ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ತಿಳಿಯಾದ ರಾಜಕೀಯ ವಾತಾವರಣ - ಬಿಜೆಪಿ ವರಿಷ್ಠರ ಘೋಷಣೆಗೆ ತಲೆಬಾಗಿದ ರೆಡ್ದಿಗಳು

ನವದೆಹಲಿ: ತಿಳಿಯಾದ ರಾಜಕೀಯ ವಾತಾವರಣ - ಬಿಜೆಪಿ ವರಿಷ್ಠರ ಘೋಷಣೆಗೆ ತಲೆಬಾಗಿದ ರೆಡ್ದಿಗಳು

Mon, 09 Nov 2009 02:40:00  Office Staff   S.O. News Service

ನವದೆಹಲಿ:‘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಇಲ್ಲ’ ಎಂಬ ಬಿಜೆಪಿ ವರಿಷ್ಠರ ಸೂಚನೆಗೆ ಕೊನೆಗೂ ಮಣಿದಿರುವ ಭಿನ್ನಮತೀಯ ಮುಖಂಡರಾದ ಬಳ್ಳಾರಿ ರೆಡ್ಡಿ ಸಹೋದರರು ತಮ್ಮ ಒಂದಂಶದ ಬೇಡಿಕೆಯನ್ನು ಸಡಿಲಗೊಳಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ‘ಕದನ ವಿರಾಮ’ ಘೋಷಣೆ ಮಾಡಲು ಶನಿವಾರ ರಾತ್ರಿ ರಾಜಧಾನಿಗೆ ಆಗಮಿಸಿದ್ದಾರೆ. ಭಾನುವಾರ ಅಧಿಕೃತವಾಗಿ ರಾಜಿ- ಸಂಧಾನ ಏರ್ಪಡಲಿದೆ.

ಬಿಜೆಪಿ ಬಿಕ್ಕಟ್ಟು ಪರಿಹಾರ ಮಾಡಲು ಬಿಜೆಪಿ ವರಿಷ್ಠರು ಒಂದು ವಾರ ನಡೆಸಿದ ಸತತ ಪ್ರಯತ್ನ ಕೊನೆಗೂ ಫಲ ನೀಡಿದೆ. ನಾಯಕತ್ವ ಬದಲಾವಣೆ ಇಲ್ಲ. ಉಳಿದಿರುವ ಬೇಡಿಕೆಗಳನ್ನು ಪರಿಹಾರ ಮಾಡಲು ಸಿದ್ಧ ಎಂಬ ಸೂಚನೆಯನ್ನು ವರಿಷ್ಠರು ರೆಡ್ಡಿ ಸಹೋದರರಿಗೆ ನೀಡಿದ್ದರು. ಈ ಬಗ್ಗೆ ಬೆಂಬಲಿಗ ಶಾಸಕರ ಜತೆ ಸಮಾಲೋಚಿಸಿ ತೀರ್ಮಾನ ಹೇಳುವುದಾಗಿ ಸಚಿವ ಜನಾರ್ದನರೆಡ್ಡಿ ಶುಕ್ರವಾರ ರಾತ್ರಿ ಹೈದರಾಬಾದ್‌ಗೆ ಹಿಂತಿರುಗಿದ್ದರು. ಹೈದರಾಬಾದ್ ರೆಸಾರ್ಟ್‌ನಲ್ಲಿ ಬೆಂಬಲಿಗ ಸಚಿವರು, ಶಾಸಕರ ಜತೆ ಸಮಾಲೋಚಿಸಿದ ರೆಡ್ಡಿ ಶನಿವಾರ ಬೆಂಗಳೂರಿಗೆ ತೆರಳಿ ತಮ್ಮ ಸೋದರ ಕರುಣಾಕರರೆಡ್ಡಿ ಹಾಗೂ ವಿಧಾನಸಭೆ ಸ್ಪೀಕರ್ ಜಗದೀಶ್ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದರು.

‘ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆಯುವುದು ಬೇಡ’ ಎಂಬ ಸಲಹೆಯನ್ನು ಶೆಟ್ಟರ್ ನೀಡಿದ ಬಳಿಕ ರೆಡ್ಡಿ ಸಹೋದರರು ವರಿಷ್ಠರ ಸಮ್ಮುಖದಲ್ಲಿ ಸಂಧಾನಕ್ಕೆ ಬರುವ ನಿರ್ಧಾರ ಪ್ರಕಟಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ. 
 
ವರಿಷ್ಠರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಸಚಿವೆ ಶೋಭಾ ಅವರಿಂದ ರಾಜೀನಾಮೆ ಪಡೆದಿದ್ದು ಹಾಗೂ ತಮ್ಮ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ್ ಬದಲಾವಣೆ ಆದೇಶ ಹೊರಡಿಸಿದ್ದು ರೆಡ್ಡಿ ಬಣದಲ್ಲಿದ್ದ ಬಹಳಷ್ಟು ಶಾಸಕರಿಗೆ ಸಂತಸ ತಂದಿದೆ. ಇದು ನಾಯಕತ್ವ ಬದಲಾವಣೆ ಬೇಡಿಕೆ ಕೈಬಿಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಸಂಪುಟದಿಂದ ಮತ್ಯಾವ ಸಚಿವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಜಗದೀಶ್ ಶೆಟ್ಟರ್ ಬಯಸಿದರೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಆದರೆ, ಈ ಹಂತದಲ್ಲಿ ಅವರು ಸಂಪುಟ ಸೇರಲಾರರು ಎಂದು ಮೂಲಗಳು ಹೇಳಿವೆ.

ಇದರಿಂದಾಗಿ ಬಸವರಾಜ ಬೊಮ್ಮಾಯಿ, ಸಿ. ಎಂ. ಉದಾಸಿ, ಮುರುಗೇಶ್ ನಿರಾಣಿ, ಲಕ್ಷ್ಮಣ ಸವಡಿ ಹಾಗೂ ಹರತಾಳು ಹಾಲಪ್ಪ ಅವರ ಸಚಿವ ಸ್ಥಾನ ಅಬಾಧಿತವಾಗಲಿದೆ.  ಗೃಹ ಸೇರಿದಂತೆ ಸಚಿವರ ಈಗಿನ ಖಾತೆಗಳೂ ಬದಲಾವಣೆ ಆಗುವುದಿಲ್ಲ. ರೆಡ್ಡಿ ಸಹೋದರರು ತಮ್ಮ ವ್ಯವಹಾರದ ದೃಷ್ಟಿಯಿಂದ ಮುಂದಿಟ್ಟಿರುವ ಬೇಡಿಕೆಗಳನ್ನು ಕುರಿತು ಗಮನ ಹರಿಸುವಂತೆ ಮುಖ್ಯಮಂತ್ರಿಗೆ ಹೇಳಲಾಗಿದೆ.

‘ರೆಡ್ಡಿ ಸಹೋದರರು ಇಂಥ ಬಿಕ್ಕಟ್ಟು ಸೃಷ್ಟಿಸಬಹುದು ಎಂದು ನಾವು ಮೊದಲೇ ಊಹಿಸಿದ್ದೆವು. ಈ ಬಗ್ಗೆ ಯಡಿಯೂರಪ್ಪ ಅವರಿಗೂ ಎಚ್ಚರಿಕೆ ನೀಡಲಾಗಿತ್ತು. ಇಷ್ಟಾಗಿಯೂ ಮೂರು ದಿನಗಳಿಂದ ಅವರನ್ನು ಮನವೊಲಿಸುವ ಪ್ರಯತ್ನ ನಡೆಯಿತು’ ಎಂದು ಮೂಲಗಳು ವಿವರಿಸಿವೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಯಡಿಯೂರಪ್ಪ ಅವರ ಪರಿಶ್ರಮವಿದೆ. ಈ ಕೀರ್ತಿ ಅವರಿಗೆ ಸಲ್ಲಬೇಕು. ಈಗಲೂ ತಮ್ಮ ಹಿಂದೆ ಜನರಿದ್ದಾರೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. ಅವರ ಹಿಂದೆ ಜನ ಇದ್ದಾರೆ ನಿಜ. ಈಗ ಬೇಕಾಗಿರುವುದು ಶಾಸಕರು. ಆದರೆ, ಶಾಸಕರಿಲ್ಲ ಇದು ಬಿಕ್ಕಟ್ಟು ಪರಿಹಾರಕ್ಕೆ ಅಡ್ಡಿಯಾಯಿತು.

ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕಿವಿ ಮಾತು ಹೇಳಲಾಗಿದೆ. ಆಡಳಿತಾತ್ಮಕ ಸಮಸ್ಯೆಗಳನ್ನು ಸರಿ ಮಾಡುವ ಭರವಸೆಯನ್ನು ಅವರೂ ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನಾಳೆ ಅಡ್ವಾಣಿ ಅವರ ಹುಟ್ಟುಹಬ್ಬವಿದೆ. ಅವರಿಗೆ ಶುಭಾಶಯ ಕೋರಿ ಬಳಿಕ ಬೆಂಗಳೂರಿಗೆ ಹೋಗಲು ಮುಖ್ಯಮಂತ್ರಿಗೆ ಸೂಚಿಸಲಾಗಿದೆ ಎಂದು ವೆಂಕಯ್ಯ ಸಂಜೆ ವಿವರಿಸಿದರು. ಸುಷ್ಮಾ ಸ್ವರಾಜ್ ಅನಂತ ಕುಮಾರ್ ಹಾಗೂ ಡಾ. ವಿ.ಎಸ್. ಆಚಾರ್ಯ ಸಭೆಯಲ್ಲಿ ಭಾಗವಹಿಸಿದ್ದರು.

ಈ ಮಧ್ಯೆ, ಜಗದೀಶ್ ಶೆಟ್ಟರ್ ಸಂಪುಟ ಸೇರುವ ಬಯಕೆ ವ್ಯಕ್ತಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗೆ ಸಂದೇಶ ಕಳುಹಿಸಿದ್ದಾರೆ. ತಾವೊಬ್ಬರೇ ಸಚಿವರಾಗಿ ಪ್ರಮಾಣ ಸ್ವೀಕರಿಸುವುದು ಈಗ ಸರಿ ಕಾಣುವುದಿಲ್ಲ. ತಮ್ಮ ಬೆಂಬಲಿಗರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿದ್ದಾರೆ. ಯಡಿಯೂರಪ್ಪ ಈ ಮನವಿಗೆ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.

ಗೊಂದಲದ ಗೂಡಿನಲ್ಲಿ ಶೆಟ್ಟರ್: ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡ ಆರಂಭದ ದಿನಗಳಲ್ಲಿ ವಿಧಾನಸಭೆಯ ಅಧ್ಯಕ್ಷ ಜಗದೀಶ್ ಶೆಟ್ಟರ್ ಪಕ್ಷದ ಪರ್ಯಾಯ ನಾಯಕನಂತೆ ಗೋಚರಿಸಿದ್ದರು. ಆದರೆ 13 ದಿನಗಳ ಬಳಿಕ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಅವರು ಗೊಂದಲದ ಗೂಡಿನಲ್ಲಿ ಸಿಲುಕಿದ್ದಾರೆ.

ತಮ್ಮ ಬಣದಲ್ಲಿ 50 ಶಾಸಕರಿದ್ದಾರೆ ಎಂದು ಹೇಳಿದ್ದ ರೆಡ್ಡಿ ಸಹೋದರರು, ‘ಶೆಟ್ಟರ್‌ರನ್ನು ಮುಖ್ಯಮಂತ್ರಿ ಮಾಡಿಯೇ ತೀರುತ್ತೇವೆ’ ಎಂಬ ಕಹಳೆ ಊದಿದ್ದರು. ಆದರೆ ಯಡಿಯೂರಪ್ಪರನ್ನೇ ಬೆಂಬಲಿಸಿದ್ದ ರಾಜ್ಯದ ಆರ್‌ಎಸ್‌ಎಸ್ ಪ್ರಮುಖರು ಶೆಟ್ಟರ್ ಆಕಾಂಕ್ಷೆಗೆ ಮೊದಲ ಗದಾ ಪ್ರಹಾರ ನಡೆಸಿದ್ದರು. ಆಮೇಲೆ ನವದೆಹಲಿಯಲ್ಲಿ ವರಿಷ್ಠರು ಕೂಡ ಸ್ಪೀಕರ್ ಬೇಡಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು.

‘ಶೆಟ್ಟರ್ ಅವರ ನಡೆಯ ಬಗ್ಗೆ ಪಕ್ಷದ ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ಅಧ್ಯಕ್ಷ ಹುದ್ದೆಯಲ್ಲಿದ್ದುಕೊಂಡೇ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆಸಿದ ಬಗ್ಗೆ ಯಡಿಯೂರಪ್ಪ ಬೆಂಬಲಿಗರೂ ಬಹಿರಂಗವಾಗಿಯೇ ಟೀಕಿಸಿದ್ದಾರೆ. ಮುಖ್ಯಮಂತ್ರಿಗಳು ಶೆಟ್ಟರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಬಿಕ್ಕಟ್ಟು ಪರಿಹಾರಕ್ಕೆ ಸಿದ್ಧವಾಗಿದ್ದಾರೆ. ಆದರೆ ಸ್ಪೀಕರ್ ಸ್ಥಾನ ತ್ಯಜಿಸುವ ಮತ್ತು ಸಚಿವ ಪದವಿ ಸ್ವೀಕರಿಸುವ ಬಗ್ಗೆ ಸ್ವತಃ ಅವರೇ ಗೊಂದಲಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ

ರೆಡ್ಡಿ ಮೇಲೆ ಒತ್ತಡ: ವರಿಷ್ಠರ ಹಿಂದೇಟು  
 
ಆಂಧ್ರದ ರಾಜಕೀಯ ಬಿಕ್ಕಟ್ಟು ಪರಿಹಾರ ಕಾಂಗ್ರೆಸ್ ಹೈಕಮಾಂಡ್‌ಗೆ ಸಾಧ್ಯವಾಗುವುದಾದರೆ ಕರ್ನಾಟಕ ಬಿಕ್ಕಟ್ಟು ಬಗೆಹರಿಸಲು ಬಿಜೆಪಿ ವರಿಷ್ಠರಿಗೆ ಯಾಕೆ ಆಗೋಲ್ಲ? ಎಲ್ಲರ ಬಾಯಲ್ಲೂ, ಅದರಲ್ಲೂ ರಾಜಕೀಯ ವಲಯದಲ್ಲಿ ಈ ಪ್ರಶ್ನೆ ಸಾಮಾನ್ಯವಾಗಿ ಕೇಳಿ ಬರುತ್ತಿದೆ.  

ನವದೆಹಲಿ: ವೈ.ಎಸ್.ರಾಜಶೇಖರ ರೆಡ್ಡಿ ಮೃತಪಟ್ಟ ಬಳಿಕ ಅವರ ಪುತ್ರ ಜಗನ್ ಅವರನ್ನೇ ಉತ್ತರಾಧಿಕಾರಿಯಾಗಿ ನೇಮಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಬಂದ ಒತ್ತಡ; ಸೃಷ್ಟಿಸಿದ ಕೋಲಾಹಲ ಈಗ ಇತಿಹಾಸ. ಬಿಕ್ಕಟ್ಟನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಜಾಣ್ಮೆಯಿಂದ ಬಗೆಹರಿಸಿದರು.

‘ನಾಯಕತ್ವದ ವಿಷಯವನ್ನು ನನಗೆ ಬಿಡಿ’ ಎಂದು ಸೋನಿಯಾ ಹೇಳಿದ ಮಾತಿಗೆ ಜಗನ್ ಎದುರಾಡಲಿಲ್ಲ. ಅಷ್ಟೇ ಅಲ್ಲ, ಇಡೀ ಪಕ್ಷ ಅದನ್ನು ಒಪ್ಪಿಕೊಂಡಿತು. ಕಾಂಗ್ರೆಸ್ನಲ್ಲಿ  ಒಬ್ಬರೇ ನಾಯಕರು. ಒಂದೇ ಧ್ವನಿ. ಇಲ್ಲಿ ಒಡಕು ಮಾತಿಗೆ ಅವಕಾಶವೇ ಇಲ್ಲ. ಕಾಂಗ್ರೆಸ್ ಅಧ್ಯಕ್ಷರು ಖುದ್ದಾಗಿ ಜಗನ್ ಅವರನ್ನು ಕರೆದು ಮಾತನಾಡಿದ ಬಳಿಕ ಲಾಬಿ- ಗದ್ದಲ ಎಲ್ಲವೂ ಬಂದ್. ಹಿರಿಯ ಮುಖಂಡ ರೋಸಯ್ಯ ಮುಖ್ಯಮಂತ್ರಿ ಆಗಿ ಮುಂದುವರಿದರು.

ಕರ್ನಾಟಕದಲ್ಲೂ ಈಗ ಇಂತಹದೇ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ರೆಡ್ಡಿ ಸಹೋದರರು ಬಂಡೆದಿದ್ದಾರೆ. ಪ್ರವಾಹಕ್ಕೆ ಸಿಕ್ಕಿ ಹದಿನೈದು ಜಿಲ್ಲೆಗಳಲ್ಲಿ ಬದುಕು ಕೊಚ್ಚಿಹೋಗಿದೆ. ಮೊದಲಿನ ಸ್ಥಿತಿಗೆ ಬರಲು ಜನ ಒದ್ದಾಡುತ್ತಿದ್ದಾರೆ. ಇಂಥ ವಿಷಮ ಗಳಿಗೆಯಲ್ಲಿ ಬಿಜೆಪಿಯಲ್ಲಿ ‘ರಾಜಕೀಯ ದೊಂಬರಾಟ’ ಶುರುವಾಗಿದೆ. 
 
ಬಿಜೆಪಿ ವರಿಷ್ಠರು ಯಾವಾಗಲೋ ದೊಂಬರಾಟಕ್ಕೆ ಅಂತ್ಯ ಹಾಡಬಹುದಿತ್ತು. ಅವರಿಗೆ ಮನಸ್ಸಿದ್ದಂತಿಲ್ಲ. ಇದಕ್ಕೆ ಹತ್ತಾರು ಕಾರಣಗಳು. ವಾಜಪೇಯಿ ಅವರ ಬಳಿಕ ಒಬ್ಬನೇ ನಾಯಕ, ಒಂದೇ ಧ್ವನಿ ಎನ್ನುವಂಥ ವಾತಾವರಣ ಈ ಪಕ್ಷದಲ್ಲಿ ಇಲ್ಲ. ನಾಲ್ಕಾರು ನಾಯಕರು- ನಾಲ್ಕಾರು ರಾಗಗಳು. ಹೀಗಾಗಿ ರಾಜಕೀಯ ಬಿಕ್ಕಟ್ಟು ಇನ್ನೂ ಪರಿಹಾರ ಕಂಡಿಲ್ಲ.

ರಾಜ್ಯ ರಾಜಕಾರಣ ದೆಹಲಿಗೆ ವರ್ಗಾವಣೆಯಾಗಿ ವಾರ ಕಳೆದುಹೋಯಿತು. ಮುಖ್ಯಮಂತ್ರಿ ಬಂದಿಳಿದು 4  ದಿನ ಮುಗಿಯಿತು. ತಮ್ಮ ಕುರ್ಚಿ ಉಳಿಯುವುದೋ ಅಥವಾ ಹೋಗುವುದೋ ಎಂಬ ಆತಂಕ ದೂರವಾಗಿಲ್ಲ,  ‘ನಾಯಕತ್ವ ಬದಲಾವಣೆ ಇಲ್ಲ’ ಎಂದು ಮೇಲಿಂದ ಮೇಲೆ ಪುನರುಚ್ಚಾರ ಮಾಡುತ್ತಿರುವ ಬಿಜೆಪಿ ವರಿಷ್ಠರು ಇದನ್ನು ಗಟ್ಟಿ ದನಿಯಲ್ಲಿ ಯಾಕೆ ಹೇಳುತ್ತಿಲ್ಲ ಎಂಬ ಸಂಗತಿ ಅನುಮಾನ ಹುಟ್ಟಿಸಿದೆ.

‘ದೆಹಲಿ ನಾಯಕರ ಚಿತಾವಣೆ ಇಲ್ಲದೆ ಬಳ್ಳಾರಿ ಗಣಿ ಧಣಿಗಳು ಈ ಮಟ್ಟಕ್ಕೆ ಹೋಗಲಾರರು. ಯಾರ್‍ಯಾರು ಇವರ ಹಿಂದಿದ್ದಾರೆ ಎಂದು ಬಾಯಿ ಬಿಟ್ಟು ಹೇಳುವ ಅಗತ್ಯವಿಲ್ಲ. ಎಲ್ಲವೂ ಜನರಿಗೆ ಗೊತ್ತಿದೆ. ಶಾಸಕರನ್ನು ‘ಹೈ ಜಾಕ್’ ಮಾಡಿರುವ ಜನರಿಗೆ ಮಣೆ ಹಾಕುವ ಸಂಸ್ಕೃತಿ ತತ್ವ- ಸಿದ್ಧಾಂತದ ಪಕ್ಷದೊಳಗೆ ಬರುತ್ತಿದೆ. ನೀವು  ಮಾಡಿದ್ದು ತಪ್ಪು. ಮೊದಲು ಹಿಡಿದಿಟ್ಟಿರುವ ಶಾಸಕರನ್ನು ಬಿಡುಗಡೆ ಮಾಡಿ ಆಮೇಲೆ ಬನ್ನಿ ಎಂದು ಹೇಳಲು ಯಾರೂ ತಯಾರಿಲ್ಲ’ ಎಂಬ ಆಕ್ಷೇಪ ಪಕ್ಷದಲ್ಲೇ ವ್ಯಕ್ತವಾಗುತ್ತಿದೆ.

ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರ ವಿರೋಧ ಪಕ್ಷದ ನಾಯಕರ ಸ್ಥಾನ ಉಳಿಸಿಕೊಳ್ಳಲು 72  ಮಂದಿ ಶಾಸಕರನ್ನು ದೆಹಲಿಗೆ ಕರೆತಂದರು. ಈ ಶಾಸಕರೆಲ್ಲರೂ ಬಲ ಪ್ರದರ್ಶನಕ್ಕೆ ಅಡ್ವಾಣಿ ಮನೆಗೂ ಧಾವಿಸಿದರು. ಅವರನ್ನು ಭೇಟಿಯಾಗಲು ಲೋಕಸಭೆ ವಿರೋಧ ಪಕ್ಷದ ನಾಯಕ ನಿರಾಕರಿಸಿದರು. ಆದರೆ, ಕರ್ನಾಟಕದ ವಿಷಯದಲ್ಲಿ ಯಾಕೆ ಹೀಗೆ ಕಠಿಣವಾಗಿ ವರ್ತಿಸುತ್ತಿಲ್ಲ ಎಂಬುದು ಸಂಶಯ ಸೃಷ್ಟಿಸಿದೆ.

ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯದ ಜತೆ ವರಿಷ್ಠರು ಚೆಲ್ಲಾಟ ಆಡುತ್ತಿದ್ದಾರೆ. ಏನಾದರೂ ತೀರ್ಮಾನ ಮಾಡಲಿ. ಆದಷ್ಟು ಬೇಗನೆ ಮಾಡಲಿ ಎಂಬ ಆಗ್ರಹ ಬಿಜೆಪಿ ಸಚಿವರು, ಶಾಸಕರಿಂದ ಬರುತ್ತಿದೆ. ಸಮಸ್ಯೆ ವಿಳಂಬದಿಂದ ಪಕ್ಷದ ವರ್ಚಸ್ಸು ದಿನೇ ದಿನೇ ಕುಗ್ಗುತ್ತಿದೆ ಎಂಬುದು ಅವರ ಅಳಲು. ಅವರಿಗಿರುವ ಭಯ- ಆತಂಕ ದೆಹಲಿ ದೊರೆಗಳಿಗ್ಯಾಕಿಲ್ಲ.

ಪರೋಕ್ಷವಾಗಿ ರೆಡ್ಡಿ ಪರ ಕೆಲಸ ಮಾಡುತ್ತಿರುವ ಕೆಲವು ಮುಖಂಡರು ಯಡಿಯೂರಪ್ಪ ಅವರನ್ನೇ ಬಗ್ಗಿಸಿ ಅಂಕುಶ ಹಾಕಲು ಪ್ರಯತ್ನ ಮಾಡಿ ದ್ದಾರೆ. ಈಚೆಗೆ  ಸುಷ್ಮಾ ಸ್ವರಾಜ್ ಮನೆಗೆ  ಮುಖ್ಯಮಂತ್ರಿಗಳು ಹೋಗಿದ್ದಾಗ. ‘ಏನ್ರಿ ನಿಮ್ಮ ಸರ್ಕಾರ ತರಲು ಅವರು (ರೆಡ್ಡಿಗಳು) ಏನೆಲ್ಲ ಸಹಾಯ ಮಾಡಿದ್ದಾರೆ. ಈಗ ಅವರನ್ನೇಕೆ ಹೀಗೆ ನಡೆಸಿಕೊಳ್ಳುತ್ತಿದ್ದೀರಿ?’ ಎಂದು ದಬಾಯಿಸಿದರಂತೆ!

ಮುಖ್ಯಮಂತ್ರಿಗಳೂ ಅವರಿಗೆ ತಿರುಗೇಟು ಕೊಟ್ಟರಂತೆ. ಒಬ್ಬ ಮುಖ್ಯಮಂತ್ರಿ ಬಗ್ಗೆ ಅವರು ಅಗೌರವವಾಗಿ ಮಾತನಾಡುತ್ತಿದ್ದಾರೆ. ಅದು ನಿಮಗೆ ಕಾಣುತ್ತಿಲ್ಲವೇ? ಪ್ರವಾಹ ಪೀಡಿತ ಜನರ ಸಮಸ್ಯೆಗೆ ಸ್ಪಂದಿಸದ ಗದಗ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವ ಅಧಿಕಾರವೂ ಮುಖ್ಯಮಂತ್ರಿಗೆ ಇಲ್ಲವೇ? ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಹೋಗುವುದಿಲ್ಲ, ಅಧಿಕಾರಿಗಳೂ ಕೆಲಸ ಮಾಡುವುದಿಲ್ಲ ಎಂದಾದರೆ ನಾನ್ಯಾಕೆ ಈ ಸ್ಥಾನದಲ್ಲಿ ಇರಬೇಕು ಎಂದು ಕೇಳಿದರಂತೆ!

ರಾಜ್ಯದ ವೈದ್ಯರ ಮುಷ್ಕರದ ಸಮಯದಲ್ಲಿ ಆರೋಗ್ಯ ಸಚಿವರು ಹೇಗೆ ನಡೆದುಕೊಂಡರು ಎಂಬ ಬಗ್ಗೆಯೂ ಮುಖ್ಯಮಂತ್ರಿ ಮೇಡಂಗೆ ವಿವರಿಸಿದರಂತೆ.

ಅದೇನೇ ಇರಲಿ, ಬಿಜೆಪಿ ವರಿಷ್ಠರಲ್ಲಿ ಎಲ್ಲರೂ ಯಡಿಯೂರಪ್ಪ ಅವರ ಪರವಾಗಿ ನಿಂತಿಲ್ಲ. ಬಿಜೆಪಿ ಅಧ್ಯಕ್ಷ ರಾಜ್‌ನಾಥ್‌ಸಿಂಗ್, ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ‘ನಾಯಕತ್ವ ಬದಲಾವಣೆ ಬೇಡ’ ಎಂಬ ಖಚಿತ ನಿಲುವು ವ್ಯಕ್ತಪಡಿಸಿದ್ದಾರಂತೆ. ಅಡ್ವಾಣಿ ಅವರೂ ಹಣ ಬಲ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಉಳಿದ ಮುಖಂಡರು ಹಾವೂ ಸಾಯಬಾರದು..ಕೋಲು ಮುರಿಯಬಾರದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಎಲ್ಲರೂ ಗಟ್ಟಿಯಾಗಿ ರೆಡ್ಡಿ ಸಹೋದರರಿಗೆ ಎಚ್ಚರಿಕೆ ಕೊಟ್ಟರೆ ಸಮಸ್ಯೆ ಕ್ಷಣಾರ್ಧದಲ್ಲಿ ಬಗೆಹರಿಯಲಿದೆ ಎಂಬುದು ಬಿಜೆಪಿ ಮುಖಂಡರ ವಿಶ್ವಾಸ.

 ಸೌಜನ್ಯ: ಪ್ರಜಾವಾಣಿ


ಸೌಜನ್ಯ: ಪ್ರಜಾವಾಣಿ

 


Share: