ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ: ಲಿಬರ್ಹಾನ್ ವರದಿ ಈಗ ಅಕ್ಷರಶಃ ಸಮಾಧಿ - ಅಡ್ವಾಣಿ, ವಾಜಪೇಯಿ, ಜೋಷಿ ಸಹಿತ 68 ದೋಷಿಗಳೂ

ನವದೆಹಲಿ: ಲಿಬರ್ಹಾನ್ ವರದಿ ಈಗ ಅಕ್ಷರಶಃ ಸಮಾಧಿ - ಅಡ್ವಾಣಿ, ವಾಜಪೇಯಿ, ಜೋಷಿ ಸಹಿತ 68 ದೋಷಿಗಳೂ

Wed, 25 Nov 2009 03:24:00  Office Staff   S.O. News Service
ನವದೆಹಲಿ:ಭಾರಿ ನಿರೀಕ್ಷೆ, ಕುತೂಹಲ ಮೂಡಿಸಿದ್ದ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಲಿಬರ್ಹಾನ್ ಆಯೋಗದ ವರದಿ ಈಗ ಅಕ್ಷರಶಃ ಸಮಾಧಿ ಸೇರಿದಂತೆಯೇ ಸರಿ! 
೧೭ ವರ್ಷಗಳ ಕಾಲ ೮ ಕೋಟಿ ರು. ವೆಚ್ಚದಲ್ಲಿ ವಿಚಾರಣೆ ನಡೆಸಿದ ಈ ‘ದುಬಾರಿ ಆಯೋಗ’ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿದಂತೆ ೬೮ ಮಂದಿಯನ್ನು ದೋಷಿಗಳು ಎಂದು ಗುರುತಿಸಿದ್ದರೂ, ಕೇಂದ್ರ ಸರ್ಕಾರ ತನ್ನ ಕ್ರಮಾನುಷ್ಠಾನ ವರದಿ(ಎಟಿ‌ಆರ್) ಈ ದೋಷಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಘೋಷಣೆಯನ್ನೇ ಮಾಡಿಲ್ಲ. ಇದರಿಂದಾಗಿ ಬಾಬ್ರಿ ಮಸೀದಿ ಧ್ವಂಸಕ್ಕೆ ಯಾರು ಹೊಣೆ ಎಂಬ ೧೭ ವರ್ಷಗಳ ಪ್ರಶ್ನೆಗೆ ಕೊನೆಗೂ ಉತ್ತರವೇ ಸಿಕ್ಕಿಲ್ಲ. 

ಕೊನೆಗೂ ಮಂಡನೆ: ಸಂಸತ್‌ನಲ್ಲಿ ಮಂಡನೆಯಾಗುವುದಕ್ಕೆ ಮುನ್ನ ಮಾಧ್ಯಮಗಳಿಗೆ ವರದಿ ಸೋರಿಕೆಯಾದ್ದರಿಂದ ಸೋಮವಾರ ಸಂಸತ್‌ನಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸೂಚನೆ ಮೇರೆಗೆ ಮಂಗಳವಾರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ತುರ್ತು ಸಂಪುಟ ಸಭೆ ನಡೆಯಿತು. ಈ ಸಂದರ್ಭದಲ್ಲಿ ಎಲ್ಲ ವಿವಾದಗಳ ಹೊರತಾಗಿಯೂ ಸಂಸತ್‌ನ ಉಭಯ ಸದನಗಳಲ್ಲಿ ಆಯೋಗದ ವರದಿ ಹಾಗೂ ಕ್ರಮಾನುಷ್ಠಾನ ವರದಿ ಮಂಡಿಸುವ ಬಗ್ಗೆ ತೀರ್ಮಾನಿಸಲಾಯಿತು. 

೬೮ ಮಂದಿ ದೋಷಿಗಳು: ಸಂಸತ್‌ನಲ್ಲಿ ಮಂಡನೆಯಾಗಿರುವ ಆಯೋಗದ ವರದಿಯಲ್ಲಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಕಲ್ಯಾಣ್ ಸಿಂಗ್, ಬಾಳಾ ಠಾಕ್ರೆ, ಪ್ರಮೋದ್ ಮಹಾ ಜನ್, ಹೊ.ವೆ.ಶೇಷಾದ್ರಿ, ಬಿ.ಪಿ. ಸಿಂಘಲ್, ಪ್ರವೀಣ್ ತೊಗಾಡಿಯಾ ಸೇರಿ ೬೮ ಮುಖಂಡರನ್ನು ದೋಷಿಗಳೆಂದು ಆಯೋಗದ ವರದಿಯಲ್ಲಿ ಹೆಸರಿಸಲಾಗಿದೆ. 
ಗಮನಾರ್ಹ ಸಂಗತಿಯೆಂದರೆ, ದೋಷಿಯೆಂದು ಗುರುತಿಸಲಾಗಿರುವ ವಾಜಪೇಯಿ ಅವರನ್ನು ಆಯೋಗ ಒಂದು ಬಾರಿಯೂ ವಿಚಾರಣೆಗೊಳಪಡಿಸಿರಲಿಲ್ಲ! ಘಟನೆಯ ದಿನದಂದು ಕರಸೇವಕರಿಗೆ ಮಂದಿರದ ಗರ್ಭಗುಡಿ ಸ್ಥಳಕ್ಕೆ ತೆರಳಬೇಡಿ. ಅಥವಾ ಯಾವುದೇ ಹಾನಿ ಮಾಡಬಾರದೆಂದು ಅಲ್ಲಿದ್ದ ಸಂಘ-ಪರಿವಾರದ ಮುಖಂಡರು ವಿನಂತಿಸಿಕೊಳ್ಳಲಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ. 

೨೦೦ ಮೀಟರ್ ದೂರದಲ್ಲಿ:ಮಾತ್ರವಲ್ಲದೆ, ಮುಖಂಡರು ಮಂದಿರದಿಂದ ಕೇವಲ ೨೦೦ ಮೀಟರ್ ದೂರದಲ್ಲಿದ್ದರೆಂದು ವರದಿ ಹೇಳಿದೆ. ಡಿ.೬ರಂದು ಬೆಳಗ್ಗೆ ೯.೩೦ಕ್ಕೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಅಂದಿನ ಕೇಂದ್ರ ಗೃಹ ಕಾರ್ಯದರ್ಶಿ ಇಂಡೋ-ಟಿಬೆಟಿಯನ್ ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅಗತ್ಯ ಬಿದ್ದರೆ, ಗೃಹ ಖಾತೆಯ ಆದೇಶಕ್ಕೆ ಕಾಯದೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ೧೧.೪೫ಕ್ಕೆ ಪೈಜಾಬಾದ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ಕಲ್ಯಾಣ್ ಸಿಂಗ್ ವಿರುದ್ಧ ಟೀಕೆ:೧೯೯೨ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ವಿರುದ್ಧವೂ ಆಯೋಗ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ ಆಯೋಗ ಡಿ.೬ರ ಘಟನೆಗೆ ವ್ಯಕ್ತಿಗಳು ಹಾಗೂ ಸಂಘಟನೆಗಳೇ ಕಾರಣ ಎಂಬ ತೀರ್ಮಾನಕ್ಕೆ ಬಂದಿದೆ: 
ಮೊದಲ ಗುಂಪಿನಲ್ಲಿ ಮತ್ತು ಅಯೋಧ್ಯೆ ಚಳವಳಿಗೆ ಕಾರಣರಾದವರು ತಪ್ಪು ಮಾಹಿತಿ ನೀಡಿ ಘಟನೆಗೆ ಕಾರಣರಾದರು. 
  ೨ನೇ ಗುಂಪಿನಲ್ಲಿ ಕಪಟ ಸುಧಾರಣಾವಾದಿಗಳು 

 ಮೂರನೇ ಗುಂಪಿನಲ್ಲಿ ಸಂಘ-ಪರಿವಾರದ ಅಂಗ ಸಂಸ್ಥೆಗಳಾದ ಬಜರಂಗ ದಳ, ಶಿವಸೇನೆ ಘಟನೆಯ ಹೊಣೆ ಹೊರಬೇಕಾಗಿದೆ. ಬಿಜೆಪಿ ಮುಖಂಡರಾಗಿರುವ ಎಲ್.ಕೆ.ಆಡ್ವಾಣಿ, ವಾಜಪೇಯಿ ಮತ್ತು ಮುರಳೀ ಮನೋಹರ ಜೋಷಿ ಅವರಿಗೆ ಸಂಘ ಪರಿವಾರ ಕೈಗೊಂಡಿದ್ದ ಯೋಜನೆ ತಿಳಿದಿರಲಾರದು ಎಂದು ಹೇಳಿದ್ದರೆ ಅದು ಒಪ್ಪಲರ್ಹವಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ. 

  ರಾಜಕೀಯ-ಧರ್ಮ ಬೆರಕೆ ಬೇಡ: ವರದಿಯಲ್ಲಿ ಧರ್ಮ ಮತ್ತು ರಾಜಕೀಯವನ್ನು ಬೆರೆಸಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಪ್ರತ್ಯೇಕ ಕಾನೂನು ರಚಿಸುವಂತೆ ಶಿಫಾರಸು ಮಾಡಲಾಗಿದೆ. ರಾಜಕೀಯ ಅಧಿಕಾರ ದುರುಪಯೋಗಪಡಿಸಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ. 

ಹಲವು ಶಿಫಾರಸುಗಳು: ಅಯೋಧ್ಯೆ ಗಲಭೆ ವಿಚಾರವಲ್ಲದೆ, ಆಡಳಿತ ಕ್ಷೇತ್ರಗಳಲ್ಲೂ ಹೆಚ್ಚು ಸುಧಾರಣೆ ಅಗತ್ಯವಿದೆ ಎಂದು ಆಯೋಗ ಹೇಳಿದೆ. ಅಪರಾಧ ನ್ಯಾಯಿಕ ಸಮಿತಿ ರಚನೆ ಮಾಡಿ, ಅದರ ಮೂಲಕ ಒಟ್ಟಾರೆ ಕಾನೂನು ಸುವ್ಯವಸ್ಥೆ ಜಾರಿ ಮಾಡುವ ಸಮಿತಿಗಳ ಮೇಲುಸ್ತುವಾರಿ ನಡೆಸುವಂತೆ ಶಿಫಾರಸು ಮಾಡಿದೆ. ಪೊಲೀಸ್ ಮತ್ತು ನಾಗರಿಕ ಸೇವೆ ನೇಮಕದಲ್ಲಿ ಭಾರಿ ಸುಧಾರಣೆ ತರಬೇಕು. ನಿವೃತ್ತಿಯ ಬಳಿಕ ಪೊಲೀಸ್ ಅಧಿಕಾರಿಗಳು ರಾಜಕೀಯ ಅಥವಾ ಧಾರ್ಮಿಕ ಹುದ್ದೆ ವಹಿಸದಂತೆ ನೋಡಿಕೊಳ್ಳಬೇಕು. ಬಾಬ್ರಿ ಮಸೀದಿಯಂತಹ ಐತಿಹಾಸಿಕ ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳಿಗೆ ಕಾಯಂ ಪರಿಹಾರ ನೀಡಲು ಆಯೋಗವೊಂದರ ರಚನೆ ಮಾಡಬೇಕೆಂದಿದೆ. 

  ಡಿ.೧ರಂದು ಚರ್ಚೆ: ಸಂಸತ್‌ನಲ್ಲಿ ಮಂಡನೆಯಾಗಿರುವ ವರದಿ ಬಗ್ಗೆ ಉಭಯ ಸದನಗಳಲ್ಲಿ ಡಿ.೧ರಿಂದ ಚರ್ಚೆ ನಡೆಯಲಿದೆ. 

ಕಪಟ-ಸುಧಾರಣಾವಾದಿಗಳು 
ವಾಜಪೇಯಿ, ಆಡ್ವಾಣಿ ಮತ್ತು ಎಂ.ಎಂ.ಜೋಷಿ 
      ಇವರಿಗೆ ಆರ್‌ಎಸ್‌ಎಸ್‌ನ ಎಚ್ಚರಿಕೆಯನ್ನು ಉಲ್ಲಂಘಿಸುವ ಕೆಚ್ಚು ಇರಲಿಲ್ಲ. 
      ಯಾವುದೇ ಅನಾಹುತವಾಗಲಾರದೆಂದು ಮುಖಂಡರು ಕೋರ್ಟ್‌ಗೆ, ಸರ್ಕಾರಕ್ಕೆ ಮತ್ತು ಜನತೆಗೆ ತಪ್ಪು ಮಾಹಿತಿ ನೀಡಿದ್ದರು. 
      ಆದರೆ, ಈ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ನಿರ್ಧಾರ ಕೈಗೊಳ್ಳುವ ವ್ಯಾಪ್ತಿ ಇಲ್ಲದ್ದರಿಂದ ನಿಷೇಧಿಸುವ ಹೊಣೆ ಅವರಿಗಿರಲಿಲ್ಲ. 

ಮೂಲಭೂತವಾದಿಗಳು 
ಕೆ.ಎಸ್. ಸುದರ್ಶನ್, ಉಮಾಭಾರತಿ ಮತ್ತು ಕಲ್ಯಾಣ್ ಸಿಂಗ್ 
      ಈ ಮುಖಂಡರಿಗೆ ೧೯೯೨ರ ಡಿ.೬ ರ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಇವರೇ ಪೂರ್ತಿ ಯೋಜನೆಯನ್ನು ರೂಪಿಸಿದ್ದರು. 
      ಬಾಬ್ರಿ ಮಸೀದಿ ಧ್ವಂಸಕ್ಕೆ ಈ ನಾಯಕರೇ ಹೊಣೆಗಾರರು. ದೇಶವನ್ನು ಕೋಮು ದಳ್ಳುರಿಯತ್ತ ಕೊಂಡೊಯ್ದವರು ಇವರೇ. 
      ಇವರಿಗೆ ಅಂದಿನ ದುರ್ಘಟನೆಯನ್ನು ತಡೆಯುವ ಎಲ್ಲಾ ಅವಕಾಶಗಳಿದ್ದವು. 

ಕ್ರಮಾನುಷ್ಠಾನ ವರದಿ ಸತ್ವಹೀನ 
      ಯಾರ ವಿರುದ್ಧವೂ ಕಠಿಣ ಕ್ರಮಕ್ಕೆ ಶಿಫಾರಸು ಇಲ್ಲ. 
      ಆಯೋಗದ ಶಿಫಾರಸುಗಳಿಗೆ ಒಪ್ಪಿಗೆ. 
      ಕೋಮು ಗಲಭೆಯಿಂದ ಸಂತ್ರಸ್ತರಾದವರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಮತ್ತು ಪುನರ್ವಸತಿ. 
      ಕೋಮುಗಲಭೆ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್‌ಗಳ ಸ್ಥಾಪನೆ. 
      ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಕೇಸುಗಳು ಮತ್ತು ರಾಯ್‌ಬರೇಲಿ ಕೋರ್ಟ್‌ನಲ್ಲಿ ೪೭ ಮೊಕದ್ದಮೆ ದಾಖಲು. ಕರಸೇವಕರ ವಿರುದ್ಧವೂ ಪ್ರಕರಣ ದಾಖಲು. 
      ಯಾವುದೇ ಸರ್ಕಾರ ತನ್ನ ರಾಜಕೀಯ ಕಾರ್ಯಸೂಚಿಯಲ್ಲಿ ಧಾರ್ಮಿಕ ವಿಚಾರಗಳನ್ನು ಹೊಂದಿದ್ದರೆ ಅಂತಹ ಸರ್ಕಾರವನ್ನು ನಿಷೇಧಿಸಬೇಕು. 
      ಐತಿಹಾಸಿಕ ಕಟ್ಟಡಗಳ ವಿವಾದಗಳ ಇತ್ಯರ್ಥಕ್ಕೆ ಹೊಸದಾದ ಶಾಸನಾತ್ಮಕ ರಾಷ್ಟ್ರೀಯ ಆಯೋಗ ರಚನೆಯ ಬದಲು ಈಗಿರುವ ರಾಷ್ಟ್ರೀಯ ಪುರಾತತ್ವ ಇಲಾಖೆಯನ್ನೇ ಇನ್ನಷ್ಟು ಬಲಪಡಿಸಿ ಇದಕ್ಕೆ ಬಳಸಿಕೊಳ್ಳಲು ಚಿಂತನೆ 

ಲಿಬರ್ಹಾನ್ ಆಯೋಗ ಮಾಡಿದ ಶಿಫಾರಸುಗಳು 
      ಮಾಧ್ಯಮ ಸಂಸ್ಥೆ, ಟಿ.ವಿ.ಚಾನೆಲ್‌ಗಳ ಮೇಲಿನ ದೂರುಗಳ ವಿರುದ್ಧ ಕ್ರಮಕ್ಕೆ ಭಾರತೀಯ ವೈದ್ಯಕೀಯ ಮಂಡಳಿ ಅಥವಾ ಬಾರ್ ಕೌನ್ಸಿಲ್ ಮಾದರಿ ಸಂಸ್ಥೆ ಅಗತ್ಯ. 
      ಧರ್ಮ, ಜಾತಿಯನ್ನು ರಾಜಕೀಯ ಲಾಭಕ್ಕಾಗಿ ಉಪಯೋಗಿಸುವವರ ವಿರುದ್ಧ ಕಠಿಣ ಕ್ರಮ. 
      ರಾಜಕೀಯ ಪಕ್ಷಗಳು, ಪೊಲೀಸ್ ಮತ್ತು ಇತರ ಇಲಾಖೆ ಹಿರಿಯ ಅಧಿಕಾರಿಗಳ ನಡುವಿನ ಅಕ್ರಮ ಸಂಬಂಧಕ್ಕೆ ತಡೆ 
      ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ವಿವಾದ ಇತ್ಯರ್ಥಕ್ಕೆ ರಾಜಕೀಯ ವ್ಯಕ್ತಿಗಳ ಬದಲು ವಿಷಯ ತಜ್ಞರಿಗೆ ಆಹ್ವಾನ 
      ಕಾನೂನು ಸುಗಮವಾಗಿ ಜಾರಿಯಾಗಲು ದೇಶದ ೪ ಸ್ಥಳಗಳಲ್ಲಿ ಪ್ರಾದೇಶಿಕ ಟ್ರಿಬ್ಯುನಲ್ ರಚನೆ 
      ಪೊಲೀಸ್ ಮತ್ತು ಇತರ ಇಲಾಖೆ ನೇಮಕದಲ್ಲಿ ಸುಧಾರಣೆ, ಕೋಮು ಗಲಭೆ ಸಂಬಂಧ ವಿಶೇಷ ತನಿಖಾ ದಳದ ಅಗತ್ಯ. 



ನಾವು ಆಯೋಗದ ಶಿಫಾರಸು ತಿರಸ್ಕರಿಸಿಲ್ಲ. ಕೇಂದ್ರ ಸರ್ಕಾರ ಅವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಶಿಫಾರಸು ಮಾಡಿದ್ದಕ್ಕಿಂತ ಒಂದು ಹೆಜ್ಜೆ ಹೆಚ್ಚಿನ ಕ್ರಮ ಕೈಗೊಂಡು ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳುತ್ತೇವೆ. 
ಎಂ.ವೀರಪ್ಪ ಮೊಯ್ಲಿ, ಕೇಂದ್ರ ಸಚಿವ 

ಲಿಬರ್ಹಾನ್ ಆಯೋಗ ಸಿದ್ಧವಡಿಸಿದ ವರದಿಯಲ್ಲಿರುವುದು ಅಡ್ಡ ಮಾರ್ಗದಿಂದ ಕಂಡುಕೊಂಡ ವಿಚಾರಗಳಾಗಿದ್ದು, ಬಾಬ್ರಿ ಮಸೀದಿ ಧ್ವಂಸದ ಕುರಿತು ಆಯೋಗಕ್ಕೆ ಸಲ್ಲಿಸಲಾಗಿರುವ ಸಾಕ್ಷ್ಯಗಳಿಗೆ ವಿರುದ್ಧವಾಗಿದೆ. 
ಸುಷ್ಮಾ ಸ್ವರಾಜ್, ಬಿಜೆಪಿ ನಾಯಕಿ

ಸೌಜನ್ಯ: ಕನ್ನಡಪ್ರಭ 


Share: