ಭಟ್ಕಳ, ಅಕ್ಟೋಬರ್ 5 : ದಿನಗಳೆದಂತೆ ವಿಶ್ವ ಎನ್ನುವುದು ಚಿಕ್ಕ ಹಳ್ಳಿಯ ಆಕಾರಕ್ಕೆ ಪರಿವರ್ತನೆ ಹೊಂದುತ್ತಿದ್ದು, ಜ್ಞಾನ ಗಳಿಕೆಯ ಸಕಲ ಸೌಲಭ್ಯಗಳು ಕೈ ಬೆರಳಿನಲ್ಲಿ ಬಂದು ಕುಳಿತುಕೊಂಡಿದೆ. ಕೇವಲ ಅಂಕಗಳಾಧಾರಿತ ಅವಕಾಶಗಳು ಜ್ಞಾನ ಕೇಂದ್ರಿತ ಸಮಾಜದಲ್ಲಿ ಶೂನ್ಯದೆಡೆಗೆ ಸಾಗಿದ್ದು, ವ್ಯಕ್ತಿಗತ ಸಾಮರ್ಥ್ಯಗಳೇ ಪ್ರಮುಖವಾಗಿವೆ ಎಂದು ಎನ್ಎಮ್ಎಎಮ್ಐಟಿ-ಎನ್ಐಟಿಟಿಇ ಇದರ ಪ್ರಾಚಾರ್ಯ ಡಾ.ಎಸ್.ವಾಯ್ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಇಲ್ಲಿಯ ಅಂಜುಮನ್ ಇಂಜಿನೀಯರಿಂಗ ಕಾಲೇಜು ಆವರಣದಲ್ಲಿ ನಡೆದ ಪ್ರಥಮ ವರ್ಷದ ಎಮ್.ಬಿ.ಎ. ವಿಭಾಗದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಆಯ್ಕೆಯ ನಂತರ ಗುರಿಯೊಂದೇ ಮುಖ್ಯವಾಗುತ್ತದೆ. ಪರ ಪ್ರೇರಣೆಗೆ ವಿದ್ಯಾರ್ಥಿಗಳು ಶರಣಾಗದೇ ಸ್ವಪ್ರೇರಣೆಯಿಂದ ಮುಂದೆ ಬರಲು ಪ್ರಯತ್ನಿಸಬೇಕು ಎಂದ ಅವರು ಇಡೀ ವಿಶ್ವವೇ ಇಂದು ಭಾರತದತ್ತ, ಅದರಲ್ಲಿಯೂ ಬೆಂಗಳೂರಿನೆಡೆಗೆ ದೃಷ್ಟಿ ಹರಿಸುತ್ತಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ತರಬೇತಿ ಸಂಚಾಲಕ ಜವಾಹರ್ ಸಿದ್ದೀಕ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನಸಿರಬೇಕು. ನಿಲ್ಲದ ಪ್ರಯತ್ನಗಳು ಮನುಷ್ಯನನ್ನು ಎತ್ತರಕ್ಕೇರಿಸುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುರೆಹೀಮ್ ಜುಕಾಕೋ, ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬರಬೇಕು. ಹಣದ ಬೆನ್ನು ಹತ್ತಿ ಹೋಗದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಇಸ್ಮೈಲ್ ಸಿದ್ದೀಕ್ ಸಾಹೇಬ್, ಕಾಶೀಮ್ಜಿ ಅನ್ಸಾರ್ ಸಾಹೇಬ್, ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ನೂರ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು. ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ದಾಮ್ದಾ ಹಸನ್ ಶಬ್ಬರ್ ಸಾಹೇಬ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಸೀಮ್ ರಾಜಾ ಎಲ್ಲರನ್ನೂ ಸ್ವಾಗತಿಸಿದರು. ಉದಯ ಪ್ರಸನ್ನ ವಂದನಾರ್ಪಣೆ ಗೈದರು.