ಭಟ್ಕಳ, ನವೆಂಬರ್ 2: ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಖಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರ ಮೇಲಿನ ಬೆದರಿಕೆಯ ವರದಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ನಿನ್ನೆ ಕಾಲೇಜಿಗೆ ಭೇಟಿ ನೀಡಿದ್ದಾರೆ.
ನಿನ್ನೆ ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿದ ಎಸ್ಸೈ ಮಂಜುನಾಥ ಗೌಡ ಪ್ರಾಂಶುಪಾಲರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ.
ಕಾಲೇಜಿನ ಆವರಣದಲ್ಲಿ ಸಾದಾ ವಸ್ತ್ರಗಳನ್ನು ಧರಿಸಿರುವ ಪೋಲೀಸರು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಯಾವುದೇ ಅಹಿತಕರ ಘಟನೆ ಕಂಡುಬಂದಲ್ಲಿ ಪೋಲೀಸರಿಗೆ ತಿಳಿಸುವಂತೆ ನಿರ್ದೇಶಿಸಲಾಗಿದೆ.
ಆದರೆ ಬುರ್ಖಾ ವಿವಾದ ಇನ್ನೂ ಪ್ರಾಂಶುಪಾಲರ ತನಕವೇ ಇದ್ದು ಪೋಲೀಸರವರೆಗೆ ಮುಟ್ಟಿರದಿದ್ದರೂ ಪೋಲೀಸರು ಮುಂಜಾಗರೂಕತಾ ಕ್ರಮ ಕೈಗೊಂಡಿರುವುದು ಸಕಾಲಿಕವಾಗಿದೆ. ನಗರದಲ್ಲಿ ಚಿಕ್ಕಪುಟ್ಟ ಘಟನೆಗಳೂ ಇತ್ತೀಚೆಗೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದು ಕಾಳಜಿಗೆ ಕಾರಣವಾಗ್ದಿಎ.
ಈ ಮೊದಲು ಬುರ್ಖಾ ಧರಿಸಿ ಆಗಮಿಸುವ ವಿದ್ಯಾರ್ಥಿನಿಯರು ತಮಗೊಡ್ಡಿರುವ ಬೆದರಿಕೆಯನ್ನು ಲಿಖಿತ ದೂರಿನ ಮೂಲಕ ಪ್ರಾಂಶುಪಾಲರಿಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಇಂದು ಸಭೆಯ ಮೂಲಕ ತೀರ್ಮಾನ ತೆಗೆದುಕೊಳ್ಳುವುದಾಗಿ ಪ್ರಾಂಶುಪಾಲರಾದ ಡಾ. ಐ.ಆರ್. ಖಾನ್ ತಿಳಿಸಿದ್ದಾರೆ.
ಬೆದರಿಕೆಯ ಭೀತಿಯಿಂದ ಕಳೆದ ಕೆಲವು ದಿನಗಳಿಂದ ಗೈರು ಹಾಜರಾಗಿರುವ ವಿದ್ಯಾರ್ಥಿನಿಯರು ನಿನ್ನೆಯೂ ಕಾಲೇಜಿಗೆ ಆಗಮಿಸಲಿಲ್ಲ. ಇಂದಿನ ಸಭೆಯ ಬಳಿಕ ಕಾಲೇಜು ಸಮಿತಿ ಯಾವ ತೀರ್ಮಾನ ಕೈಗೊಳ್ಳುವುದು ಎಂದು ಕಾದು ನೋಡಬೇಕಾಗಿದೆ.