ಭಟ್ಕಳ, ಏಪ್ರಿಲ್ ೧೫: ತಾಲೂಕಿನ ಮುಂಡಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಹೊಸಮನೆ ಭಾಗದ ಹುಲ್ಲಿನ ಹೊದಿಕೆಯ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಸೋಮವಾರ ರಾತ್ರಿ ೧೦.೪೫ರ ಸುಮಾರಿಗೆ ಸಂಭವಿಸಿದೆ.
ಮನೆಯು ಜಗದೀಶ ಸೋಮಯ್ಯ ಎಂಬುವವರಿಗೆ ಸೇರಿದ್ದಾಗಿದ್ದು, ೪೬,೦೦೦ನಗದು, ಎರಡು ಕ್ವಿಂಟಾಲ್ ಅಕ್ಕಿ ಹಾಗೂ ಭತ್ತದ ಬೀಜ, ಬಟ್ಟೆ ಬರೆಗಳೆಲ್ಲ ಸುಟ್ಟು ಕರಕಲಾಗಿವೆ. ಹಾನಿಯ ಮೌಲ್ಯ ೧.೫೦ ಲಕ್ಷ ರೂಪಾಯಿ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿ ಶ್ಯಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಿರುವ ಬಗ್ಗೆ ತಿಳಿದು ಬಂದಿದೆ. ಬೆಂಕಿಗೆ ಕಾರಣಗಳಿನ್ನೂ ತಿಳಿದು ಬಂದಿಲ್ಲ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ತಂಜೀಮ್‌ನಿಂದ ಸಹಾಯ: ಘಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ತಂಜೀಮ್ ಮುಖಂಡರು ಘಟನೆಗೆ ತೀವೃ ವಿಷಾದ ವ್ಯಕ್ತಪಡಿಸಿದರು. ತಂಜೀಮ್ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಂಜೀಮ್ ಅಧ್ಯಕ್ಷ ಬದ್ರುಲ್ಲಾ ಹಸನ್ ಮೌಲೀಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಖಾಲೀದ್, ಕಾರ್ಯದರ್ಶಿ ಅಬ್ದುಲ್ ರಕೀಬ್ ಎಮ್.ಜೆ., ಇನಾಯಿತುಲ್ಲಾ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.