ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಒಂದನೆ ತರಗತಿಯ ಪ್ರವೇಶಕ್ಕೆ ಐದು ವರ್ಷ ಕಡ್ಡಾಯ: ಕಾಗೇರಿ

ಬೆಂಗಳೂರು: ಒಂದನೆ ತರಗತಿಯ ಪ್ರವೇಶಕ್ಕೆ ಐದು ವರ್ಷ ಕಡ್ಡಾಯ: ಕಾಗೇರಿ

Fri, 11 Dec 2009 14:01:00  Office Staff   S.O. News Service
ಬೆಂಗಳೂರು, ಡಿ.೧೦: ಒಂದನೆ ತರಗತಿಯ ಪ್ರವೇಶಕ್ಕೆ ಮಕ್ಕಳಿಗೆ ಕಡ್ಡಾಯವಾಗಿ ಐದು ವರ್ಷಗಳು ತುಂಬಿರಬೇಕು ಎಂಬ ನಿರ್ಣಯವನ್ನು ರಾಜ್ಯ ಸರಕಾರ ಕೈಗೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಒಂದನೆ ತರಗತಿ ಪ್ರವೇಶಕ್ಕೆ ಐದು ವರ್ಷ 10 ತಿಂಗಳ ವಯೋಮಿತಿ ನಿಗದಿ ಪಡಿಸಲಾಗಿತ್ತು. ಅದನ್ನು ಐದು ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಮುಂದಿನ ವರ್ಷದ ಮೇ 31ಕ್ಕೆ ಕನಿಷ್ಠ ಐದು ವರ್ಷ ತುಂಬಿರುವ ಮಕ್ಕಳಿಗೆ ಮಾತ್ರ ಒಂದನೆ ತರಗತಿಗೆ ಪ್ರವೇಶ ನೀಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮೇ 31ರ ದಿನಾಂಕಕ್ಕೆ ಒಂದು ತಿಂಗಳು ಕಡಿಮೆಯಿದ್ದರೂ ಪ್ರವೇಶವನ್ನು ನಿರಾಕರಿಸುವಂತೆ ಸೂಚಿಸಲಾಗಿದೆ. ಈ ವಿಷಯವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದು ಕಾಗೇರಿ ಹೇಳಿದರು. 

ವರ್ಷಕ್ಕೆ ಸುಮಾರು 8 ರಿಂದ 10 ಲಕ್ಷ ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಕಳೆದ ವರ್ಷ ೧೭ ಸಾವಿರ ಮಕ್ಕಳು ಐದು ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತಿ ವಿದ್ಯಾರ್ಥಿಯ ಜನ್ಮ ಪ್ರಮಾಣ ಪತ್ರವನ್ನು ಪರಿಶೀಲಿಸಬೇಕು. ಶಾಲೆಯ ಹೆಸರು, ಸ್ಥಳ, ಪೋಷಕರ ಹೆಸರು ವಿಳಾಸ ಮತ್ತಿತರ ಮಾಹಿತಿಗಳನ್ನು ಶಿಕ್ಷಣ ಇಲಾಖೆಯಿಂದ ಸ್ಥಾಪಿಸುವ ವೆಬ್‌ಗೆ ದಾಖಲಿಸಬೇಕು. ಇದಕ್ಕಾಗಿ ಪ್ರತ್ಯೇಕವಾದ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದರು. ದಾಖಲಾದ ಮಾಹಿತಿಯಿಂದ ಬೆಂಗಳೂರಿನಲ್ಲೆ ಮಕ್ಕಳ ವಯೋಮಿತಿಯನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನೀಡಲಾಗುವುದು. ಮುಂದಿನ ಶೈಕ್ಷಣಿಕ ಉದ್ದೇಶದ ಬಳಕೆಗಾಗಿ ಕಂಪ್ಯೂಟರ್‌ಗಳನ್ನು ನೀಡಲು ನಿರ್ಧರಿಸಲಾಗಿದು, ಸರಕಾರಿ ಶಾಲೆಯ ಮಕ್ಕಳು ಮಾತ್ರ ಅರ್ಹರಾಗಿರುತ್ತಾರೆ. ರಾಜ್ಯದಲ್ಲಿರುವ ೩೪ ಶೈಕ್ಷಣಿಕ ಜಿಲ್ಲೆಗಳಿಂದಲೂ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಶಿಕ್ಷಕರ ವರ್ಗಾವಣೆ ಅಧಿನಿಯಮದಿಂದ ಮಾನಯ ನೆಲೆಯಲ್ಲಿ ಸಡಿಲಿಕೆ ನೀಡುವ ಸಲುವಾಗಿ ಸಣ್ಣ ಪ್ರಮಾಣದ ಕೆಲ ತಿದ್ದುಪಡಿಗಳನ್ನು ತರಲು ಸರಕಾರ ಚಿಂತನೆ ನಡೆಸಿದೆ. ಹಾಲಿ ಇರುವ ಅಧಿನಿಯಮ ಮಾದರಿಯಾಗಿದ್ದು, ಎಲ್ಲ ಇಲಾಖೆಗಳು ಅಳವಡಿಸಿಕೊಳ್ಳಲು ಮುಂದಾಗಿವೆ. ಪತಿ-ಪತ್ನಿ ಪ್ರಕರಣ, ಅನಾರೋಗ್ಯ ಹಾಗೂ ಮತ್ತಿತರ ಗಂಭೀರ ಪರಿಸ್ಥಿತಿಯಲ್ಲಿ ವರ್ಗಾವಣೆಗೆ ಅನುಕೂಲ ಕಲ್ಪಿಸಲು ಪೂರಕವಾಗುವಂತೆ ಮೂಲ ಕಾಯ್ದೆಗೆ ಧಕ್ಕೆಯಾಗದಂತೆ ಸಣ್ಣ ಪ್ರಮಾಣದ ತಿದ್ದುಪಡಿಗಳನ್ನು ರಚಿಸಿ, ಮುಂದಿನ ವಿಧಾನಮಂಡಳ ಅಧಿವೇಶನದಲ್ಲಿ ಮಂಡಿಸಲಾಗುವುದು. ಚರ್ಚೆಯ ನಂತರವೇ ತಿದ್ದುಪಡಿಯನ್ನು ಅಂUಕರಿಸುವುದಾಗಿ ಅವರು ಭರವಸೆ ನೀಡಿದರು.

ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಳ್ಳುವಂತೆ ಸಿ-ದರ್ಜೆಯ ಪದವಿ ಪೂರ್ವ ಕಾಲೇಜುಗಳಿಗೆ ಒಂದು ವರ್ಷ ಕಾಲಾವಕಾಶ ನೀಡಿರುವುದನ್ನು ಕಾಗೇರಿ ತಿಳಿಸಿದರು. ಪದವಿ ಪೂರ್ವ ಕಾಲೇಜುಗಳನ್ನು ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯಗಳ ಆಧಾರದಲ್ಲಿ ಎ, ಬಿ, ಸಿ ಎಂದು ವರ್ಗಿಕರಿಸಲಾಗಿದೆ. ಸಿ-ದರ್ಜೆಯ ಕಾಲೇಜುಗಳಲ್ಲಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಕಾಲಾವಕಾಶ ನೀಡಲಾಗುವುದು. ಇದನ್ನು ಮೀರಿದ ಕಾಲೇಜುಗಳ ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಆಗಿನ ಸಂದರ್ಭದಲ್ಲಿ ಚರ್ಚಿಸುವುದಾಗಿ ಅವರು ಹೇಳಿದರು.

ವಿಧಾನ ಪರಿಷತ್‌ನ ಉಪಾಧ್ಯಕ್ಷ ಪುಟ್ಟಣ್ಣ ಸೇರಿದಂತೆ ಶಿಕ್ಷಕರ ಕ್ಷೇತ್ರದ ಸದಸ್ಯರಾದ ಮರಿತಿಬ್ಬೇಗೌಡ ಮತ್ತಿತರ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ ಅವರು, ರಚನಾತ್ಮಕವಾಗಿ ನೀಡುವ ಯಾವುದೇ ಸಲಹೆಗಳನ್ನು ಸ್ವೀಕರಿಸಲು ತಾವು ಮುಕ್ತ ಮನಸ್ಸು ಹೊಂದಿದ್ದೇನೆ. ಆದರೆ, ರಾಜಕೀಯ ಕಾರಣಗಳಿಗಾಗಿ ಆರೋಪ ಮಾಡಬಾರದು. ಆಧಾರ ರಹಿತ ಆರೋಪಗಳಿಂದ ಉಪಾಧ್ಯಕ್ಷ ಸ್ಥಾನದಲ್ಲಿರುವ ಪುಟ್ಟಣನವರ ಘನತೆಗೆ ಧಕ್ಕೆಯಾಗಲಿದೆ. ಶೈಕ್ಷಣಿಕ ಕ್ಷೇತ್ರಗಳ ಸಮಸ್ಯೆಗಳ ಕುರಿತು ಅವರೊಂದಿಗೆ ಚರ್ಚಿಸಲು ತಾವು ಸಿದ್ಧವಿದ್ದೇವೆ ಎಂದು ಅವರು ಹೇಳಿದರು


Share: