ಕಾರವಾರ,ನವೆಂಬರ್ ೨೫: ಗೋಹತ್ಯೆ ನಿಷೇಧ ಕಾನೂನಿದ್ದರೂ ಮುಸ್ಲಿಂ ಓಟ್ ಬ್ಯಾಂಕಿನ ಹಿನ್ನಲೆಯಲ್ಲಿ ಅದು ಜಾರಿಗೆ ಬರುತ್ತಿಲ್ಲ. ಕಾನೂನನ್ನೇ ಗಾಳಿಗೆ ತೂರಲಾಗಿದ್ದು, ರಾಜ್ಯದಲ್ಲಿ ನಿರಂತರ ಗೋಹತ್ಯೆ ನಡೆಯುತ್ತಿದೆ. ಗೋಹತ್ಯೆಯನ್ನು ನಿಷೇಧಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಹಿಂದೂ ಪಕ್ಷ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಎರಡು ವರ್ಷಗಳೇ ಸಮೀಪಿಸುತ್ತಿದ್ದರೂ ಗೋಹತ್ಯೆ ನಿಷೇಧಕ್ಕೆ ಮುಂದಾಗಿಲ್ಲ. ರೈತರ ಬಗ್ಗೆ ಕಾಳಜಿಯಿದೆ ಎಂದು ಹೇಳುವ ಸರ್ಕಾರ ಕೃಷಿಗೆ ಆಧಾರವಾಗಿರುವ ಗೋವನ್ನು ರಕ್ಷಿಸುವ ಕಾರ್ಯ ಮಾಡಿಲ್ಲ. ಗೋ ರಕ್ಷಣೆಯಲ್ಲಿ ಹಿಂದೂ ಸಂಘಟನೆಗಳು ಪ್ರಾಮಾಣಿಕವಾಗಿ ಮುಂದಾದರೆ ಅವರ ವಿರುದ್ಧವೇ ಕಾನೂನು ಬಾಹಿರವಾಗಿ ಕೇಸು ಜಡಿಯಲಾಗುತ್ತಿದೆ ಎಂದು ದೂರಿದರು.
ಉ.ಕ. ಜಿಲ್ಲೆಯಲ್ಲಿ ೨೫೦ ಕಸಾಯಿಖಾನೆಗಳಿದ್ದು, ಎಲ್ಲವೂ ಅನಧಿಕೃತ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಕಸಾಯಿಖಾನೆಗಳನ್ನು ಬಕ್ರೀದ್ ಹಬ್ಬದ ಒಳಗಾಗಿ ಮುಚ್ಚದಿದ್ದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರೇ ದಾಳಿ ನಡೆಸಲಿದ್ದಾರೆ. ಮುಂದಾಗುವ ಅನಾಹುತಗಳಿಗೆ ಸರ್ಕಾರ ಜವಾಬ್ದಾರಿ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭಟ್ಕಳದಲ್ಲಂತೂ ವಿಪರೀತವಾಗಿ ರಾಜಾರೋಷವಾಗಿ ಗೋಹತ್ಯೆ ನಡೆಯುತ್ತಿದೆ. ಸರ್ಕಾರಕ್ಕೆ ಇಲ್ಲಿ ಬೆಲೆಯೇ ಇಲ್ಲವಾಗಿದೆ. ಕಾನೂನು ಮೀರಿ ಇಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಗೆ ಲಾಠಿ, ಬಂದೂಕು ಇಲ್ಲವೇ? ಇಲಾಖೆ ಭಟ್ಕಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋಹತ್ಯೆಯನ್ನು ನಿಷೇಧಿಸಲು ಸಾಧ್ಯವಾಗದಿದ್ದರೆ ಕಾರ್ಯಕರ್ತರು ರೊಚ್ಚಿಗೇಳಬೇಕಾಗುತ್ತದೆ ಎಂದರು.
