ಭಟ್ಕಳ, ನವೆಂಬರ್ 6: ‘ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ’ಗೆ ನೀಡಲಾಗುವ ಐಕಾನ್ ಅಂತರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಭಟ್ಕಳಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಶುಕ್ರವಾರ ಕೋಲ್ಕತ್ತಾದಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಪುರಸಭೆಗೆ ಪ್ರಥಮ ಸ್ಥಾನ ಒಲಿದು ಬಂದಿದೆ.
ಜಗತ್ತಿನ ಬೇರೆ ಬೇರೆ ದೇಶಗಳ ಪುರಸಭೆಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದು, ಮೊದಲಿನ ಎರಡೂ ಬಹುಮಾನಗಳು ದೇಶದ ಅದರಲ್ಲಿಯೂ ಕರ್ನಾಟಕದ ಪಾಲಾಗಿರುವುದಕ್ಕೆ ಎಲ್ಲೆಡೆ ಸಂತಸ ವ್ಯಕ್ತವಾಗಿದೆ. ಈ ಕುರಿತು ಕೋಲ್ಕತ್ತಾದಿಂದಲೇ ದೂರವಾಣಿಯ ಮೂಲಕ ಮಾಧ್ಯಮಗಳನ್ನು ಸಂಪರ್ಕಿಸಿದ ಭಟ್ಕಳ ಪುರಸಭಾಧ್ಯಕ್ಷ ಫರ್ವೇಜ್ ಕಾಶೀಮ್ಜಿ, ಪ್ರಶಸ್ತಿ ದೊರೆತಿರುವುದಕ್ಕೆ ಸಂತೋಷವಾಗಿದ್ದು, ಪುರಸಭೆಯ ಮೇಲಿರುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಭಟ್ಕಳ ಪುರಸಭಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನವನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.