ಬೆಂಗಳೂರು,ಫೆಬ್ರವರಿ೨:ರಾಜ್ಯದ ಹಣಕಾಸು ಪರಿಸ್ಧಿತಿ ದಿವಾಳಿಯಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಇಂದಿಲ್ಲಿ ಅಂಕಿ ಅಂಶಗಳ ಸಮೇತ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಸಂಪನ್ಮೂಲ ನಿರೀಕ್ಷೆಗೂ ಮೀರಿ ಸಂಗ್ರಹವಾಗುತ್ತಿದೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆ ೨೦೦೮ - ೦೯ ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ರಾಜ್ಯದ ರಾಜಸ್ವ ಆದಾಯ ೩೧,೨೮೪ ಕೋಟಿ ರೂ ಸಂಗ್ರಹವಾಗಿತ್ತು. ೨೦೦೯ - ೧೦ ನೇ ಸಾಲಿನ ಡಿಸೆಂಬರ್ ಅಂತ್ಯದ ವೇಳೆಗೆ ೩೨,೧೩೫ ಕೋಟಿ ರೂಪಾಯಿ ಕ್ರೋಢೀಕರಣವಾಗಿದೆ. ಈ ಮೂಲಕ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ೮೫೧ ಕೋಟಿ ರೂ ಹೆಚ್ಚುವರಿಯಾಗಿ ರಾಜಸ್ವ ಆದಾಯ ಬಂದಿದೆ ಎಂದು ಹೇಳಿದರು.
ಹಿಂದಿನ ೨೦೦೮ - ೦೯ ನೇ ಸಾಲಿನ ಡಿಸೆಂಬರ್ ಅಂತ್ಯಕ್ಕೆ ೯,೫೫೦ ಕೋಟಿ ರೂ ಯೋಜನಾ ವೆಚ್ಚ ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ೧೨,೪೧೩ ಕೋಟಿ ರೂ ವೆಚ್ಚವಾಗಿದ್ದು, ೨,೮೬೩ ಕೋಟಿ ರೂ ಅಂದರೆ ಶೇ ೩೦ ಹೆಚ್ಚು ವೆಚ್ಚವಾಗುವ ಮೂಲಕ ದಾಖಲೆ ನಿರ್ಮಾಣ ಮಾಡಲಾಗಿದೆ.
ವಾಣಿಜ್ಯ ತೆರಿಗೆಯಲ್ಲಿ ಹಿಂದಿನ ವರ್ಷ ಇದೇ ಅವಧಿಗೆ ೧೨,೪೨೬ ಕೋಟಿ ರೂ ಸಂಗ್ರಹವಾಗಿದ್ದರೆ ಈ ವರ್ಷ ೧೨,೭೦೯ ಕೋಟಿ ರೂ ಸಂಗ್ರಹವಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಸಂಪನ್ಮೂಲ ಸಂಗ್ರಹಣೆಯಲ್ಲಿ ತುಸು ಇಳಿಕೆಯಾಗಿತ್ತು. ಈಗ ಪರಿಸ್ಧಿತಿ ಸುಧಾರಿಸಿದೆ. ಬರುವ ಮಾರ್ಚ್ ಅಂತ್ಯದ ವೇಳೆಗೆ ೧೮ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದರು
ಅಬಕಾರಿ ಆದಾಯ ಸಂಗ್ರಹದಲ್ಲಿ ಅತಿ ಹೆಚ್ಚು ಅಂದರೆ ಶೇ ೨೦ ರಷ್ಟು ಪ್ರಗತಿಯಾಗಿದ್ದು, ಹಿಂದಿನ ವರ್ಷ ಡಿಸೆಂಬರ್ ವೇಳೆಗೆ ೩,೯೮೫ ಕೋಟಿ ರೂಗಳಾಗಿದ್ದರೆ ಈ ಬಾರಿ ೪,೭೯೫ ಕೋಟಿ ರೂಗಳಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ೮೧೦ ಕೋಟಿ ರೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಮೋಟಾರು ವಾಹನ ತೆರಿಗೆಯಲ್ಲಿ ಹಿಂದಿನ ವರ್ಷ ೧,೩೩೧ ಕೋಟಿ ರೂಗಳಾಗಿದ್ದರೆ ಈ ಬಾರಿ ೧,೩೭೧ ಕೋಟಿ ರೂ, ಮುದ್ರಾಂಕ ಶುಲ್ಕದ ದರವನ್ನು ಶೇ ೭.೫ ರಿಂದ ಶೇ ೬ ಕ್ಕೆ ಇಳಿಸಲಾದ ಪರಿಣಾಮ ಸಂಪನ್ಮೂಲ ಸಂಗ್ರಹದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಹಿಂದಿನ ವರ್ಷ ೨,೫೭೬ ಕೋಟಿ ರೂ ಕ್ರೋಢೀಕರಣವಾಗಿದ್ದು, ಈ ಬಾರಿ ೧,೯೮೯ ಕೋಟಿ ರೂ ಮಾತ್ರ ಕ್ರೋಢೀಕರಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಇದೇ ರೀತಿ ವಾರ್ಷಿಕ ವೆಚ್ಚದಲ್ಲೂ ಕೂಡ ಗಣನೀಯ ಏರಿಕೆ ಕಂಡು ಬಂದಿದ್ದು, ೨೦೦೫ - ೦೬ ನೇ ಸಾಲಿನಲ್ಲಿ ೩೪,೯೭೩ ಕೋಟಿ ರೂ ಇದ್ದದ್ದು, ೨೦೦೮ - ೦೯ ಕ್ಕೆ ಇದು ೫೪,೦೩೯ ಕೋಟಿ ರೂಗೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯಕ್ಕೆ ೩೭,೯೨೩ ಕೋಟಿ ರೂ ಆಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಮಾಣ ೫೮ ಸಾವಿರ ಕೋಟಿ ರೂಗಳಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ಇದೇ ರೀತಿ ಯೋಜನಾ ವೆಚ್ಚದಲ್ಲೂ ಕೂಡ ಸತತ ಏರಿಕೆ ದಾಖಲಾಗಿದ್ದು, ಪ್ರಸಕ್ತ ವಿತ್ತ ವರ್ಷದಲ್ಲಿ ೨೨ ಸಾವಿರ ಕೋಟಿ ರೂಗಳಿಗೆ ತಲುಪುವ ನಿರೀಕ್ಷೆಯಿದೆ. ಸತತ ರಾಜಸ್ವ ಉಳಿತಾಯವಾಗುತ್ತಿದ್ದು, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ೧,೩೯೦ ಕೋಟಿ ರೂ ರಾಜಸ್ವ ಮಿಗತೆ ಸಾಧಿಸಲಾಗಿದೆ. ಸತತ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಈ ಸಾಧನೆ ಗಮನಾರ್ಹ ಎಂದು ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡದಂತೆಯೇ ಸತತ ನಾಲ್ಕು ವರ್ಷಗಳಿಂದ ವಿತ್ತೀಯ ಕೊರತೆ ಸಾಧಿಸಲಾಗುತ್ತಿದ್ದು, ಈ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಶೇ ೧.೩೫ ರಷ್ಟು ವಿತ್ತೀಯ ಕೊರತೆಯಿದೆ. ಈ ಆರ್ಥಿಕ ವರ್ಷಾಂತ್ಯದ ವೇಳೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆಯೇ ವಿತ್ತೀಯ ಕೊರತೆಯನ್ನು ನಿಯಂತ್ರಿಸಲಾಗುವುದು. ಆದರೆ ಸರ್ಕಾರಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದ ರೀತಿಯಲ್ಲಿ ವಿತ್ತೀಯ ಸಮಸ್ಯೆಯಿಲ್ಲ ಎಂದು ಹೇಳಿದರು.
ಅನುದಾನ ಬಳಕೆ ಹೆಚ್ಚಳ: ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಡಿ ಅನುದಾನ ಬಳಕೆಯಲ್ಲಿ ಈ ವರ್ಷ ಉತ್ತಮ ಸಾಧನೆ ಮಾಡಲಾಗಿದೆ. ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ಕೇವಲ ೩೫೨ ಕೋಟಿ ರೂ ವೆಚ್ಚಮಾಡಲಾಗಿತ್ತು. ಆದರೆ ಈ ಬಾರಿ ಡಿಸೆಂಬರ್ ಅಂತ್ಯದ ವೇಳೆಗೆ ೧,೬೯೨ ಕೋಟಿ ರೂ ವೆಚ್ಚಮಾಡಲಾಗಿದೆ.
ನರ್ಮ್ ಯೋಜನೆಯಡಿ ಐದು ವರ್ಷಗಳ ಅವಧಿಗೆ ೪,೨೫೪ ಕೋಟಿ ರೂ ಮಂಜೂರು ಮಾಡಲಾಗಿದ್ದು, ಈ ವರೆವಿಗೆ ೧,೩೮೧ ಕೋಟಿ ರೂ ವೆಚ್ಚಮಾಡಲಾಗಿದೆ. ಕಳೆದ ವರ್ಷ ೩೫೮ ಕೋಟಿ ರೂ ವೆಚ್ಚಮಾಡಿದ್ದರೆ ಈ ಬಾರಿ ೭೪೧ ಕೋಟಿ ರೂ ವಿನಿಯೋಗಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.