ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನೆರೆ ಸಂತ್ರಸ್ತರಿಗೆ ನೆರವು ನೀಡಲು ಮುಖ್ಯಮಂತ್ರಿ ಪಡೆ ಬೀದಿಗೆ - ಇನ್ನೂರು ಕೋಟಿಗೂ ಹೆಚ್ಚು ಹಣ ಸಂಗ್ರಹ

ಬೆಂಗಳೂರು: ನೆರೆ ಸಂತ್ರಸ್ತರಿಗೆ ನೆರವು ನೀಡಲು ಮುಖ್ಯಮಂತ್ರಿ ಪಡೆ ಬೀದಿಗೆ - ಇನ್ನೂರು ಕೋಟಿಗೂ ಹೆಚ್ಚು ಹಣ ಸಂಗ್ರಹ

Thu, 08 Oct 2009 03:05:00  Office Staff   S.O. News Service

ಬೆಂಗಳೂರು, ಬುಧವಾರ, 7 ಅಕ್ಟೋಬರ್ 2009
 
ಪ್ರವಾಹ ಸಂತ್ರಸ್ತರಿಗೆ ಅವಶ್ಯ ಪರಿಹಾರ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನಪ್ರತಿನಿಧಿಗಳೊಂದಿಗೆ ಬೆಂಗಳೂರು ನಗರದಲ್ಲಿಂದು ಪಾದಯಾತ್ರೆ ನಡೆಸಿದ್ದು ಕೇವಲ ಮೂರ್ನಾಲ್ಕು ಗಂಟೆಗಳಲ್ಲಿ 300 ಕೋಟಿ ಅಧಿ ನಿಧಿ ಸಂಗ್ರಹಿಸಿದ್ದಾರೆ. ಈಗಾಗಲೇ ಪಾದಯಾತ್ರೆ ಮೂಲಕ 200 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಬುಧವಾರದ ಸಂಗ್ರಹದೊಂದಿಗೆ ಒಟ್ಟು 500 ಕೋಟಿ ರೂಪಾಯಿ ಸಂಗ್ರಹಿಸಿದಂತಾಗಿದೆ.

8-bng2.jpg 

ಹಿಂದೆಂದಿಗೂ ಇದ್ದಿಲ್ಲದಂತೆ ಉತ್ತರಕರ್ನಾಟಕವನ್ನು ಅಕ್ಷರಶಃ ಕೊಚ್ಚಿಕೊಂಡು ಹೋಗಿರುವ ಪ್ರವಾಹದಿಂದಾಗಿ ಇದುವರೆಗೆ 212 ಮಂದಿ ಸಾವನ್ನಪ್ಪಿದ್ದರೆ; 16,500 ಕೋಟಿಗೂ ಅಧಿಕ ಹಾನಿಯಾಗಿದೆ. ಮೂರು ಲಕ್ಷಕ್ಕೂ ಅಧಿಕ ಮನೆಗಳು ಧರಾಶಾಯಿ ಯಾಗಿದ್ದರೆ, ಏಳು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರದಿಂದ 10,000 ಕೋಟಿ ರೂಪಾಯಿ ನೆರವು ಯಾಚಿಸಿದೆ.

ಮುಂಜಾನೆ ಮೈಸೂರು ಬ್ಯಾಂಕ್ ವೃತ್ತದಿಂದ ಹೊರಟಿರುವ ಪಾದಯಾತ್ರೆಯು, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕ ಪೇಟೆ, ಕೆಂಪೇ ಗೌಡ ರಸ್ತೆ, ಉಪ್ಪಾರ ಪೇಟೆ, ಗಾಂಧಿ ನಗರ, ಮಹಾರಾಣಿ ಕಾಲೇದು, ಕೆ.ಆರ್. ವೃತ್ತ ಮುಂತಾದ ಕಡೆಗಳಲೆಲ್ಲ ಸಾರ್ವಜನಿರಿಂದ ಸಹಾಯ ಯಾಚಿಸಿತು.

ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ಮೂರು ಕೋಟಿ ರೂಪಾಯಿ ನೀಡಿದ್ದರೆ, ಮಾರ್ವಾಡಿ ಸಮಾಜವು 100 ಮನೆಗಳ ಮನೆ ನಿರ್ಮಾಣ ಮಾಡುವ ವಾಗ್ದಾನ ನೀಡಿದೆ.

ಸಂಸದರಾದ ಅನಂತಕುಮಾರ್ , ಮೋಹನ್ ಕುಮಾರ್, ಸಚಿವರಾದ ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ. ಚಿತ್ರನಟ ಶ್ರೀನಾಥ್, ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

8-bng3.jpg

8-bng4.jpg 

ಮುಖ್ಯಮಂತ್ರಿಗಳ ಪಾದಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಬಂದೋಬಸ್ತ್ ಒದಗಿಸಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಸ್ವತಃ ಬಂದೋಬಸ್ತ್ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಪಾದಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಗಂಟೆಗಳಿಗೂ ಅಧಿಕ ಕಾಲ ಚಲಿಸ ಲಾಗದೆ, ರಸ್ತೆಯಲ್ಲೇ ಸಿಕ್ಕಿಹಾಕಿಕೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸ ಬೇಕಾಯಿತು.

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಒಟ್ಟು 300 ಕೋಟಿ ರುಪಾಯಿಗೂ ಅಧಿಕ ಸಂಗ್ರಹಿಸಲಾಗಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಗಳು, ಪಾದಯಾತ್ರೆ ಮೂಲಕ 1000 ಕೋಟಿ ರುಪಾಯಿ ಹಣ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಇತರ ನಗರಗಳಲ್ಲಿಯೂ ಪಾದಯಾತ್ರೆ ನಡೆಸುವು ದಾಗಿ ಹೇಳಿರುವ ಅವರು ನಾಳಿನ ಪಾದಯಾತ್ರೆ ಕಾರ್ಯಕ್ರಮ ಮಂಗಳೂರಿನಲ್ಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ

ಅತ್ತ ಮುಖ್ಯಮಂತ್ರಿಗಳು ತನ್ನ ಗಢಣದೊಂದಿಗೆ ನಿಧಿಸಂಗ್ರಹಿಸುತ್ತಿದ್ದರೆ, ಇತ್ತ ಕಾಂಗ್ರೆಸ್ಸು ಸಹ ನಿಧಿ ಸಂಗ್ರಹಕ್ಕೆ ಇಳಿದಿದೆ. ಆಳಿತ ಪಕ್ಷವು ನೆರೆ ಪರಿಹಾರಕ್ಕಾಗಿ, ಸಂತ್ರಸ್ತರ ಸಂತೈಕೆಗಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಬಯ್ಯುತ್ತಲೇ ಕಾಂಗ್ರೆಸ್ ಸಹ ಪಾದಯಾತ್ರೆಗಿಳಿದಿದೆ. ಕೆಪಿಸಿಸಿ ಅದ್ಯಕ್ಷ ಆರ್.ವಿ. ದೇಶಪಾಂಡೆ ಅವರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಶೆಟ್ಟರ್ ಪಾದಯಾತ್ರೆ 
ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಅವರೂ ಸಹ ಹುಬ್ಬಳ್ಳಿಯಲ್ಲಿ ಪಾದಯಾತ್ರೆ ನಡೆಸುತ್ತಿದ್ದು ಸಂತ್ರಸ್ತರಿಗಾಗಿ ನಿಧಿ ಹಾಗೂ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ


Share: