ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ : ದಂಧೆಕೋರತನ ಪತ್ತೆ

ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ : ದಂಧೆಕೋರತನ ಪತ್ತೆ

Fri, 30 Apr 2010 18:26:00  Office Staff   S.O. News Service
ನನ್ನನ್ನು ಮನೆಯಿಂದ ಓಡಿಸಿಬಿಡ್ತಾರೆ ಮೇಡಂ. ನನ್ನ ಗಂಡನಿಗೆ ಬೇರೊಂದು ಮದುವೆ ಮಾಡಿಬಿಡ್ತಾರೆ.. ಈ ಸಲ ಗಂಡು ಹುಟ್ಟಲಿಲ್ಲಾಂದ್ರೆ ನನಗೆ ಬಾಳೇ ಇಲ್ಲಾ ಮೇಡಂ… ಎಂದೆಲ್ಲಾ ಗೋಳಾಡಿ ಈ ಕಾಲು ಹಿಡಿದುಬಿಡ್ತಾರೆ. ನಿಮ್ಮ ಅಕ್ಕ ತಂಗಿಯರಿಗೆ ಇಂಥಾ ಸ್ಥಿತಿ ಬಂದಿದ್ರೆ ಏನ್ ಮಾಡ್ತಿದ್ರಿ… ಎಂದು ನೇರ ಪಿ.ಸಿ ಅಂಡ್ ಪಿ.ಎನ್.ಡಿ.ಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ನಿಷೇದ) ಬೆಂಗಳೂರು ನಗರ ಜಿಲ್ಲಾ ಸಲಹಾ ಮಂಡಳಿಯವರನ್ನು ಪ್ರಶ್ನಿಸಿದವರು ಸಾಧಾರಣ ಮಹಿಳೆಯಲ್ಲ… ಕಳೆದ 20 ರಿಂದ 25 ವರ್ಷಗಳಿಂದ ವೈದ್ಯರಾಗಿರುವ ಸ್ತ್ರೀರೋಗ ತಜ್ಞೆ ಡಾ.ಅರುಣಾಕುಮಾರಿ. ಬದುಕು ಕಳೆದುಕೊಳ್ಳುವುದಕ್ಕಿಂತ ಹೊಟ್ಟೆಲಿರೋ ಹೆಣ್ಣು ಭ್ರೂಣ ಕಳೆದುಕೊಳ್ಳೋದು ಒಳ್ಳೆಯದೆಂದು ತೀರ್ಮಾನಿಸಿ ಗರ್ಭಪಾತಕ್ಕೆ ಮುಂದಾಗುವ ಮಹಿಳೆಯರ ಮೇಲಿನ ಸಾಮಾಜಿಕ, ಆರ್ಥಿಕ ಒತ್ತಡಗಳನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ದಂಧೆ ನಡೆಸುತ್ತಿರುವ ಅರುಣಾ ಮೆಟರ್ನಿಟಿ ಹೋಂನ ಡಾ. ಅರುಣಾಕುಮಾರಿ ಮುಗ್ದೆಯಲ್ಲ. ಮಹಾನ್ ಪಾತಕಿ. ಗುಪ್ತ ಕಾರ್ಯಾಚರಣೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಗಾಯಿತ್ರಿನಗರದಲ್ಲಿರುವ ಅರುಣಾ ಮೆಟರ್ನಿಟಿ ಹೋಂನಲ್ಲಿ ಕಳೆದ ಹಲವಾರು ವರ್ಷಗಳಿಂದ ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದ ನಂತರ, ಈ ಮಾಹಿತಿಗಳನ್ನು ನಾವು ಪಿ.ಸಿ. ಅಂಡ್ ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿಗೆ ನೀಡಿ ದಿನಾಂಕ 15.04.2010 ರಂದು ನಮ್ಮ ರಾಜ್ಯದ ಜಂಟಿ ಕಾರ್ಯದರ್ಶಿ ಕೋಲಾರ ಜಿಲ್ಲೆಯ ಗೀತಾ ವಿ. ರವರನ್ನು ಲಿಂಗಪತ್ತೆ ಕಾರ್ಯಾಚರಣೆಗೆಂದು ಕರೆದುಕೊಂಡು ಹೋದೆವು. “ಬೆಳಿಗ್ಗೆ 10.30 ಕ್ಕೆ ಡಾಕ್ಟರ್ ಬರ್ತಾರೆ….. 2000 ಖಚ್ಚಾಗುತ್ತೆ ಲಿಂಗಪತ್ತೆ ಮಾಡ್ತಾರೆ. ಹೆಣ್ಣಾದರೆ ತೆಗೆಸಬಹುದು ಬಿಡಿ. ತಲೆ ಏಕೆ ಕೆಡಿಸಿಕೊಳ್ತೀರಾ….” ಎಂದೆಲ್ಲಾ ಹೇಳಿದ ಸಿಬ್ಬಂದಿ “12ರ ಸುಮಾರಿಗೆ ಡಾಕ್ಟರ್ ಬರೋಲ್ಲಾ ಎದ್ಹೋಗ್ರಿ” ಎಂದು ಬಂದಂತಹ ರೋಗಿಗಳನ್ನೆಲ್ಲಾ ಗದರಿಸಿ ಓಡಿಸಿದರು. ದಡ ಬಡ ಎಂದು ಶೆರ್ಟ್ ಮುಚ್ಚಿದರು. ಅಲ್ಲೇ ಇದ್ದ ಸಿಬ್ಬಂದಿ ಎದ್ವೋ ಬಿದ್ವೋ ಎಂದು ಸ್ಕ್ಯಾನಿಂಗ್ ರೂಂನಲ್ಲಿದ್ದ ಕಂಪ್ಯೂಟರ್, ಸ್ಕ್ಯಾನಿಂಗ್ ಮಿಷನ್ ಮತ್ತು ಕೆಲ ದಾಖಲೆಗಳನ್ನು ಕೆ.ಎ.55/ ಎಂ.ಎ. 1437 ಸೀಮೆಂಟ್ ಬಣ್ಣದ ವಾಹನದಲ್ಲಿ ಸಾಗಿಸಿಬಿಟ್ಟರು. ಬಹುಶಃ ಕಳೆದ ಒಂದು ವಾರದಿಂದ ವಿವಿಧ ಆಸ್ಪತ್ರೆಗಳನ್ನು ತನಿಖೆ ಮಾಡುತ್ತಿದ್ದ ಪಿ.ಸಿ ಅಂಡ್ ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿಯು ಈ ಮೆಟರ್ನಿಟಿ ಹೋಂಗೆ ಬರುವ ಸುದ್ದಿ ಹೇಗೋ ತಿಳಿದಿರಬಹುದೆಂದು ನಾವು ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಗಮನಿಸಿ ಪ್ರತಿಭಟನೆಗೆ ಮುಂದಾದೆವು. ಛದ್ಮವೇಷ ಅದೇ ವೇಳೆಗೆ ಅಲ್ಲಿಗೆ ಆಗಮಿಸಿದ ಸಮಿತಿಗೆ ನಮ್ಮಲ್ಲಿದ್ದ ಮಾಹಿತಿಗಳನ್ನು ನೀಡಿದೆವು. ಸಮಿತಿಯು ಡಾಕ್ಟರ್ ಎಲ್ಲಿ ಎಂದು ಪ್ರಶ್ನಿಸಿದಾಗ, ಆಸ್ಪತ್ರೆ ಸಿಬ್ಬಂದಿ ಡಾಕ್ಟರ್ ಇಲ್ಲ. ಒಂದು ತಿಂಗಳು ಬರೋಲ್ಲ. ಡಾಕ್ಟರ್ ತಂಗಿ ಇದ್ದಾರೆ ಎಂದು ಹಿರಿ ವಯಸ್ಸಿನ ಮಹಿಳೆಯರನ್ನು ತೋರಿಸಿದರು. ಸಮಿತಿಯವರು “ಸುಳ್ಳು ಹೇಳ್ತಾ ಇದ್ದೀರಾ…. ಡಾಕ್ಟರ್ ಕರೆಸ್ತೀರಾ ಅಥವಾ ಬೀಗಮುದ್ರೆ ಹಾಕೋದಾ” ಎಂದು ಕೂಗಾಡಿದ ಕೂಡಲೇ ಹಸಿರು ಬಣ್ಣದ ಸೀರೆಯಲ್ಲಿದ್ದ ಡಾಕ್ಟರ್ ತಂಗಿ ಹೋಗಿ ಕೆಂಪು ಬಣ್ಣದ ಸೀರೆ ಉಟ್ಟು `ಡಾಕ್ಟರ್ ಆಗಿ‘ ಹೊರಬಂದರು. ಎಲ್ಲವೂ ಸಿನಿಮೀಯ ಮಾದರಿಯಲ್ಲಿ ನಡೆಯುತ್ತಿದ್ದುದನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಸಲಹಾ ಸಮಿತಿಯ ದೃಢ ಕಾಯರ್ಾಚರಣೆ ಯಿಂದಾಗಿ ಡಾ.ಅರುಣಾಕುಮಾರಿ ತಪ್ಪೊಪ್ಪಿಕೊಳ್ಳಬೇಕಾಯಿತು. ತಾನು ಇಲ್ಲಿಯವರೆಗೆ 45 ರಿಂದ 50 ಲಿಂಗಪತ್ತೆ, ಹೆಣ್ಣು ಭ್ರೂಣ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡರಲ್ಲದೆ, ಲಿಂಗಪತ್ತೆಗೆ 250 ರೂ. ಗರ್ಭಪಾತ ಮಾಡಿಸಲು 1400 ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಉಳಿದ 350 ರೂ. ಬಗ್ಗೆ ಬೇರೆ ಹೇಳಬೇಕಿಲ್ಲ. ಗರ್ಭಪಾತಕ್ಕಾಗಿ ಮಹಿಳೆಯರನ್ನು ಕರೆದುತರುತ್ತಿದ್ದ ಏಜೆಂಟರಿಗೆ ಕಮಿಷನ್ ಎಂದು ಊಹಿಸಬಹುದು. ಹೆಸರಿಗೆ ಹೆರಿಗೆ ಆಸ್ಪತ್ರೆ : ಕುರುಹೇ ಇಲ್ಲ ಹೆಸರಿಗೆ ಅದು ಹೆರಿಗೆ ಆಸ್ಪತ್ರೆಯಾದರೂ, ಅಲ್ಲಿ ಹೆರಿಗೆ ಆಸ್ಪತ್ರೆಗೆ ಸಂಬಂಧಿಸಿದ ಯಾವುದೇ ಕುರುಹುಗಳಿರಲಿಲ್ಲ. ಗರ್ಭಪಾತಕ್ಕೆ ಸಂಬಂಧಿಸಿದ ಪರಿಕರಗಳು ಮತ್ತು ಮೆಡಿಸಿನ್ ಮಾತ್ರ ಇದ್ದುದನ್ನು ಖಾತ್ರಿಪಡಿಸಿಕೊಂಡ ಜಿಲ್ಲಾ ಸಲಹಾ ಮಂಡಳಿಯ ಕ್ರಮವನ್ನು ಮತ್ತು ಸಂಘಟಕರಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ನಮ್ಮನ್ನು ಕಂಡು ಕೆಂಗಣ್ಣು ಬೀರುತ್ತಿದ್ದ ಆಸ್ಪತ್ರೆಯ ಸಿಬ್ಬಂದಿ… ಗರ್ಭಪಾತಕ್ಕೆ ಹೆಣ್ಣುಮಕ್ಕಳನ್ನು ಕರೆದು ತರುತ್ತಿದ್ದ ಏಜೆಂಟರು, ಸ್ಥಳೀಯ ಗೂಂಡಾಗಳು ನಮ್ಮ ಮೇಲೆರಗಿ ಬಸಿರು ಮಾಡ್ಕೊಂಡು ಬನ್ನಿ, ಅಭಾರ್ಷನ್ ಮಾಡ್ತೀವಿ ಅಂತ ನಾವು ಹೇಳಿದ್ವಾ….. ಎಂಜಲು ಕಾಸಿಗೆ ಹೀಗೆ ಗಲಾಟೆ ಮಾಡೋ ಬದಲು… ನಮ್ಮ ಹತ್ರ ಬಂದ್ರೆ ದಿನಕ್ಕೆ 500 ಕೊಡೋಲ್ವಾ…. ಸೂ……….” ಎಂದೆಲ್ಲಾ ನಿಂದಿಸಿದರು. ಜೀವ ಬೆದರಿಕೆ ಮಾರನೇ ದಿನ 16.04.2010 ರಂದು ಆಸ್ಪತ್ರೆಗೆ ಬೀಗಮುದ್ರೆ ಹಾಕುವ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಜಿಲ್ಲಾ ನಗರದ ಆರೋಗ್ಯಾಧಿಕಾರಿಗಳಿಗೆ, ಮಾಜಿ ಸಚಿವೆ ರಾಣಿ ಸತೀಶ್ಗೆ ಮಾಹಿತಿಯನ್ನು ನೀಡುತ್ತಿದ್ದ ನಮ್ಮನ್ನು (ಕೆ.ಎಸ್.ಲಕ್ಷ್ಮಿ, ಗೌರಮ್ಮ, ಶಾರದ.ಕೆ.ಎಸ್, ಯಶೋಧ, ಜಯಲಕ್ಷ್ಮಿ) ಗುರಿಯಾಗಿಸಿಕೊಂಡ ಆಸ್ಪತ್ರೆ ಸಿಬ್ಬಂದಿ, ಸ್ಥಳೀಯ ಏಜೆಂಟರನ್ನು, ಪುಂಡರನ್ನು, ರೌಡಿಗಳನ್ನು ಛೂ ಬಿಟ್ಟು ನಮ್ಮ ಫೋಟೋ ತೆಗೆದು, ವೀಡಿಯೋ ರೆಕಾಡ್ ಮಾಡಿಕೊಂಡು ಒಂದು ಕೈ ನೋಡಿಕೊಳ್ತೀವೆಂಬ ಜೀವ ಬೆದರಿಕೆ ಒಡ್ಡಿದರು. ಕಲ್ಲುಗಳ ಸಮೇತ ನಮ್ಮ ಮೇಲೆ, ಮಾಧ್ಯಮದವರ ಮೇಲೆ ದಾಳಿ ಮಾಡಲು ಮುಂದಾದರಾದರೂ ಮಹಿಳಾ ಕಾನ್ಸ್ಟೇಬಲ್, ಕೆಲ ಪೊಲೀಸ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಪಾರಾಗಿ ಹೊರಬಂದಂತಾಯಿತು. ಸಾಮಾಜಿಕ ಕಳಕಳಿ ಇರುವ ಡಾ.ವಸುಂಧರಾ ಭೂಪತಿ, ಸುಶೀಲಮ್ಮ (ಸುಮಂಗಲೀ ಸೇವಾಶ್ರಮ) ಅನಿಲ್ಕುಮಾರ್ರಂತಹ ಬದ್ಧತೆಯುಳ್ಳ ಸಮಾನ ಮನಸ್ಕರು ಇಂತಹ ಸಮಿತಿಗಳಲ್ಲಿದ್ದುದರಿಂದ ಅಕ್ರಮ ದಂಧೆ ನಡೆಸುತ್ತಿರುವವರಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸಲು ಸಾಧ್ಯವಾಗುತ್ತಿದೆ. ಡಿ.ಎಚ್.ಓ ಗಂಟಲಲ್ಲಿ ಸ್ವರವೇ ಇಲ್ಲ ಈ ಎಲ್ಲಾ ವಿದ್ಯಮಾನಗಳನ್ನು ವೀಕ್ಷಿಸುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿಯ ಗಂಟಲಲ್ಲಿ ಸ್ವರವೇ ಇರಲಿಲ್ಲ…. ಕೊಳಚೆ ಮೇಲೆ ಕಲ್ಲು ಹಾಕೋಕಾಗುತ್ತಾ ಲಕ್ಷ್ಮಿಯವರೇ ಎಂದವರು ಮೌನಕ್ಕೆ ಶರಣಾದರು ಕನಿಷ್ಟ ಸಿಟ್ಟಾಗಲೀ, ಪ್ರತಿಭಟನೆಯನ್ನು ವ್ಯಕ್ತಪಡಿಸದ ಆ ಮನುಷ್ಯ ಸಮಿತಿ ಹಾಗೂ ನಮ್ಮ ಒತ್ತಡಕ್ಕೆ ಮಣಿದು ಆಸ್ಪತ್ರೆ ಬೀಗಮುದ್ರೆಗೆ ಮುಂದಾಗಬೇಕಾಯಿತು. ಇಂತಹ ಡಾಕ್ಟರ್ಗಳು, ಹೆರಿಗೆ ಆಸ್ಪತ್ರೆಗಳು ರಾಜ್ಯವ್ಯಾಪಿಯಾಗಿ ಸದ್ದಿಲ್ಲದೆ ಹೆಣ್ಣು ಭ್ರೂಣಹತ್ಯೆಯ ದಂಧೆಯನ್ನು ನಡೆಸುತ್ತಿವೆ. ಆರೋಗ್ಯ ಇಲಾಖೆ, ಜಿಲ್ಲೆಗೊಂದು ಪಿ.ಸಿ. ಅಂಡ್ ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿಗಳು ರಾಜ್ಯ ಮೇಲ್ವಿಚಾರಣಾ ಸಮಿತಿಗಳು ಏನು ಮಾಡುತ್ತಿವೆ? ಮಹಿಳಾ ಸಂಘಟನೆಗಳು ಇಲ್ಲವೇ, ಮಾದ್ಯಮದ ಮೂಲಕ ಮಾತ್ರ ಇಂತಹ ಪ್ರಕರಣಗಳು ಹೊರಬರಬೇಕು. ಇನ್ನು ಶಿಕ್ಷೆ ಕೊಟ್ಟ ಹಾಗಿರಬೇಕು, ಆದರೆ ಅದು ತಟ್ಟದ ಹಾಗಿರಬೇಕು. ಪರಿಸ್ಥಿತಿ ಹೀಗೆಲ್ಲಾ ಇದೆ. ಹೆಣ್ಣು ಭ್ರೂಣಹತ್ಯೆ ವಿರುದ್ಧ ಕಾನೂನು ಬೇರೆ ಇದೆ. ಕಾನೂನಿನಿಂದ ಬದಲಾವಣೆ ಸಾಧ್ಯವಾ? ಖಂಡಿತಾ ಸಾಧ್ಯ ಯಾವಾಗಂದ್ರೆ… ಕಾನೂನನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು, ಅದಕ್ಕೆ ಪೂರಕ ವಾತಾವರಣೆ ನಿಮರ್ಸಲು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಅಗತ್ಯವಿರುವ ಲಿಂಗಸಂವೇದನೆ, ಸಮಾನತೆ, ಸಬಲೀಕರಣ ಕುರಿತು ರಾಜಕೀಯ ಇಚ್ಛಾಶಕ್ತಿ ಆಳುವ ಸರ್ಕಾರಗಳಿದ್ದಾಗ ಮಾತ್ರ. ಅಂತಹ ಪರಿಸರದ ನಿರ್ಮಾಣಕ್ಕೆ ಜನ ಚಳುವಳಿಗಳು ಮಾತ್ರ ಉತ್ತರ ನೀಡಬಲ್ಲವು. ಕೆ.ಎಸ್.ಲಕ್ಷ್ಮಿ ಸೌಜನ್ಯ: ಜನಶಕ್ತಿ

Share: