ಬೆಂಗಳೂರು,ಫೆಬ್ರವರಿ೨:ಬೇಸಿಗೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅನುಕೂಲವಾಗುವ ಸಲುವಾಗಿ ೨೮೦ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಯೂನಿಟ್ಗೆ ೪.೫೦ ರೂ ದರದಂತೆ ವಿದ್ಯುತ್ ಖರೀದಿಸಲು ಅಲ್ಪಾವಧಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ೨೦೦ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ಟೆಂಡರ್ಗಳನ್ನು ಸದ್ಯದಲ್ಲೇ ಪೂರ್ಣಗೊಳಿಸಲಾಗುವುದು.
ಇದರ ಜೊತೆಗೆ ಮುಂಬರುವ ೨ ರಿಂದ ೩ ವರ್ಷಗಳ ಅವಧಿಗೆ ಮಧ್ಯಮಾವಧಿ ವಿದ್ಯುತ್ ಖರೀದಿಗೆ ಇನ್ನೊಂದು ವಾರದಲ್ಲಿ ಪೂರ್ಣಪ್ರಮಾಣದ ವಿದ್ಯುತ್ ಬಿಕರಿ ಮಾಡುವ ಸಲುವಾಗಿ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು, ಟೆಂಡರ್ ಪ್ರಕ್ರಿಯೆಗಳನ್ನು ಹೊರಡಿಸಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರಗಳ ವೈಫಲ್ಯಗಳಿಂದ ರಾಜ್ಯದಲ್ಲಿ ಪ್ರಸ್ತುತ ೨೦೦೦ ಮೆಗಾವ್ಯಾಟ್ನಷ್ಟು ವಿದ್ಯುತ್ ಕೊರತೆ ಅನುಭವಿಸಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ೧೯ ತಿಂಗಳ ಅವಧಿಯಲ್ಲಿ ೧೨೫೨ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಾಗಿದೆ.
ಹಿಂದಿನ ಧರ್ಮಸಿಂಗ್ ಅವಧಿಯಲ್ಲಿ ೯೬೧ ಮೆಗಾವ್ಯಾಟ್, ಎಚ್.ಡಿ.ಕುಮಾರ ಸ್ವಾಮಿ ಅವಧಿಯಲ್ಲಿ ೩೭೩ ಮೆಗಾವ್ಯಾಟ್ನಷ್ಟು ಮಾತ್ರ ಸಾಮರ್ಥ್ಯ ಹೆಚ್ಚಿಸಲಾಗಿತ್ತು. ಒಟ್ಟಾರೆ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ೫ ರಿಂದ ೭ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ನುಡಿದರು.
ಬಿಜಾಪುರದ ಕೂಡಗಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್, ಬಿಎದ್ಇಎಲ್ ಹಾಗೂ ಕೆಪಿಸಿಎಲ್ನಿಂದ ಎಮರಸ್ನಲ್ಲಿ ತಲಾ ೮೦೦ ಮೆಗಾವ್ಯಾಟ್ನ ಎರಡು ಉಷ್ಣವಿದ್ಯುತ್ ಸ್ಧಾವರಗಳ ಸ್ಧಾಪನೆ, ಇದೇ ರೀತಿ ಎಡ್ಲಾಪುರದಲ್ಲಿ ೮೦೦ ಮೆಗಾವ್ಯಾಟ್, ಬಳ್ಳಾರಿಯ ಥರ್ಮಲ್ ವಿದ್ಯುತ್ ಘಟಕದ ಎರಡನೇ ಹಂತದಲ್ಲಿ ೫೦೦, ಮೂರನೇ ಘಟಕದಲ್ಲಿ ೬೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.