ರಾಜ್ಯ ಸರ್ಕಾರ ಗೋರಕ್ಷಣೆಗಾಗಿ ಬಜೆಟ್‌ನಲ್ಲಿ ೪೦ ಕೋ.ರೂ. ಮೀಸಲಿಟ್ಟಿದೆ. ಆ ಹಣದಲ್ಲಿ ಪ್ರತಿ ತಾಲೂಕಿನಲ್ಲಿ ಗೋಶಾಲೆ ನಿರ್ಮಿಸುವಂತಾಗಬೇಕು. ಗೋ ರಕ್ಷಣೆಯಲ್ಲಿ ಶ್ರೀರಾಮ ಸೇನೆ ಕಾರ್ಯಪ್ರವೃತ್ತವಾಗಿದ್ದು, ಸೇನೆಯ ಕರೆಯ ಮೇರೆಗೆ ೮ ಮಠಾಧಿಪತಿಗಳು ೧೦೦ರಷ್ಟು ಗೋವುಗಳನ್ನು ಸಾಕಲು ಮುಂದೆ ಬಂದಿದ್ದಾರೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಧಾರವಾಡದಲ್ಲಿ ೧೧೮ ಬೀಡಾದಿ ದನಗಳನ್ನು ಹಿಡಿದು ಅದರ ಪಾಲನೆಗೆ ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಡೀಸಿ ಕಚೇರಿಗೆ ಚಲೋ
ಕೆಲವು ತಿಂಗಳ ಹಿಂದೆ ಗೋಕರ್ಣದ ಗಂಗಾವಳಿಯಲ್ಲಿ ನಡೆದ ಸ್ಫೋಟವನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಪಟಾಕ್ಷಿಯಿಂದಾದದ್ದು ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ಅಲ್ಲಿನ ಕಟ್ಟಡಕ್ಕೆ ಹಾನಿಯಾಗಿದ್ದು ನೋಡಿದರೆ ಅದು ಪಟಾಕ್ಷಿಯಿಂದಾದ್ದಲ್ಲ ಎಂಬು ಸ್ಪಷ್ಟವಾಗುತ್ತದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹಿಂಜಾವೇ ಹೋರಾಟ ನಡೆಸಿದೆ. ಈ ಘಟನೆ ನಂತರ ಅಲ್ಲಿನ ಪರಿಸರದ ಜನತೆಗೆ ಅಸುರಕ್ಷಿತ ಭಾವನೆ ಮೂಡಿದೆ. ಗಂಗಾವಳಿಯಲ್ಲಿ ಪಟಾಕ್ಷಿ ತಯಾರಿಕೆಗೆ ನೀಡಿದ ಅನುಮತಿಯನ್ನು ರದ್ದುಮಾಡಬೇಕು ಎಂದು ತಾ.ಪಂ. ಈಗಾಗಲೇ ನಿರ್ಣಯ ಕೈಗೊಂಡಿದೆ. ಆದರೆ ಇದ್ಯಾವುದನ್ನೂ ಜಿಲ್ಲಾಡಳಿತ ಮಾನ್ಯ ಮಾಡಿಲ್ಲ. ಕೇವಲ ಒಂದೇ ಮನೆಗೆ ಪಟಾಕ್ಷಿ ತಯಾರಿಕೆಗೆ ಅನುಮತಿ ನೀಡಿದ್ದರೂ ೧೫ಕ್ಕೂ ಹೆಚ್ಚು ಮನೆಗಳಲ್ಲಿ ಅನಧಿಕೃತ ಪಟಾಕ್ಷಿ ತಯಾರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇಲ್ಲಿ ಹಿಂದೆಯೂ ಸ್ಫೋಟ ನಡೆದಿದ್ದು, ಇದು ನಾಲ್ಕನೇ ಬಾರಿಯಾಗಿದೆ. ಸ್ಫೋಟ ನಡೆದ ಸ್ಥಳಕ್ಕೆ ಸ್ಥಳೀಯ ಶಾಸಕರಾಗಲೀ, ಸಂಸದರಾಗಲೀ ಈವರೆಗೂ ಭೇಟಿ ನೀಡಿಲ್ಲ. ಸ್ಫೋಟದಿಂದ ೮ ಜನರು ತಮ್ಮ ಕಿವಿಯನ್ನು ಕಳೆದುಕೊಂಡಿದ್ದರೆ, ಓರ್ವರಿಗೆ ಬ್ರೇನ್ ಹ್ಯಾಮರೇಜ್ ಆಗಿದೆ. ಗ್ರಾಮಸ್ಥರು ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ಪಟಾಕ್ಷಿ ತಯಾರಿಕೆಗೆ ಅನುಮತಿ ನೀಡುವವದಿದ್ದರೆ ಜನವಸತಿ ಇಲ್ಲದೆಡೆ ನೀಡಲಿ. ಇಲ್ಲದಿದ್ದರೆ ಗಂಗಾವಳಿಯಿಂದ ಡೀಸಿ ಕಚೇರಿಗೆ ಚಲೋ ಚಳುವಳಿ ನಡೆಸಲಾಗುವುದು ಎಂದು ಹೇಳಿದರು.
ಬೇಟಿ ಬಚಾವೋ
ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಹಿಂದೆ ಇಸ್ಲಾಂ ಸಂಘಟನೆಗಳು ಕೆಲಸ ಮಾಡುತ್ತಿವೆ. ಈ ಷಡ್ಯಂತ್ರದ ಬಗ್ಗೆ ಪಾಲಕರಿಗೆ, ಹೆಣ್ಣು ಮಕ್ಕಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಡಿ. ೧೬ ರಿಂದ ಜ. ೧೬ರವರೆಗೆ ಬೇಟಿ ಬಚಾವೋ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮುತಾಲಿಕ್ ತಿಳಿಸಿದರು.
ಹಿಂದು ಸಂಘಟಕರನ್ನು ತುಳಿಯಲು ಗೋವಾ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರ ರೂಪಿಸಿದ ಷಡ್ಯಂತ್ರವೇ ಗೋವಾ ಸ್ಫೋಟ ಪ್ರಕರಣ. ಆದರೆ ಸರ್ಕಾರದ ಆರೋಪಕ್ಕೆ ಈವರೆಗೆ ಒಂದೇ ಒಂದು ಸಾಕ್ಷಿ ಸಿಕ್ಕಿಲ್ಲ. ಹಿಂದು ಸಂಘಟಕರ ವಿರುದ್ಧ ಮಾಡಿದ ಆರೋಪಗಳೆಲ್ಲವೂ ನಿರಾಧಾರ ಎಂದು ಅವರು ಹೇಳಿದರು.
ನನಗೆ ಸಾತಾರ ಜಿಲ್ಲೆಗೆ ಭೇಟಿ ನೀಡದಂತೆ ಅಲ್ಲಿನ ಜಿಲ್ಲಾಧಿಕಾರಿ ಹೊರಡಿಸಿದ ನಿಷೇಧದಿಂದ ಮಂಗಳವಾರದಂದು ಪ್ರತಾಪಗಡದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ದೇಶದ ಪ್ರಜೆ ಎಲ್ಲಿ ಬೇಕಾದರೂ ಹೋಗಬಹುದು ಎಂದು ಸಂವಿಧಾನ ಹೇಳುತ್ತದೆ. ಆದರೆ ಈ ಅವಕಾಶಕ್ಕೆ ತಡೆಯೊಡ್ಡಿರುವುದು ಪ್ರಜಾತಂತ್ರ ವಿರೋಧಿ. ಗಲಾಟೆ ಮಾಡುವವರನ್ನು ತಡೆಯುವುದನ್ನು ಬಿಟ್ಟು ನನ್ನ ಭಾಷಣದಿಂದ ಗಲಾಟೆ ಆಗುತ್ತದೆ ಎಂದು ಕಲ್ಪಿಸಿಕೊಂಡು ತಡೆಯೊಡ್ಡುವುದು ಅವಮಾನ ಮಾಡಿದಂತೆ. ನನ್ನ ಭಾಷಣದಿಂದ ಈವರೆಗೂ ಎಲ್ಲಿಯೂ ಗಲಾಟೆ, ದೊಂಬಿ ನಡೆದಿಲ್ಲ. ನನ್ನ ವಿರುದ್ಧ ಇದ್ದ ೬೮ ಪ್ರಕರಣಗಳಲ್ಲಿ ಈಗ ಕೇವಲ ೨೦ ಪ್ರಕರಣಗಳಿವೆ. ಉಳಿದೆಲ್ಲ ಪ್ರಕರಣಗಳಲ್ಲಿ ನಿರ್ದೋಷಿ ಎಂದು ಸಾಬೀತಾಗಿರುವುದು ಇದಕ್ಕೆ ಸಾಕ್ಷಿ. ಸಾತಾರ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು ಎಂದರು.
ಹಣ, ಗುಂಡಾಗಿರಿ, ಜಾತಿ ಇಲ್ಲದೇ ರಾಜಕೀಯ ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರೀಯ ಹಿಂದೂ ಸೇನೆ ಕಟ್ಟಲು ಸಾಧ್ಯವಾಗಲಿಲ್ಲ. ಶ್ರೀರಾಮ ಸೇನೆಯು ರಾಜಕೀಯೇತರ ಸಂಘಟನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶ್ರೀರಾಮ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವರಾಜ ಅಂಬಾರಿ, ಭಟ್ಕಳ ತಾಲೂಕು ಸಂಚಾಲಕ ಜಟ್ಟಪ್ಪ ನಾಯ್ಕ, ಇತರರು ಇದ್ದರು.