ಬೆಂಗಳೂರು, ಜನವರಿ ೨೨: ನೂತನ ಶಿಕ್ಷಣ ನೀತಿ, ಶೈಕ್ಷಣಿಕ ಸುಧಾರಣಾ ಕ್ರಮ ಜಾರಿಯ ಮುನ್ನ ಕೇಂದ್ರ ಸರ್ಕಾರ ಶಿಕ್ಷಣ ತಜ್ಞರು ಹಾಗೂ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಸಚಿವರು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಠಿಮಾಡುತ್ತಿದ್ದಾರೆ. ಡೀಮ್ಡ್ ವಿಶ್ವ ವಿದ್ಯಾಲಯ ಮಾನ್ಯತೆಯನ್ನು ರದ್ದುಮಾಡವ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೂ ಮುನ್ನ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕೆಂದು ಮನವಿ ಮಾಡಿದರು.
ಯುಜಿಸಿ ನೀಡುವ ನಿರ್ದೇಶನದ ಮೇರೆಗೆ ಮೂಲ ಸೌಕರ್‍ಯಗಳಿಲ್ಲದ ಪರಿಗಣಿತ ವಿಶ್ವ ವಿದ್ಯಾಲಯಗಳ ಮಾನ್ಯತೆಯನ್ನು ರದ್ದುಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ, ಅದಕ್ಕೂ ಮುನ್ನ ಚರ್ಚೆ ಅಗತ್ಯವಾಗಿದೆ ಎಂದರು.
ರಾಜ್ಯ ಆರು ಪರಿಗಣಿತ ವಿಶ್ವವಿದ್ಯಾಲಯ ಮಾನ್ಯತೆ ರದ್ದುಮಾಡಿರುವ ಸೂಚನೆ ನೀಡಿದ್ದಾರೆ. ಈ ಆರು ಸಂಸ್ಥೆಗಳು ಕಳಪೆ ಮಟ್ಟದ್ದಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಈ ಎಲ್ಲ ಸಂಸ್ಥೆಗಳು ರಾಜ್ಯದ ವ್ಯಾಪ್ತಿಗೆ ಬರಲು ಇಚ್ಚಿಸಿದರೆ ಅಂತಹ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಮಾನ್ಯತೆ ನೀಡುವ ಮುನ್ನ ಮೂಲ ಸೌಕರ್‍ಯ ಮತ್ತು ಇತರ ಅಭಿವೃದ್ಧಿ ವಿಚಾರದ ಬಗ್ಗೆ ಸ್ಥಳಿಯ ಉನ್ನತ ಮಟ್ಟದ ಸಮಿತಿಯ ಮುಂದೆ ವಿವರ ಸಲ್ಲಿಸಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಈಗಾಗಲೇ ಆರು ಡೀಮ್ಡು ವಿಶ್ವವಿದ್ಯಾಲಯಗಳ ಮಾನ್ಯತೆಯನ್ನು ರದ್ದುಮಾಡಿದರೂ ಸಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕೇಂದ್ರ ಸ್ವಷ್ಟಪಡಿಸಿದೆ ಎಂದರು.
ಮಾನ್ಯತೆ ಇಲ್ಲದ ಕಾಲೇಜು: ರಾಜ್ಯದಲ್ಲಿ ವಿವಿಧ ದೇಶಗಳ, ಸಂಸ್ಥೆಗಳ ಹೆಸರಿನಡಿ ೩೨ ಕಾಲೇಜುಗಳು ಆರಂಭಿಸಿದ್ದು, ಇವುಗಳ ಸಂಪೂರ್ಣ ವಿವಿರವನ್ನು ನೀಡಿ ಯಾವುದಾದರೂ ಒಂದು ಮಾನ್ಯತೆ ಪಡೆದ ಸಂಸ್ಥೆಯಿಂದ ಅನುಮತಿ ಪಡೆಯಬೇಕು ಎಂದು ಎಚ್ಚರಿಕೆ ನೀಡಿದ್ದರೂ ಇದುವರೆಗೂ ಈ ೩೨ ಸಂಸ್ಥೆಗಳ ಮಾನ್ಯತೆ ಬಗ್ಗೆ ಆಡಳಿತ ಮಂಡಳಿ ಸರ್ಕಾರದ ಮುಂದೆ ಮನವಿ ಸಲ್ಲಿಸಿಲ್ಲ. ಹಾಗಾಗಿ ಇವುಗಳನ್ನು ಪೊಲೀಸರ ನೆರವಿನೊಂದಿಗೆ ಮುಚ್ಚಿಸುವ ಕಠಿಣ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಈ ೩೨ ರಲ್ಲಿ ಬಹುತೇಕ ಕಾಲೇಜುಗಳು ಬೆಂಗಳೂರು ಮಹಾನಗರದಲ್ಲಿ ಇವೆ. ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೆಲವು ಕೋರ್ಸ್‌ಗಳನ್ನು ತೆರೆದಿದ್ದು, ಅವುಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಿದರು.
ಹಣ ಬಿಡುಗಡೆ : ಕಳೆದ ೨೦೦೬-೦೭ ರಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆದಿದ್ದ ೪೩೭೯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ೮ ಕೋಟಿ ರೂ. ಹಣವನ್ನು ತಾಂತ್ರಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಾಗಿದೆ. ಇನ್ನೂ ಒಂದು ವರ್ಷದ ಕಂತಿನ ಹಣವನ್ನು ಬರುವ ಏಪ್ರಿಲ್ ಒಳಗಾಗಿ ಪಾವತಿ ಮಾಡಲಾಗುವುದು ಎಂದರು.