ಬೆಂಗಳೂರು,ಜನವರಿ 11:ಹೆಚ್ಚುವರಿ ವಿದ್ಯುತ್ನ್ನು ಖರೀದಿಸಿಯಾದರೂ ಕತ್ತಲಲ್ಲಿ ಮುಳುಗಿರುವ ಗ್ರಾಮೀಣ ಪ್ರದೇಶಗಳಿಗೆ ಪ್ರತಿನಿತ್ಯ ೧೨ ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡಬೇಕು ಎಂದು ರಾಜ್ಯದ ರೈತ ಮುಖಂಡರು ಇಂದಿಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದು, ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ಆದರೆ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚುವರಿ ವಿದ್ಯುತ್ನ್ನು ಖರೀದಿಸಿ ಗ್ರಾಮೀಣ ಪ್ರದೇಶಗಳಿಗೆ ಪೂರೈಸಲು ಸಾಧ್ಯವಿಲ್ಲ. ಬದಲಿಗೆ ಲಭ್ಯವಿರುವ ವಿದ್ಯುತ್ನಲ್ಲೇ ಇನ್ನಷ್ಟು ಅನುಕೂಲ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಚಾಮರಾಜನಗರದ ರೈತ ಸಮಸ್ಯೆಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯುತ್ ಪರಿಸ್ಥಿತಿ ಬಗ್ಗೆ ಸುಧೀರ್ಘ ಪ್ರಸ್ತಾಪವಾಯಿತು.
ರೈತ ಮುಖಂಡರಾದ ಕೆ.ಎಸ್.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಸಭೆಯಲ್ಲಿ ಮಾತನಾಡಿದ ರೈತ ಪ್ರಮುಖರು ರಾಜ್ಯದ ಗ್ರಾಮೀಣ ಪ್ರದೇಶಗಳು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.
ಆರಂಭದಲ್ಲಿ ಮಾತನಾಡಿದ ಪುಟ್ಟಣ್ಣಯ್ಯ, ರಾಜ್ಯ ಸರ್ಕಾರ ವಿದ್ಯುತ್ನ್ನು ಆದ್ಯತಾ ವಲಯವನ್ನಾಗಿ ಗುರುತಿಸಬೇಕು. ನೀರಾವರಿಗೆ ಐದಾರು ಸಾವಿರ ಕೋಟಿ ರೂ ಕೊಟ್ಟಂತೆ ಇಂಧನ ಕ್ಷೇತ್ರಕ್ಕೂ ಹೆಚ್ಚುವರಿ ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.
ಇವತ್ತು ಗ್ರಾಮೀಣ ಪ್ರದೇಶಗಳಿಗೆ ಆರು ಗಂಟೆ ಕಾಲ ತ್ರಿ ಫೇಸ್ ವಿದ್ಯುತ್ ನೀಡುತ್ತಿದ್ದೀರಿ. ಅದರಲ್ಲೂ ಎರಡು ಕಂತಿನಲ್ಲಿ ತಲಾ ಮೂರು ಗಂಟೆಗಳಂತೆ ವಿದ್ಯುತ್ ಕೊಡುತ್ತೀರಿ. ಇದರಿಂದ ಕೃಷಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪ ಮಾಡಿದರು.
ಇದರ ಬದಲು ಗ್ರಾಮೀಣ ಪ್ರದೇಶಗಳಲ್ಲಿ ಪಂಪ್ಸೆಟ್ಗಳಿಗೆ ಒಂದೇ ಕಂತಿನಲ್ಲಿ ನಿರಂತರ ವಿದ್ಯುತ್ ಕೊಡಿ. ಕನಿಷ್ಟ ಎಂಟು ಗಂಟೆಯಿಂದ ಗರಿಷ್ಟ ಹನ್ನೆರಡು ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಕೊಡಿ ಎಂದು ಒತ್ತಾಯ ಮಾಡಿದರು.
ನೀವು ರೈತರಿಗೆ ಉಚಿತ ವಿದ್ಯುತ್ ಕೊಡುವುದು ಒಂದು ಕಡೆಯಾದರೆ ಪಂಪ್ಸೆಟ್ ಬಳಕೆದಾರರು ೧.೨೦ ಲಕ್ಷ ಕೋಟಿ ರೂಗಳನ್ನು ಪಂಪ್ಸೆಟ್ ಮೇಲೆ ಬಂಡವಾಳವಾಗಿ ಹೂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ ಇವತ್ತು ನೂರಾ ಹದಿನೆಂಟು ಮಿಲಿಯನ್ ವಿದ್ಯುತ್ ಲಭ್ಯವಿದ್ದು ಅಂತೆಯೇ ಬೇಡಿಕೆಯ ಪ್ರಮಾಣ ನೂರಾ ನಲವತ್ತೆರಡು ಮಿಲಿಯನ್ ಯೂನಿಟ್ಗಳಷ್ಟಿದೆ.ಈ ಕೊರತೆಯನ್ನು ನೀಗುವ ಸಲುವಾಗಿ ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿ ಗ್ರಾಮೀಣ ಪ್ರದೇಶಗಳಿಗೆ ಪೂರೈಸಿ ಎಂದು ಒತ್ತಾಯಿಸಿದರು.
ಇದೇ ರೀತಿ ಪ್ರತೀ ತಾಲ್ಲೂಕಿನಲ್ಲಿ ಲಭ್ಯವಾಗುವ ತ್ಯಾಜ್ಯಗಳಿಂದ ಒಂದು, ಎರಡು, ಮೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡಿದರೆ ಸಮಸ್ಯೆ ಎಷ್ಟೋ ಪಾಲು ಬಗೆಹರಿಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇವತ್ತು ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಳೆಯಿಂದ ಲಭ್ಯವಾಗುವ ನೀರಿನ ಪೈಕಿ ಶೇಕಡಾ ೬೭.೫ ರಷ್ಟು ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ.ಇದನ್ನು ತಡೆಗಟ್ಟಿದರೆ ನೀರಾವರಿ ವ್ಯವಸ್ಥೆಗೆ ತುಂಬ ಪೂರಕವಾಗಲಿದೆ ಎಂದು ಹೇಳಿದರು.
ಇನ್ನು ನೀರನ್ನು ಮಿತವಾಗಿ ಬಳಸಿಕೊಳ್ಳಲು ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶೇಕಡಾ ನೂರರಷ್ಟು ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು ೧೫೦೦ ಮೆಗಾವ್ಯಾಟ್ ವಿದ್ಯುತ್ನ ಕೊರತೆಯಿದ್ದು ಕಾವೇರಿ ನದೀ ಪಾತ್ರದ ವಿದ್ಯುತ್ ಯೋಜನೆಗಳನ್ನು ತಮಿಳುನಾಡಿನ ಜತೆ ಮಾತುಕತೆ ನಡೆಸುವ ಮೂಲಕ ಕೈಗೆತ್ತಿಕೊಂಡರೆ ೬೦೦ ಮೆಗಾವ್ಯಾಟ್ ವಿದ್ಯುತ್ ಪಡೆಯಬಹುದು.
ಉಳಿದಂತೆ ರಾಜ್ಯದಲ್ಲಿರುವ ೫೩ ಸಕ್ಕರೆ ಕಾರ್ಖಾನೆಗಳ ಪೈಕಿ ಕೇವಲ ಒಂಭತ್ತು ಸಕ್ಕರೆ ಕಾರ್ಖಾನೆಗಳಷ್ಟೇ ವಿದ್ಯುತ್ ಸಹಘಟಕಗಳನ್ನು ಸ್ಥಾಪಿಸಿವೆ.ಉಳಿದ ಕಾರ್ಖಾನೆಗಳೂ ಇಂತಹ ಸಹ ವಿದ್ಯುತ್ ಘಟಕಗಳನ್ನು ಸ್ಥಾಪಿಸುವಂತೆ ಸೂಚನೆ ನೀಡುವುದರ ಜತೆಗೆ,ಹೊಸದಾಗಿ ಸ್ಥಾಪನೆಯಾಗುವ ಕಾರ್ಖಾನೆಗಳಿಗೂ ಲೈಸೆನ್ಸ್ ಕೊಡಲು ಇದು ಅಗತ್ಯ ಎಂದು ಹೇಳಬೇಕು.
ಹಾಗೆ ಮಾಡುವ ಮೂಲಕ ಏಳು ನೂರರಿಂದ ಎಂಟು ನೂರು ಮೆಗಾವ್ಯಾಟ್ನಷ್ಟು ವಿದ್ಯುತ್ನ್ನು ಉಳಿಸಬಹುದು ಎಂದು ಇದೇ ಸಂಧರ್ಭದಲಿ ಅಭಿಪ್ರಾಯ ಪಟ್ಟರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್: ಕೈಗಾರಿಕೆಗಳಿಗೆ ಮತ್ತು ಕೃಷಿ ವ್ಯವಸ್ಥೆಗೆ ಕೊಡುವ ವಿದ್ಯುತ್ನಲ್ಲಿ ಅಪಾರ ಅಂತರವಿದೆ ಎಂದರಲ್ಲದೇ ಈ ಅಂತರವನ್ನು ಸರಿಪಡಿಸಬೇಕು ಎಂದು ಹೇಳಿದರು.
ನಗರ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಇಡೀ ರಾತ್ರಿ ಉರಿಸಲಾಗುತ್ತಿದೆ.ಇನ್ನು ಮುಂದೆ ಇದಕ್ಕೆ ವಿದ್ಯುತ್ ನೀಡಬಾರದು. ಅಂತೆಯೇ ರಾಜಕೀಯ ಸಮಾರಂಭಗಳಿಂದ ಹಿಡಿದು ವಿವಿಧ ಸಮಾರಂಭಗಳಿಗಾಗಿ ಕಿಲೋಮೀಟರುಗಟ್ಟಲೆ ಉದ್ದ ಲೈಟಿಂಗ್ಸ್ ಹಾಕಲು ಅನುಮತಿ ನೀಡಬಾರದು ಎಂದು ಅವರು ಹೇಳಿದರು.
ಈ ಮಧ್ಯೆ ಮಾತನಾಡಿದ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ: ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಖರೀದಿಸಿ ಪೂರೈಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಲಭ್ಯವಿರುವ ವಿದ್ಯುತ್ನಲ್ಲೇ ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ವಿದ್ಯುತ್ ಒದಗಿಸಬಹುದು ಎಂಬ ಬಗ್ಗೆ ಪುನ: ರೈತರ ಜತೆ ಕುಳಿತು ಚರ್ಚಿಸುತ್ತೇನೆ. ಬಜೆಟ್ನಲ್ಲಿ ಏನೇನು ಅನುಕೂಲ ಒದಗಿಸಬಹುದೋ ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.