ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ವಿವಿಧ ಯೋಜನೆಗಳ ಹೆಸರಿನಲ್ಲಿ ರೈತನ ಭೂಕಬಳಿಸುತ್ತಿರುವ ರಾಜ್ಯ ಸರ್ಕಾರ - ತಕ್ಷಣ ಕಡಿವಾಣ ಹಾಕಲು ದೇವೇಗೌಡ ಆಗ್ರಹ

ಬೆಂಗಳೂರು: ವಿವಿಧ ಯೋಜನೆಗಳ ಹೆಸರಿನಲ್ಲಿ ರೈತನ ಭೂಕಬಳಿಸುತ್ತಿರುವ ರಾಜ್ಯ ಸರ್ಕಾರ - ತಕ್ಷಣ ಕಡಿವಾಣ ಹಾಕಲು ದೇವೇಗೌಡ ಆಗ್ರಹ

Thu, 25 Feb 2010 16:10:00  Office Staff   S.O. News Service

ಬೆಂಗಳೂರು,ಫೆಬ್ರವರಿ 25:-ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅನ್ನದಾತ ರೈತನ ಭೂಮಿಯನ್ನು ರಾಜ್ಯದ ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದ್ದು ಈ ಕೆಲಸಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮಾಜೀ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಹಸ್ರಾರು ರೈತರು ಮಾರ್ಚ್ ೧೦ ರಂದು ಸಂಸತ್ತಿಗೆ ಮುತ್ತಿಗೆ ಹಾಕಲಿದ್ದಾರೆ.

 

ಎರಡು ಸಾವಿರಕ್ಕೂ ಹೆಚ್ಚು ರೈತರು ಇದೇ ಕಾರಣಕ್ಕಾಗಿ ಮಾರ್ಚ್ ಏಳರಂದು ಮಾಜೀ ಪ್ರಧಾನಿ ದೇವೇಗೌಡರೊಂದಿಗೆ ವಿಶೇಷ ರೈಲಿನಲ್ಲಿ ದೆಹಲಿಗೆ ತೆರಳಲಿದ್ದು ಮಾರ್ಚ್ ೧೦ ರಂದು ಸಂಸತ್ತಿಗೆ ಮುತ್ತಿಗೆ ಹಾಕಲಿದ್ದಾರೆ.

 

 

ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೂಲ ಒಪ್ಪಂದವನ್ನು ಉಲ್ಲಂಘಿಸಿ ಹೆಚ್ಚುವರಿ ಭೂಮಿ ನೀಡುತ್ತಿದ್ದು ಇದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದ ಮಾಜೀ ಪ್ರಧಾನಿ ದೇವೇಗೌಡ, ಈ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳಿಗೆ ರೈತರ ಭೂಮಿಯನ್ನು ಕಿತ್ತು ಕೊಡುವುದು ಸರಿಯಲ್ಲ ಎಂದು ಹೋರಾಟ ಪ್ರಾರಂಭಿಸಿದ್ದರು.

 

ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನೈಸ್ ಯೋಜನೆಗೆ ಹೆಚ್ಚುವರಿ ಭೂಮಿ ನೀಡಬಾರದು ಎಂದು ಒತ್ತಾಯಿಸಿದ್ದ ದೇವೇಗೌಡ, ಅದೇ ಕಾಲಕ್ಕೆ ರಾಜ್ಯಪಾಲ ಹಂಸರಾಜ ಭಾರಧ್ವಾಜ್ ಅವರನ್ನು ಭೇಟಿ ಮಾಡಿ ರೈತರಿಗಾಗುತ್ತಿರುವ ಅನ್ಯಾಯದ ಬಗ್ಗೆ ದೂರು ನೀಡಿದ್ದರು.

 

ಕೈಗಾರಿಕೆಗಳ ಹೆಸರಿನಲ್ಲಿ ಹಾಗೂ ನೈಸ್ ಯೋಜನೆಗಾಗಿ ನೀಡುತ್ತಿರುವ ಹೆಚ್ಚುವರಿ ಜಮೀನು ಸೇರಿದಂತೆ ಒಟ್ಟಾರೆಯಾಗಿ ೧.೭೧ ಲಕ್ಷ ಎಕರೆ ಭೂಮಿಯನ್ನು ಸರ್ಕಾರ ರೈತರಿಂದ ಕಿತ್ತುಕೊಳ್ಳುತ್ತಿದ್ದು

ಇದನ್ನು ತಡೆಗಟ್ಟಬೇಕು, ರೈತರ ಹಿತ ಕಾಪಾಡಬೇಕು ಎಂದು ದೇವೇಗೌಡ ಒತ್ತಾಯಿಸಿದ್ದರು.

 

 

ಇದಾದ ನಂತರ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮಾಡುತ್ತಿರುವ ಹುನ್ನಾರವನ್ನು ತಡೆಗಟ್ಟಲು ಪ್ರತಿಪಕ್ಷವಾದ ಕಾಂಗ್ರೆಸ್ ವಿರೋಧಿಸುತ್ತಿಲ್ಲ ಎಂದು ಅಪಸ್ವರ ಎತ್ತಿದ್ದ ದೇವೇಗೌಡರು, ಇದೇ ಕಾರಣಕ್ಕಾಗಿ ರೈತರ ಹಿತ ಕಾಪಾಡಲು ಪ್ರಧಾನಮಂತ್ರಿ ಮನ್‌ಮೋಹನ್‌ಸಿಂಗ್ ಅವರು ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

 

ಈ ಬೆಳವಣಿಗೆಯ ನಂತರ ಸರ್ಕಾರದ ವಿರುದ್ದ ರೈತರನ್ನು ಜಾಗೃತಿ ಮಾಡುವ ಸಲುವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿದ್ದ ದೇವೇಗೌಡ ನೆನ್ನೆ ನೈಸ್ ಯೋಜನೆ ವ್ಯಾಪ್ತಿಯ ಮಾದಾವರದಲ್ಲಿ ರೈತರ ಬೃಹತ್ ಜಾಗೃತಿ ಸಮಾವೇಶ ನಡೆಸಿದ್ದರು.

 

 

ಇದೀಗ ಹೋರಾಟವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಮುಂದಾಗಿರುವ ಅವರು ಮಾರ್ಚ್ ೧೦ ರಂದು ಸಹಸ್ರಾರು ರೈತರ ಜತೆಗೂಡಿ ಸಂಸತ್ತಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದು ಆ ಮೂಲಕ ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರ ಗಮನ ಸೆಳೆಯಲು ನಿರ್ಧರಿಸಿದ್ದಾರೆ.

 

 

ಹೀಗೆ ದಿಲ್ಲಿಯಲ್ಲಿ ನಡೆಸಲಿರುವ ಹೋರಾಟದ ಸಂಧರ್ಭದಲ್ಲಿ ದೇವೇಗೌಡರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಎಲ್ಲಾ ನ್ಯಾಯಮೂರ್ತಿಗಳಿಗೂ ನೈಸ್ ಸಂಬಂಧಪಟ್ಟ ಕಡತಗಳನ್ನು ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

 

 

೧೦ ರಂದು ಸಂಸತ್ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ನಂತರ ಪ್ರಧಾನಿ ಸೇರಿದಂತೆ ಕೆಲವು ಪ್ರಮುಖ ಸಚಿವರನ್ನು ಹಾಗೂ ಪ್ರತಿಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದು ಕರ್ನಾಟಕದಲ್ಲಿ ರೈತರಿಗಾಗುತ್ತಿರುವ ಅನ್ಯಾಯದ ಕುರಿತು ವಿವರ ನೀಡಲಿದ್ದಾರೆ.

 

 


Share: