ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಬೆಂಗಳೂರು ಮನಪಾ ಚುನಾವಣೆ - ಬಿಜೆಪಿ ಸಜ್ಜು - ಯಡಿಯೂರಪ್ಪ

ಬೆಂಗಳೂರು:ಬೆಂಗಳೂರು ಮನಪಾ ಚುನಾವಣೆ - ಬಿಜೆಪಿ ಸಜ್ಜು - ಯಡಿಯೂರಪ್ಪ

Sun, 10 Jan 2010 02:53:00  Office Staff   S.O. News Service
ಬೆಂಗಳೂರು, ಜನವರಿ 9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ರಣರಂಗಕ್ಕೆ ಇಳಿಯಲು ಬಿಜೆಪಿ ಸಂಪೂರ್ಣ ಸಜ್ಜಾಗಿದ್ದು, ಬೆಂಗಳೂರು ಮಹಾನಗರದ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. 

ಬಿಬಿ‌ಎಂಪಿ ವ್ಯಾಪ್ತಿಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಅವರು, ಹಲವು ಮಹತ್ತರ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು, ಚುನಾವಣೆಗೆ ಪಕ್ಷ ಸಜ್ಜಾಗಿದೆ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ. 

ಬಿಬಿ‌ಎಂಪಿ ವ್ಯಾಪ್ತಿಯಲ್ಲಿನ ಕೊಳೆಗೇರಿ ನಿವಾಸಿಗಳು ಹಾಗೂ ಬಡವರಿಗೆ ಆರೋಗ್ಯ ವಿಮಾ ಯೋಜನೆ, ಕಂದಾಯ ಇಲಾಖೆ ಜಮೀನು ಹೋಂದಿರುವ ಕೊಳೆಗೇರಿಗಳ ಸಕ್ರಮ, ಖಾಲಿಯಿರುವ ಪೌರ ಕಾರ್ಮಿಕರ ಹುದ್ದೆ ಭರ್ತಿ, ಅಕ್ರಮ-ಸಕ್ರಮ ಯೋಜನೆಗೆ ಸುಗ್ರೀವಾಜ್ಞೆ ಸೇರಿದಂತೆ ಹತ್ತು-ಹಲವು ಹೊಸ ಕಾರ್ಯಕ್ರಮವನ್ನು ಯಡಿಯೂರಪ್ಪ ಇಂದು ಪ್ರಕಟಿಸಿದರು. 

ಸುವರ್ಣ ಆರೋಗ್ಯ ಕವಚ ಮಾದರಿಯಲ್ಲಿ ಬೆಂಗಳೂರು ನಗರದ ಕೊಳಗೇರಿ ನಿವಾಸಿಗಳು ಆಟೋ ಚಾಲಕರು, ಪರಿಶಿಷ್ಟ ಜಾತಿ, ವರ್ಗದವರು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು, ಅಸಂಘಟಿತ ವಲಯದ ಕಾರ್ಮಿಕರೂ ಸೇರಿದಂತೆ ನಗರದ ಕಡು ಬಡವರಿಗೆ ಆರೋಗ್ಯ ಭದ್ರತೆ ಒದಗಿಸಲು ಆರೋಗ್ಯ ವಿಮಾ ಯೋಜನೆಯನ್ನು ತಕ್ಷಣದಿಂದಲೇ ಮಾಡಲು ನಿರ್ಧರಿಸಲಾಗಿದೆ ಎಂದರು. 

ಬಹುದಿನಗಳಿಂದ  ನೆನೆಗುದಿಗೆ ಬಿದ್ದಿರುವ ಅಕ್ರಮ ಸಕ್ರಯ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸಲು ಇಂದಿನ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ ಬೆಂಗಳೂರು ನಗರದ ಕಂದಾಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಇರುವ ಕೊಳೆಗೇರಿಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಮೀನುಗಳನ್ನು ಬಹಿರಂಗ ಹರಾಜು ಹಾಕುವುದಿಲ್ಲ. ಬದಲಿಗೆ ಬಿಬಿ‌ಎಂಪಿ, ಬಿಡಿ‌ಎ, ಬಿಡಬ್ಲ್ಯು‌ಎಸ್‌ಎಸ್‌ಬಿ ಯೋಜನೆಗೆ ಬಳಸಲು ಹಾಗೂ ಆಟದ ಮೈದಾನ, ಉದ್ಯಾನವನ ಮತ್ತು ಶಾಲೆಗಳಂತಹ ಸಾರ್ವಜನಿಕ ಉಪಯೋಗಕ್ಕೆ ಬಳಕೆಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಬೆಂಗಳೂರು ನಗರದಲ್ಲಿ ಹಲವು ಯೋಜನೆಗಳು ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದು, ಅವುಗಳಿಗೆ ಚಾಲನೆ ನೀಡಲಾಗುವುದು. ನಗರದ ರಸ್ತೆಗಳ ಅಭಿವೃದ್ಧಿ, ಗುಂಡಿ ಮುಚ್ಚುವ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸೂಚಿಸಲಾಗಿದೆ. ಇದಲ್ಲದೆ ಕೆರೆಗಳು, ಉದ್ಯಾನವನಗಳು, ನೀರು ಸರಬರಾಜು ಮತ್ತು ಒಳಚರಂಡಿ ಯೋಜನಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು. 

ಬಿಬಿ‌ಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಅವುಗಳನು ಬಿಡಿ‌ಎಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.  ಈ ಬಗ್ಗೆ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. 

ಬೆಂಗಳೂರು ಮಹಾನಗರ ಪಾಲಿಕೆ ಕಳೆದ ೧೯ ತಿಂಗಳಲ್ಲಿ ೬,೩೭೮ ಕೋಟಿ ರೂ. ವೆಚ್ಚದ ೨೪,೪೧೨ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ ೧,೪೭೪ ಕೋಟಿ ರೂ. ವೆಚ್ಚದ ೩೮೭೮ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ಜಲಮಂಡಳಿಯಿಂದ ಕಳೆದ ೧೯ ತಿಂಗಳಲ್ಲಿ ೧,೦೭೫ ಕೋಟಿ ರೂ. ವೆಚ್ಚದ ೨೦೬ ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿವೆ ಎಂದು ಹೇಳಿದರು. 


Share: