ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಇಸ್ಲಾಮಾಬಾದ್ : ‘ಮಾಧುರಿ ಬಳಿ ಮಹತ್ವದ ಮಾಹಿತಿ ಇರಲಿಲ್ಲ’; ಮಾಧುರಿ ಗುಪ್ತ ಇಸ್ಲಾಂಗೆ ಮತಾಂತರ?

ಇಸ್ಲಾಮಾಬಾದ್ : ‘ಮಾಧುರಿ ಬಳಿ ಮಹತ್ವದ ಮಾಹಿತಿ ಇರಲಿಲ್ಲ’; ಮಾಧುರಿ ಗುಪ್ತ ಇಸ್ಲಾಂಗೆ ಮತಾಂತರ?

Fri, 30 Apr 2010 06:20:00  Office Staff   S.O. News Service
ಇಸ್ಲಾಮಾಬಾದ್ (ಪಿಟಿಐ): 53 ವರ್ಷದ ಮಾಧುರಿ ಆರು ವರ್ಷಗಳ ಹಿಂದೆಯೇ ಶಿಯಾ ಮುಸ್ಲಿಂ ಆಗಿ ಮತಾಂತರವಾಗಿರ ಬಹುದು ಎಂದು ಮಾಧ್ಯಮ ವರದಿಯೊಂದು ಅನುಮಾನ ವ್ಯಕ್ತಪಡಿಸಿದೆ. ‘ಆಕೆ ನಿಜವಾಗಿಯೂ ಇಸ್ಲಾಂ ತತ್ವಗಳಿಂದ ಪ್ರಭಾವಿತಳಾಗಿದ್ದಳು. ಆದರೆ ತನ್ನ ಹೊಸ ಧರ್ಮವನ್ನು ಬಹಿರಂಗಪಡಿಸಲು ಹೆದರಿದ್ದಳು’ ಎಂದು ವರದಿ ಹೇಳಿದೆ. ಆಕೆಯ ಬಂಧುವೊಬ್ಬರು ಲಖನೌದ ಆಶಿಕ್ ಹುಸೇನ್ ಜಾಫ್ರಿ ಎಂಬುವವರ ಕುಟುಂಬದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಇದೇ ಲಖನೌದಲ್ಲಿ, ಬಾಲ್ಯದಲ್ಲಿ ಜಾಫ್ರಿ ಕುಟುಂಬದೊಂದಿಗೆ ಇದ್ದಾಗ ಮಾಧುರಿ ಇಸ್ಲಾಂ ತತ್ವಗಳಿಂದ ಪ್ರೇರಿತರಾಗಿದ್ದರು ಎಂದೂ ಪತ್ರಿಕೆ ಉಲ್ಲೇಖಿಸಿದೆ. ರಂಜಾನ್ ತಿಂಗಳಲ್ಲಿ ಮಾಧುರಿಯು ಷಿಯಾ ಮಹಿಳೆಯರಂತೆ ಕೈಬಳೆ ಮತ್ತು ಕಿವಿಯೋಲೆ ಧರಿಸಿ ಓಡಾಡುತ್ತಿದ್ದುದು ಪತ್ರಕರ್ತ ರೊಬ್ಬರ ಕಣ್ಣಿಗೆ ಬಿದ್ದಿತ್ತು. ಅವರು ಈ ಬಗ್ಗೆ ಕೇಳಿದಾಗ ‘ನಾನು ಉಪವಾಸ ಮಾಡುತ್ತಿದ್ದೇನೆ. ಇಸ್ಲಾಂ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ಆಕೆ ಹೇಳಿದ್ದರು ಎಂದೂ ವರದಿ ತಿಳಿಸಿದೆ ‘ಮಾಧುರಿ ಬಳಿ ಮಹತ್ವದ ಮಾಹಿತಿ ಇರಲಿಲ್ಲ’ ಪಾಕಿಸ್ತಾನದ ಐಎಸ್‌ಐಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಭಾರತದ ಅಧಿಕಾರಿ ಮಾಧುರಿ ಗುಪ್ತ ಬಳಿ ಮಹತ್ವದ ಮಾಹಿತಿಗಳು ಲಭ್ಯವಿರಲಿಲ್ಲ ಎಂದು ಸರ್ಕಾರ ಗುರುವಾರ ತಿಳಿಸಿದೆ. ನವದೆಹಲಿ (ಪಿಟಿಐ): ‘ಈ ಅಧಿಕಾರಿಯ ಹುದ್ದೆ ಮಹತ್ವದ ಮಾಹಿತಿ ಪಡೆಯಲು ಅವಕಾಶ ಕಲ್ಪಿಸುವುದಿಲ್ಲ. ಅಧಿಕಾರಿ ಈಗ ನಮ್ಮ ತನಿಖೆಗೆ ಸಹಕರಿಸುತ್ತಿದ್ದಾರೆ’ ಎಂದು ವಿದೇಶಾಂಗ ವ್ಯವಹಾರ ರಾಜ್ಯ ಸಚಿವೆ ಪ್ರಿಣೀತ್ ಕೌರ್ ಲೋಕಸಭೆಗೆ ತಿಳಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಸಹಾಯಕ ಕಾರ್ಯದರ್ಶಿಯಾದ ಮಾಧುರಿ ಗುಪ್ತ ಅವರ ಹೆಸರು ಪ್ರಸ್ತಾಪಿಸದ ಸಚಿವರು, ‘ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ಭದ್ರತಾ ಕಾರಣಗಳಿಂದಾಗಿ ಹೆಚ್ಚಿನ ಮಾಹಿತಿ ನೀಡುವುದು ಅಸಾಧ್ಯ. ಆದರೆ ಅಧಿಕಾರಿ ಐಎಸ್‌ಐಗೆ ಮಾಹಿತಿ ರವಾನಿಸುತ್ತಿದ್ದುದು ನಿಜ’ ಎಂದು ಹೇಳಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಘಟಕ ಇತ್ತೀಚೆಗೆ ಬಂಧಿಸಿರುವ ಗುಪ್ತ ಐಎಫ್‌ಎಸ್- ಬಿ ಶ್ರೇಣಿಯ ಅಧಿಕಾರಿ. ಜಮ್ಮು ವರದಿ: ಈ ನಡುವೆ, ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಂಸ್ಥೆಗಳು ರಾಜೌರಿ ಜಿಲ್ಲೆಯ ಸುಂದರಬನಿಯಲ್ಲಿರುವ ವೈದ್ಯ ದಂಪತಿಯ ವಿಚಾರಣೆ ನಡೆಸಿದ್ದಾರೆ. ಡಾ. ಖೇಮ್‌ರಾಜ್ ಶರ್ಮ ಹಾಗೂ ಅವರ ಪತ್ನಿ ಡಾ. ಚಂಪಾ ಶರ್ಮ ಅವರನ್ನು ಅಧಿಕಾರಿಗಳ ತಂಡ ಬುಧವಾರ ರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ತೀವ್ರ ವಿಚಾರಣೆಗೆ ಒಳಪಡಿಸಿತು ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಚಂಪಾ ಶರ್ಮ ನೀಡಿದ ಮಾಹಿತಿ ಹೀಗಿದೆ: ಮಾಧುರಿ ಗುಪ್ತ ಪಾಕಿಸ್ತಾನ ನೋಂದಣಿಯ ಟೊಯೊಟಾ ವಾಹನದಲ್ಲಿ ವಾಘಾ ಗಡಿ ದಾಟಿ ಸುಂದರಬನಿಯಲ್ಲಿರುವ ಚಂಪಾ ಅವರ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರ ನಿಕಟ ಸ್ನೇಹಿತೆ ಡಾ. ಪ್ರೇಮಲತಾ ಅವರೂ ಬಂದಿದ್ದು ಎಲ್ಲರೂ ಜಮ್ಮುವಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಒಂದು ದಿನದ ಬಳಿಕ ಗುಪ್ತ ಪಾಕಿಸ್ತಾನಕ್ಕೆ ಹಾಗೂ ಡಾ. ಪ್ರೇಮಲತಾ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದರು. ಆ ಬಳಿಕ ಚಂಪಾ ಅವರ ಮನೆಗೆ ಬಂದಿದ್ದ ಸೇನಾ ತನಿಖಾ ದಳದ ಅಧಿಕಾರಿಗಳು ಗುಪ್ತ ಅವರು ಬಂದಿದ್ದ ವಾಹನದ ಬಗ್ಗೆ ಮಾಹಿತಿ ಪಡೆದಿದ್ದರು. ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ತಮ್ಮ ಸಹಪಾಠಿಯಾಗಿದ್ದ ಪ್ರೇಮಲತಾ ಅವರ ಮೂಲಕ ಚಂಪಾ ಅವರಿಗೆ ಮಾಧುರಿಯ ಪರಿಚಯವಾಗಿತ್ತು. ಅವರಿಬ್ಬರ ನಡುವೆ ದೂರವಾಣಿ ಸಂಪರ್ಕ ಇತ್ತಾದರೂ ಇ- ಮೇಲ್ ವ್ಯವಹಾರ ಇರಲಿಲ್ಲ. ಚಂಪಾ ಈಗ್ಗೆ 10- 15 ದಿನಗಳ ಹಿಂದಷ್ಟೇ ಇ- ಮೇಲ್ ಅಕೌಂಟ್ ತೆರೆದಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ ಹೆಸರು ಕೇಳಿಬಂದಿರುವ ಸೇನಾ ಅಧಿಕಾರಿ ಚಂಪಾ ಅವರ ಸಹೋದರ. ಹಿರಿಯ ಅಧಿಕಾರಿಯಾಗಿರುವ ಅವರು ಮೀರಟ್‌ನಲ್ಲಿ ಕಾರ್ಯ ನಿಯೋಜಿತರಾಗಿದ್ದಾರೆ. ‘ವೈದ್ಯ ದಂಪತಿ ತನಿಖೆಗೆ ಸಹಕರಿಸುತ್ತಿದ್ದು ಪ್ರಕರಣದಲ್ಲಿ ಅವರು ಷಾಮೀಲಾಗಿರುವ ಸಾಧ್ಯತೆ ಕಡಿಮೆ’ ಎಂದು ಮೂಲಗಳು ಹೇಳಿವೆ.

Share: