ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಗೆದ್ದು ನೋತ ಯಡಿಯೂರಪ್ಪ - ಸೋತೂ ಗೆದ್ದ ರೆಡ್ಡಿಗಳು

ಬೆಂಗಳೂರು: ಗೆದ್ದು ನೋತ ಯಡಿಯೂರಪ್ಪ - ಸೋತೂ ಗೆದ್ದ ರೆಡ್ಡಿಗಳು

Mon, 09 Nov 2009 02:46:00  Office Staff   S.O. News Service
ಬೆಂಗಳೂರು, ನವೆಂಬರ್ 9: ಕಳೆದ 3 ವಾರದಿಂದ ನಡೆದ ಆಡಳಿತಾರೂಢ ಬಿಜೆಪಿಯ ಆಂತರಿಕ ಸೆಣಸಾಟದಲ್ಲಿ ಅಂತಿ ಮವಾಗಿ ಗೆದ್ದವರು ಯಾರು? ಸೋತವರು ಯಾರು?

ಈ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರ ಸಿಗದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೆದ್ದು ಸೋತಿದ್ದರೆ, ಬಂಡಾಯದ ಸಾರಥ್ಯ ವಹಿಸಿದ್ದ ಗಣಿ ಧಣಿ ಗಾಲಿ ಜನಾರ್ದನರೆಡ್ಡಿ ಸೋತು ಗೆದ್ದಿರುವುದು ಮೇಲ್ನೋಟಕ್ಕೆ ಕಾಣುವ ಸರಳ ರಾಜಕೀಯ ಲೆಕ್ಕಾಚಾರ. 
 
ತಮ್ಮನ್ನು ಪ್ರಶ್ನಿಸುವವರೇ ಇಲ್ಲ ಎಂಬ ಧಾಟಿಯಲ್ಲಿ ಸಾಗುತ್ತಿದ್ದ ಯಡಿಯೂರಪ್ಪ ಅವರ ವರ್ಚಸ್ಸಿಗೆ ರಾಷ್ಟ್ರ ಮಟ್ಟದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆ ಉಂಟಾಗಿದ್ದರೆ, ಕೇವಲ ರಾಜ್ಯಕ್ಕೆ ಸೀಮಿತವಾಗಿದ್ದ ಜನಾರ್ದನರೆಡ್ಡಿ ರಾಷ್ಟ್ರಮಟ್ಟದಲ್ಲಿ ಅದರಲ್ಲೂ ಪಕ್ಷದ ಹೈಕಮಾಂಡ್ ದೃಷ್ಟಿಯಲ್ಲಿ ಪ್ರಬಲರಾಗಿ ಹೊರಹೊಮ್ಮಿದ್ದು ಈ ಭಿನ್ನಮತ ಬೆಳವಣಿಗೆಯ ವಿಶೇಷ.     

ಭಿನ್ನಮತ ಚಟುವಟಿಕೆಗಳಿಂದ ರೋಸಿ ಹೋಗಿ ಒಂದು ಹಂತದಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದ ಯಡಿಯೂರಪ್ಪ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಸದ್ಯಕ್ಕೆ ತಮ್ಮ ಕುರ್ಚಿ ಉಳಿಯಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರೂ ಅದು ಎಷ್ಟು ಕಾಲ ಎಂಬ ಆತಂಕವಂತೂ ಕ್ಷಣ ಕ್ಷಣಕ್ಕೂ ಕಾಡುತ್ತಲೇ ಇರುತ್ತದೆ.
 
’ಆನೆ ನಡೆದದ್ದೆ ಹಾದಿ...’ ಎಂಬಂತೆ ಕಳೆದ ಒಂದೂವರೆ ವರ್ಷದಿಂದ ಬಿಜೆಪಿಯ ಏಕಮೇವಾದ್ವಿತೀಯ ನಾಯಕನಾಗಿ ಹೆಜ್ಜೆಯಿಡುತ್ತಿದ್ದ ಯಡಿಯೂರಪ್ಪ ಅವರಿಗೆ ಇದೀಗ ನಡೆದ ಬೆಳವಣಿಗೆ ಒಂದು ರೀತಿಯಲ್ಲಿ ಅಂಕುಶ ವಿಧಿಸಿದಂತಾಗಿದೆ. ಜತೆಗೆ ಅವರೇ ಹೇಳಿಕೊಂಡಂತೆ ತಕ್ಕ ಪಾಠವನ್ನೂ ಕಲಿಸಿದೆ. ಆ ಪಾಠದ ಪರಿಣಾಮ- ಇನ್ನು ಮುಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರೂ ಆ ಹುದ್ದೆಯ ಪರಮಾಧಿಕಾರವನ್ನು ಏಕಾ‌ಏಕಿ ಚಲಾಯಿಸುವಂತಿಲ್ಲ. ತಮಗೆ ತೋಚಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಸಚಿವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ನೇರ ಹಸ್ತಕ್ಷೇಪ ಮಾಡುವಂತಿಲ್ಲ. ಸಚಿವರು ಹಾಗೂ ಪಕ್ಷದ ಶಾಸಕರನ್ನು ಕಡೆಗಣಿಸುವಂತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇನ್ನುಳಿದ ಅವಧಿಯನ್ನು ನಿರಾತಂಕವಾಗಿ ಪೂರೈಸುವಂತಿಲ್ಲ. ಪೂರ್ಣವಧಿ ಮುಗಿಸುವ ಗ್ಯಾರಂಟಿಯೂ ಇಲ್ಲ. 
ಇದರೊಂದಿಗೆ ಯಡಿಯೂರಪ್ಪ ಅವರಿಗೆ ಇದುವರೆಗೆ ಸರ್ಕಾರ ಮತ್ತು ಪಕ್ಷದ ಮೇಲಿದ್ದ ಹಿಡಿತ ತಪ್ಪುವುದು ಬಹುತೇಕ ಖಚಿತವಾಗಿದೆ. ಶೀಘ್ರದಲ್ಲೇ ಹೊಸ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ಎದುರಾಗಲಿದೆ. ತಮ್ಮ ಬೆಂಬಲಿಗರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ತಂತ್ರ ರೂಪಿಸಿದ್ದ ಯಡಿಯೂರಪ್ಪ ಈಗ ಅಸಹಾಯಕರಾಗಿ ಕೂಡಬೇಕಾಗಿ ಬರಬಹುದು. 

ಹೋರಾಟದ ಬದುಕಿನಿಂದ....: ಯಡಿಯೂರಪ್ಪ ರಾಜಕೀಯ ಜೀವನಕ್ಕೆ ಕಾಲಿಟ್ಟು ಸರಿಸುಮಾರು ೪೦ ವರ್ಷಗಳು ಉರುಳಿವೆ. ಈಗ ಅವರ ವಿರುದ್ಧ ತೊಡೆತಟ್ಟಿ ನಿಂತ ಗಾಲಿ ಜನಾರ್ದನರೆಡ್ಡಿ ಅವರ ವಯಸ್ಸು ಹೆಚ್ಚೂ ಕಡಮೆ ೪೦. ಮೊದಲಿನಿಂದಲೂ ಯಡಿಯೂರಪ್ಪ ಅವರದು ಹೋರಾಟದ ಬದುಕು. ೧೯೭೫ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧಿಕಾರಯುತ ರಾಜಕೀಯ ಆರಂಭಿಸಿದ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಲು ೨೦೦೮ರವರೆಗೆ ಕಾಯಬೇಕಾಯಿತು. 
 
ಈ ಅವಧಿಯಲ್ಲಿ ಯಡಿಯೂರಪ್ಪ ನಡೆಸಿದ ಹೋರಾಟಗಳು ಒಂದಲ್ಲ. ಎರಡಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಜೀತ ಕಾರ್ಮಿಕರ ಬಿಡುಗಡೆಗಾಗಿ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳನ್ನು ಎತ್ತಿ ಹಿಡಿಯಲು ನಡೆಸಿದ ಹೋರಾಟಗಳು ಆರಂಭದ ಉದಾಹರಣೆಗಳಷ್ಟೆ. ಅದಾದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಅಷ್ಟರಮಟ್ಟಿಗೆ ಯಡಿಯೂರಪ್ಪ ಮತ್ತು ಹೋರಾಟದ ರಾಜಕೀಯ ಮೇಳೈಸಿತು. 
 
ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಅಧಿಕಾರದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ತಲುಪಿದ್ದರಲ್ಲಿ ಯಡಿಯೂರಪ್ಪ ಅವರ ಪಾತ್ರವೇ ಪ್ರಮುಖವಾದದ್ದು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುವಂಥ ಮಾತು. ಆದರೆ ಅಂಥ ಯಡಿಯೂರಪ್ಪ ಸರ್ಕಾರವನ್ನು ಒಂದೂವರೆ ವರ್ಷ ಮುನ್ನಡೆಸುವ ಹೊತ್ತಿಗೆ ಅಪಾರ ಸಂಖ್ಯೆಯ ವಿರೋಧಿಗಳು ಸೃಷ್ಟಿಸಿಕೊಂಡು, ಕೊನೆಗೆ ಅಧಿಕಾರಕ್ಕಾಗಿ ಅಂಗಲಾಚುವ ಮಟ್ಟಕ್ಕೆ ತಲುಪಿದ್ದು ರಾಜಕೀಯ ವಿಪರ್ಯಾಸವೇ ಸರಿ. 

ಮುಂದೇನು?:  ಇಷ್ಟೆಲ್ಲ ರಾದ್ಧಾಂತ ಮುಗಿದ ನಂತರ ಯಡಿಯೂರಪ್ಪ ಅವರಿಗೆ ಮೊದಲಿನಂತೆ ಅಧಿಕಾರ ನಡೆಸುವುದು ತೀರಾ ಮುಜುಗರ ಉಂಟು ಮಾಡುವಂಥದ್ದು. 
ಕೃತಕ ನಗೆ ಬೀರಿಯಾದರೂ ಪಕ್ಷದ ಎಲ್ಲ ಸಚಿವರು, ಶಾಸಕರನ್ನು ಕರೆದು ಮಾತನಾಡುವುದು ಯಡಿಯೂರಪ್ಪ ಅವರ ಜಾಯಮಾನಕ್ಕೆ ಒಗ್ಗದ ಮಾತು. ಅವರದೇನಿದ್ದರೂ ಮುಖಕ್ಕೆ ಹೊಡೆದಂತೆ ಮಾತನಾಡುವ ಸ್ವಭಾವ. ಆದರೆ, ಈಗಿನ ಬದಲಾದ ಪರಿಸ್ಥಿತಿಯಲ್ಲಿ ಈ ಎಲ್ಲ ರಾಜಕೀಯ ಅನಿವಾರ್ಯತೆಗಳನ್ನು ರೂಢಿಸಿಕೊಳ್ಳದೆ ಹೋದರೆ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವುದಂತೂ ಕಷ್ಟ ಎಂಬುದು ಬಿಜೆಪಿಯ ಹಿರಿತಲೆಗಳ ಅಭಿಮತ. 


ಸೌಜನ್ಯ: ಕನ್ನಡಪ್ರಭ


Share: