ಗ್ರಾ.ಪಂ.ಅಭ್ಯರ್ಥಿಗಳ ಮೇಲೆ ಒತ್ತಡ.ಹಣ ಹೆಂಡದ ಆಮಿಷ, ಕಣದಿಂದ ಹಿಂದಕ್ಕೆ ಸರಿಸುವ ಕಸರತ್ತು
ಭಟ್ಕಳ: ಗ್ರಾಮ ಪಂಚಾಯತಿಗಳಿಗೆ ನಡೆಯು ಚುನಾವಣೆಗೆ ನಾಮಪತ್ರ ಸಲ್ಲಿಸುವ ಭರಾಟೆ ಇನ್ನೇನು ಮುಗಿದಿದೆ. ಆದರೆ ನಾಮಪತ್ರಹಿಂತೆಗೆದುಕೊಳ್ಳಲು ಕೇವಲ ಒಂದೇ ದಿನ ಬಾಕಿ ಇದ್ದು ಅಭ್ಯರ್ಥಿಗಳ ಮೇಲೆ ಭಾರೀ ಒತ್ತಡ, ಆಮಿಷಗಳು ಒಡ್ಡಿ ಕಣದಿಂದ ಹಿಂದಕ್ಕೆ ಸರಿಸುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರತೊಡಗಿವೆ.
ತಾಲೂಕಿನಲ್ಲಿ ಈ ಸಲ ೩೦೧ ಸ್ಥಾನಕ್ಕೆ ಒಟ್ಟೂ ೯೨೭ ಮಂದಿ ಅಭ್ಯರ್ಥಿಗಳು ನಾಮಪತ್ಕರ ಸಲ್ಲಿಸಿದ್ದು ಅದರಲ್ಲಿ ಎಷ್ಟು ಜನ ತಮ್ಮ ನಾಮಪತ್ರವನ್ನು ಹಿಂಪಡೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯು ಉಂಟಾಗುತ್ತಿದೆ. ನಾಮಪತ್ರ ಸಲ್ಲಿಕೆಯ ಅಂಕಿಅಂಶಗಳನ್ನು ಗಮನಿಸಿದರೆ ತಾಲೂಕಿನ ಎಲ್ಲಾ ಹದಿನಾರು ಪಂಚಾಯತ್‌ಗಳಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಂತೆ ಕಂಡು ಬಂದಿದೆ. ವಿಶೇಷವೆಂದರೆ ಒಂದು ಸ್ಥಾನಕ್ಕೆ ಮೂರು, ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರತಿ ಗ್ರಾಪಂನಲ್ಲೂ ಬಿ ಜೆ ಪಿ, ಕಾಂಗ್ರೆಸ್ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ನಿಂತಂತಹ ಅಭ್ಯರ್ಥಿಗಳಿಗೆ ಈ ಸಲ ಬಂಡಾಯ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳು ಸ್ಪರ್ಧಿಸಿ ಸಂಕಷ್ಟ ತರುವಂತೆ ಮಾಡಿದ್ದಾರೆ. ಕೆಲವೆಡೆ ಹಣದ ಹಾಗೂ ಕಾಮಗಾರಿಯ ಆಮಿಷ ನೀಡಿ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಸರಿಸಲು ಪ್ರಯತ್ನ ನಡೆಸಿದ್ದರೆ, ಇನ್ನೂ ಕೆಲವು ಕಡೆ ಜಾತೀ ಮುಖಂಡರ ಒತ್ತಡದಿಂದಲೂ ಸಹ ಹಿಂದಕ್ಕೆ ಸರಿಸಲು ತಂತ್ರ ರೂಪಿಸಲಾಗಿದೆ. ಈ ಸಲದ ಗ್ರಾಮ ಪಂಚಾಯತ್ ಚುನಾವಣೆ ಇಷ್ಟು ವರ್ಷದಂತಿಲ್ಲ. ಈ ಸಲ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಕಣಕ್ಕಿಳಿದಿರುವುದು ವಿಶೇಷವಾಗಿದೆ. ಸರಕಾರ ಗ್ರಾಪಂಗಳಿಗೆ ಅನುದಾನ ಹೆಚ್ಚಿಗೆ ಮಾಡಿರುವುದರಿಂದ ಹಾಗೂ ನೇರವಾಗಿ ಪಂಚಾಯತ್‌ಗೆ ಹಣ ಹಾಗೂ ವಿವಿಧ ಯೋಜನೆಗಳು ಜಾರಿಗೆ ತಂದಿದ್ದರಿಂದ ಚುನಾವಣೆಗೆ ಸ್ಪರ್ಧಿಸಲು ಜನರು ಆಸಕ್ತರಾಗಿದ್ದಾರೆ. ಸ್ಥಳೀಯ ಮಟ್ಟದ ರಾಜಕೀಯವೆಂದರೆ ಎಲ್ಲರಿಗೂ ಕುತೂಹಲವಿದ್ದೇ ಇರುತ್ತದೆ. ಗ್ರಾಮ ಪಂಚಾಯತಿ ಚುನಾವಣೆಗೆ ಅಭ್ಯರ್ಥಿಗಳು ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗದೇ ಇದ್ದರೂ ಸಹ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲಾ ತಂತ್ರಗಳೂ ರಾಜಕೀಯ ಪಕ್ಷಗಳ ಉಸ್ತುವಾರಿಯಲ್ಲೇ ನಡೆಯುತ್ತದೆ ಎಂಬುದಂತೂ ಸತ್ಯ. ರಾಜಕೀಯದ ಜಿದ್ದಾಜಿದ್ದಿ ಹಾಗೂ ವಿಶಿಷ್ಟ ಕ್ಷೇತ್ರವೆಂದೇ ಕರೆಯಲಾಗುವ ಭಟ್ಕಳದಲ್ಲಿ ಗ್ರಾಪಂ ಚುನಾವಣೆ ಪ್ರಮುಖ ಪಕ್ಷಗಳಾದ ಬಿ ಜೆ ಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಂಚಾಯತ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಈ ಎರಡೂ ಪಕ್ಷಗಳು ತರಾತುರಿಯಲ್ಲಿದೆ. ಇದಕ್ಕೆ ಕೆಲವಡೆ ಆಯಾ ಪಕ್ಷದ ಬಂಡಾಯಗಾರರು, ಮುಖಂಡರೇ ಮುಳ್ಳಾಗಿರುವುದು ವಿಪರ್ಯಾಸ.