ಭಟ್ಕಳ, ಫೆಬ್ರವರಿ 12: ನಗರದ ಡೊಂಗರಪಳ್ಳಿಯ ಬಳಿ ರಸ್ತೆಯಂಚಿನಿಂದ ಕಮರಿಗೆ ಬಿದ್ದು ಇಬ್ಬರು ಬಾಲಕರು ಗಾಯಗೊಂಡಿರುವ ವರದಿಯಾಗಿದೆ. ಒಂದು ಸೈಕಲ್ಲಿನಲ್ಲಿ ಈ ಇಬ್ಬರು ಬಾಲಕರು ಪಯಣಿಸುತ್ತಿದ್ದು ಇಳಿಜಾರಿನಲ್ಲಿ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಬದಿಯ ಕಂಭವೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಕಮರಿಗೆ ಬಿದ್ದಿದ್ದಾರೆ. ಸೈಕಲ್ ನಡೆಸುತ್ತಿದ್ದ ಬಾಲಕ ಹಾಗೂ ಸೈಕಲ್ ಕಮರಿಯಲ್ಲಿ ಹೆಚ್ಚಿನ ಆಳವಿಲ್ಲದೆಡೆ ಬಿದ್ದರೆ ಹಿಂಬದಿ ಕುಳಿತಿದ್ದ ಬಾಲಕ ಸುಮಾರು ಮೂವತ್ತು ಅಡಿ ಆಳದ ಕಮರಿಗೆ ಬಿದ್ದಿದ್ದಾನೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ನಗರದ ವೆಲ್ಫೇರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಹಾಗೂ ಪ್ರಥಮ ಚಿಕಿತ್ಸೆ ನೀಡಲಾಯಿತು.
ಆಶ್ಚರ್ಯವೆಂದರೆ ಕೊಂಚಕಾಲದಲ್ಲಿಯೇ ಪ್ರಜ್ಞೆಗೆ ಮರಳಿದ ಬಾಲಕ ಆಸ್ಪತ್ರೆಯ ಸಿಬ್ಬಂದಿಯ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ. ಇನ್ನೊಬ್ಬ ಬಾಲಕನಿಗೆ ಪ್ರಜ್ಞೆ ಬಂದ ಬಳಿಕ ಸಿಬ್ಬಂದಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಬಾಲಕ ತನ್ನ ಹೆಸರು ಅಬ್ದುಲ್ ಖಾವಿ, ತಂದೆಯ ಹೆಸರು ಅಬ್ದುಲ್ ರಹೀಂ ಡಿ.ಎಫ್. ಎಂದೂ ತಾನು ಜಾಮಿಯಾ ಶಾಲೆಯ ವಿದ್ಯಾರ್ಥಿ, ಹಾಗೂ ತನ್ನ ಮನೆ ಕಾಝಿಯಾ ರಸ್ತೆಯಲ್ಲಿದೆ ಎಂದು ತಿಳಿಸಿದ್ದಾನೆ. ಅಂದು ಮಕ್ತೂಂ ಕಾಲೋನಿಯಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸಲು ತನ್ನ ಸ್ನೇಹಿತರೊಂದಿಗೆ ಹೋಗಿದ್ದು ಹಿಂದಿರುಗುವಾಗ ಇನ್ನೊಬ್ಬ ಹುಡುಗನ ಸೈಕಲ್ಲಿನಲ್ಲಿ ಕುಳಿತು ಬಂದೆ ಎಂದು ತಿಳಿಸಿದ್ದಾನೆ. ಆತನ ಹೊಟ್ಟೆ ಹಾಗೂ ತಲೆಗೆ ಗಾಯವಾಗಿದ್ದು ಈಗ ಅಪಾಯದಿಂದ ಪಾರಾಗಿದ್ದಾನೆ
ನಗರದ ಡೊಂಗರಪಳ್ಳಿಯ ರಸ್ತೆ ಅಪಾಯಕಾರಿಯಾಗಿದ್ದು ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದಿರುವುದರಿಂದ ಈ ಸ್ಥಳ ವಾಹನಗಳಿಗೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ, ಆಯ ತಪ್ಪಿದರೆ ನದಿ ಸೇರುವ ಅಪಾಯವಿದೆ. ಕೂಡಲೇ ಈ ಸ್ಥಳದಲ್ಲಿ ಅಗತ್ಯವಾದ ರಕ್ಷಣ ವ್ಯವಸ್ಥೆ ಒದಗಿಸುವಂತೆ ಸಾರ್ವಜನಿಕರು ಭಟ್ಕಳ ಮುನಿಸಿಪಾಲಿಟಿಗೆ ಆಗ್ರಹಿಸಿದ್ದಾರೆ.