ಬೆಂಗಳೂರು,ಮಾ,೧೦-ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಕೊರತೆಯನ್ನು ಪರಿಹರಿಸಲು ಒಂದು ವಾರದೊಳಗಾಗಿ ಹಣ ಬಿಡುಗಡೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಸದಸ್ಯ ರಾಮಸ್ವಾಮಿಗೌಡ ಮತ್ತಿತರರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ಈ ಭರವಸೆ ನೀಡಿದರಲ್ಲದೇ ಕುಡಿಯುವ ನೀರಿನ ಕೊರತೆಯಿಲ್ಲ ಎಂದು ಹೇಳಿದರು.
ಶಾಸಕರ ಅಧ್ಯಕ್ಷತೆಯ ಕುಡಿಯುವ ನೀರಿನ ಟಾಸ್ಕ್‌ಪೋರ್ಸ್‌ಗಳನ್ನು ಪುನಶ್ಚೇತನಗೊಳಿಸಿ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ಹಾಗೊಂದು ವೇಳೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕೊಳವೆ ಬಾವಿಗಳನ್ನು ತೆರೆಯುವ ಅಗತ್ಯ ಬಿದ್ದರೆ ಸರ್ಕಾರ ಅದಕ್ಕೂ ಸಿದ್ಧ ಎಂದರು.
ಇದೇ ರೀತಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮಧ್ಯೆ ವಿಷಯದಲ್ಲಿ ಸಾಮರಸ್ಯ ಇಲ್ಲ ಎಂಬ ಅಭಿಪ್ರಾಯಗಳಿಗೂ ಉತ್ತರಿಸಿದ ಅವರು,ಈ ರೀತಿಯ ಸಮಸ್ಯೆ ಕಾಣಿಸಿದರೂ ಬಗೆಹರಿಸುವುದಾಗಿ ನುಡಿದರು.
ಇದಕ್ಕೂ ಮುನ್ನ ಸದಸ್ಯ ರಾಮಸ್ವಾಮಿಗೌಡ ಅವರ ಪ್ರಸ್ತಾಪಕ್ಕೆ ಎಲ್ಲ ಪಕ್ಷಗಳ ಸದಸ್ಯರು ಸಹಮತ ವ್ಯಕ್ತಪಡಿಸಿದರಲ್ಲದೇ ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿದರು.
ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಅಗತ್ಯದ ಪ್ರಮಾಣದಷ್ಟು ಹಣ ಬಿಡುಗಡೆ ಮಾಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಪದವಿಪೂರ್ವ ಕಾಲೇಜುಗಳಲ್ಲಿ ಐದು ಸಾವಿರ ಹೊಸ ಕೊಠಡಿ - ಕಾಗೇರಿ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿಕೊಡುವ ದೃಷ್ಟಿಯಿಂದ ಪದವಿಪೂರ್ವ ಕಾಲೇಜುಗಳಲ್ಲಿ ಐದು ಸಾವಿರ ಹೊಸ ಕೊಠಡಿಗಳನ್ನು ನಿರ್ಮಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಸತ್ಯನಾರಾಯಣ,ಯು.ಟಿ.ಖಾದರ್,ಮುನಿರಾಜು ಮತ್ತಿತರರ ಪ್ರಸ್ತಾಪಕ್ಕೆ ಉತ್ತರಿಸಿದ ಕಾಗೇರಿ ಈ ವಿಷಯ ತಿಳಿಸಿದರು.
ಜೂನಿಯರ್ ಕಾಲೇಜುಗಳಲ್ಲಿ ಐದು ಸಾವಿರ ಕೊಠಡಿಗಳನ್ನು ಕಟ್ಟಲು ೩೦೦ ಕೋಟಿ ರೂಗಳನ್ನು ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದ್ದು ತ್ವರಿತಗತಿಯಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದೆ
ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ನಾನೂರಾ ಮೂವತ್ತೇಳು ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗವನ್ನು ತೆರೆಯಲು ತೀರ್ಮಾನಿಸಲಾಗಿದ್ದು ಅದೇ ಕಾಲಕ್ಕೆ ೨೭೦ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲು ತೀರ್ಮಾನಿಸಿರುವುದಾಗಿ ಸ್ಪಷ್ಟ ಪಡಿಸಿದರು.
ಈ ಮಧ್ಯೆ ದ್ವಿತೀಯ ಪಿಯೂಸಿ ವ್ಯಾಸಾಂಗದ ನಂತರ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುತ್ತಿರುವವರ ಪ್ರಮಾಣ ಕೇವಲ ಶೇಕಡಾ ೧೨ ರಷ್ಟಿದ್ದು ಈ ಪ್ರಮಾಣವನ್ನು ಶೇಕಡಾ ೨೫ ಕ್ಕೇರಿಸಲು ಸರ್ಕಾರ ಬಯಸಿದೆ ಎಂದರು.
ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅನುಗುಣವಾಗಿ ಹೊಸ ಕಾಲೇಜುಗಳನ್ನು ಪ್ರಾರಂಭಿಸಬೇಕು ಎಂಬ ಸದಸ್ಯರ ಪ್ರಸ್ತಾಪವನ್ನು ಒಪ್ಪದ ಅವರು,ಹೊಸ ಕಾಲೇಜುಗಳನ್ನು ಪ್ರಾರಂಭಿಸಲು ಈ ಮಾನದಂಡವನ್ನು ಅನುಸರಿಸುವುದಿಲ್ಲ ಎಂದು ಹೇಳಿದರು.
ರಾಜ್ಯದ ಯಾವ್ಯಾವ ಭಾಗಗಳಲ್ಲಿ ಹೊಸ ಕಾಲೇಜುಗಳ ಅಗತ್ಯವಿದೆ ಎಂಬ ಬಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು.ಎಲ್ಲಿ ಅಗತ್ಯವಿದೆಯೋ?ಅಲ್ಲಿ ಹೊಸ ಕಾಲೇಜುಗಳನ್ನು ಮಂಜೂರು ಮಾಡಲಾಗುವುದು ಎಂದು ನುಡಿದರು.
ರಾಜ್ಯದಲ್ಲಿ ಹೊಸ ಕಾಲೇಜು ಕಟ್ಟಡಗಳನ್ನು ಕಟ್ಟಲು ತೊಂಭತ್ತೊಂದು ಕೋಟಿ ರೂಗಳನ್ನು ಒದಗಿಸಲಾಗಿದ್ದು ನೂತನ ಕಟ್ಟಡಗಳ ಕಾಮಗಾರಿಯನ್ನು ಪ್ರಾರಂಭಿಸುವಂತೆ ತಾವು ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ವಿವರಿಸಿದರು.