವಂತಹ ಪ್ರಜಾಸತ್ತಾತ್ಮಕ ವಿಧಾನ ಅನುಸರಿಸದೇ ಪಿತೂರಿ ಕ್ರಮಗಳಿಂದ ಏಕಪಕ್ಷೀಯವಾಗಿ, ಇರುವ ನಿಯಮ ಉಲ್ಲಂಘಿಸಿ ಸಭಾಧ್ಯಕ್ಷರ ಆಯ್ಕೆಯನ್ನು ಘೋಷಿಸಲಾಗಿದೆ. ಈ ತವಕ ಎಷ್ಟಿತ್ತು ಎಂದರೆ ಆಯ್ಕೆ ಘೋಷಿಸಿದ ತಕ್ಷಣವೇ ಉಪಾಧ್ಯಕ್ಷ ಸ್ಥಾನದಲ್ಲಿದ್ದ ಬೋಪಯ್ಯರವರನ್ನು ವಾಡಿಕೆಯಂತೆ ಸಭಾ ನಾಯಕ ವಿರೋಧ ಪಕ್ಷದ ನಾಯಕರು ಸೇರಿ ಪೀಠದತ್ತ ಕರೆದುಕೊಂಡು ಬರದೇ ಅಲ್ಲಿದ್ದವರೇ (ವಿರೋಧ ಪಕ್ಷದವರನ್ನು ಬಿಟ್ಟು) ಕರೆದು ತಂದು ಕೂಡ್ರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಮತ್ತು ಜೆಡಿ(ಎಸ್)ನ ಕೆಲ ಶಾಸಕರು ನಡೆದುಕೊಂಡ ದಾಂಧಲೆ ರೀತಿಯೂ ಆಕ್ಷೇಪಾರ್ಹ.
ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಎಳ್ಳಷ್ಟೂ ನಂಬಿಕೆ ಇಲ್ಲದ, ಬಿಜೆಪಿಯ ಬೊಗಳೆತನವನ್ನು ಅಧಿಕಾರದಾಹಕ್ಕೆ ನಡೆಸುವ ಪಿತೂರಿಯನ್ನು ಇದು ಬಯಲಿಗಿಟ್ಟಿದೆ. ಕೋಮುವಾದಿ ಫ್ಯಾಸಿಸ್ಟ್ ನಿಲುವಿನಂತೆ ಈ ಘಟನೆಗಳು ನಡೆದಿವೆ. ಇಂತಹ ಹಲ್ಲೆಗಳನ್ನು ಸಹಿಸಲು ಸಾಧ್ಯವೇ?

- ಗುರುಶಾಂತ್

 ಸೌಜನ್ಯ: ಜನಶಕ್ತಿ 

 


Share: